ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಉತ್ತರ ಪ್ರದೇಶ ಟೆಕ್ಕಿಯೊಬ್ಬರ ಸಾವಿನ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆ ನಡೆಯುತ್ತಿದೆ. ವರದಕ್ಷಿಣೆ ಕಿರುಕುಳ ಮತ್ತು ಹಲ್ಲೆ ಆರೋಪದ ಮೇಲೆ ಅವರ ಪತ್ನಿ 2022 ರ ಪೊಲೀಸ್ ದೂರಿನ ವಿವರಗಳು ಇದೀಗ ಮಾಧ್ಯಮಗಳಲ್ಲಿ ಬಹಿರಂಗವಾಗಿದೆ.
ಏಪ್ರಿಲ್ 24, 2022 ರಂದು ಉತ್ತರ ಪ್ರದೇಶದ ಜೌನ್‌ಪುರದಲ್ಲಿ ನಿಕಿತಾ ಸಿಂಘಾನಿಯಾ ಅವರು ನೀಡಿದ ದೂರಿನಲ್ಲಿ, “ಅತುಲ್ ಸುಭಾಷ್ ತನಗೆ ಥಳಿಸುತ್ತಿದ್ದರು, ಪತಿ-ಪತ್ನಿ ಸಂಬಂಧವನ್ನು ಮೃಗದಂತೆ ಪರಿಗಣಿಸಲು ಪ್ರಾರಂಭಿಸಿದರು” ಎಂದು ಆರೋಪಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ತನ್ನ ಪತಿ, ಆತನ ತಂದೆ-ತಾಯಿ ಮತ್ತು ಸೋದರ ಮಾವಂದಿರನ್ನು ನಿಕಿತಾ ತನ್ನ ದೂರಿನಲ್ಲಿ ಆರೋಪಿಗಳೆಂದು ಉಲ್ಲೇಖಿಸಿದ್ದಾರೆ. ನಂತರ, ವರದಕ್ಷಿಣೆ ನಿಷೇಧ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಯಿತು. ಜೌನ್‌ಪುರ ಮೂಲದ ನಿಕಿತಾ ಅವರು ಬಿಹಾರ ಮೂಲದ ಸುಭಾಷ್ ಅವರನ್ನು 2019 ರಲ್ಲಿ ವಿವಾಹವಾದರು. ಅವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು.
ಮದುವೆಯ ನಂತರ ಸುಭಾಷ್ ಮತ್ತು ಆಕೆಯ ಅತ್ತೆ, ತಂದೆ-ತಾಯಿ ಕೊಟ್ಟ ವರದಕ್ಷಿಣೆಗೆ ತೃಪ್ತರಾಗದ ಕಾರಣ, 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂದು ನಿಕಿತಾ ದೂರಿನಲ್ಲಿ ಆರೋಪಿಸಿದ್ದಾರೆ. ವರದಕ್ಷಿಣೆಗಾಗಿ ತನ್ನ ಗಂಡನ ಸಹೋದರರು ತನ್ನನ್ನು ದೈಹಿಕ ಮತ್ತು ಮಾನಸಿಕವಾಗಿ ಹಿಂಸಿಸಲು ಪ್ರಾರಂಭಿಸಿದರು ಎಂದು ಅವರು ಆರೋಪಿಸಿದ್ದಾರೆ.
ತನ್ನ ಕಷ್ಟವನ್ನು ತನ್ನ ಹೆತ್ತವರೊಂದಿಗೆ ಹಂಚಿಕೊಂಡರೂ, ಆತನೊಂದಿಗೆ ಸಹಕರಿಸಿಕೊಂಡು ಹೋಗು ಎಂದು ಅವರು ಸಲಹೆ ನೀಡಿದರು ಎಂದು ನಿಕಿತಾ ದೂರಿನಲ್ಲಿ ತಿಳಿಸಿದ್ದಾರೆ. ಆದರೆ, ಪರಿಸ್ಥಿತಿ ಸುಧಾರಿಸಲಿಲ್ಲ. ಪತಿ ತನಗೆ ಬೆದರಿಕೆ ಹಾಕಿ, ಥಳಿಸಲು ಪ್ರಾರಂಭಿಸಿದರು ಎಂದು ಹೇಳಿಕೊಂಡಿದ್ದಾರೆ.
“ನನ್ನ ಪತಿ ಮದ್ಯ ಸೇವಿಸಿ ನನ್ನನ್ನು ಥಳಿಸಲು ಪ್ರಾರಂಭಿಸಿದನು, ನನ್ನೊಂದಿಗೆ ಪತಿ-ಪತ್ನಿ ಸಂಬಂಧವನ್ನು ಮೃಗವಾಗಿ ನಡೆಸಲಾರಂಭಿಸಿದನು. ಅವನು ನನಗೆ ಬೆದರಿಕೆ ಹಾಕುವ ಮೂಲಕ ನನ್ನ ಖಾತೆಯಿಂದ ನನ್ನ ಸಂಪೂರ್ಣ ಸಂಬಳವನ್ನು ಅವನ ಖಾತೆಗೆ ವರ್ಗಾಯಿಸುತ್ತಿದ್ದನು” ಎಂದು ನಿಕಿತಾ ದೂರಿನಲ್ಲಿ ಹೇಳಿದ್ದಾರೆ.
ನನ್ನ ಅತ್ತೆಯರಿಂದ ಪದೇಪದೆ ಕಿರುಕುಳವು ತನ್ನ ತಂದೆಯ ಆರೋಗ್ಯದಲ್ಲಿ ಕ್ಷೀಣಿಸಲು ಕಾರಣವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ. ಅವರು ಆಗಸ್ಟ್ 17, 2019 ರಂದು ಪಾರ್ಶ್ವವಾಯುವಿನಿಂದ ನಿಧನರಾದರು.
ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಭಾಷ್ ಪತ್ನಿ ಹಾಗೂ ಕುಟುಂಬ ಸದಸ್ಯರ ಕಿರುಕುಳದ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ವೈವಾಹಿಕ ಸಮಸ್ಯೆಗಳಿಂದ ಭಾವನಾತ್ಮಕ ಯಾತನೆ ಮತ್ತು ಅವರ ಪತ್ನಿ ಅವರ ವಿರುದ್ಧ ಅನೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ವಿವರಿಸುವ 24 ಪುಟಗಳ ಆತ್ಮಹತ್ಯೆ ಟಿಪ್ಪಣಿ ಬರೆದು ಹೋಗಿದ್ದಾರೆ. ನಿಕಿತಾ ಮತ್ತು ಆಕೆಯ ಕುಟುಂಬ ಸದಸ್ಯರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ.
10 ಲಕ್ಷ ರೂಪಾಯಿ ವರದಕ್ಷಿಣೆಗಾಗಿ ಕುಟುಂಬ ಬೇಡಿಕೆ ಇಟ್ಟಿದ್ದರಿಂದ ಆಘಾತದಿಂದ ತಂದೆ ನಿಧನರಾಗಿದ್ದಾರೆ ಎಂಬ ನಿಕಿತಾ ಅವರ ಹೇಳಿಕೆ ಸುಳ್ಳು ಎಂದು ಸುಭಾಷ್ ತಮ್ಮ ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನಿಕಿತಾ ಅವರ ತಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ; ಛತ್ತೀಸ್‌ಗಢದ ನಾರಾಯಣಪುರದಲ್ಲಿ ಎನ್‌ಕೌಂಟರ್; ಏಳು ಮಾವೋವಾದಿಗಳು ಹತ


