ತಮಿಳುನಾಡಿನ ದಿಂಡಿಗಲ್‌ನ ತಿರುಚ್ಚಿ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ(ಡಿ.12) ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಅನಾಹುತ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಮೂಳೆ ಚಿಕಿತ್ಸೆಯ ಸಿಟಿ ಆಸ್ಪತ್ರೆಯ ರಿಸೆಶ್ಷನ್ ಪ್ರದೇಶದಲ್ಲಿ ಗುರುವಾರ ರಾತ್ರಿ 9 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಅದು ಇಡೀ ಆಸ್ಪತ್ರೆ ಕಟ್ಟಡಕ್ಕೆ ಆವರಿಸಿದೆ. ಇದರಿಂದ ಉಸಿರುಗಟ್ಟಿ ಮಗು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವಘಡದ ವೇಳೆ 6 ಮಂದಿ ಲಿಫ್ಟ್‌ನಲ್ಲಿ ಸಿಲುಕಿದ್ದರು. ಅವರು ಉಸಿರಾಟದ ಸಮಸ್ಯೆ ಒಳಗಾಗಿದ್ದರು. ತಕ್ಷಣ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂಳೆ ಚಿಕಿತ್ಸೆಗೆಂದು ಆಗಮಿಸಿದ್ದ ಸುಮಾರು 29 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದಿಂಡಿಗಲ್ ಜಿಲ್ಲಾಧಿಕಾರಿ ಪೂಂಗೊಡಿ ಹೇಳಿದ್ದಾರೆ.
ತೇಣಿ ಜಿಲ್ಲೆಯ 50 ವರ್ಷದ ಸುರುಳಿ, ಅವರ ಪತ್ನಿ 45 ವರ್ಷದ ಸುಬ್ಬುಲಕ್ಷಿ, ದಿಂಡಿಗಲ್ ಜಿಲ್ಲೆಯ 50 ವರ್ಷದ ಮರಿಯಮ್ಮಲ್, ಅವರ ಮಗ 28 ವರ್ಷದ ಮಣಿ ಮುರುಗಣ್, 35 ವರ್ಷದ ರಾಜಶೇಖರ್, ಮತ್ತೊಬ್ಬರು ಹೆಣ್ಣು ಮಗು ದುರಂತದಲ್ಲಿ ಬಲಿಯಾದವರು ಎಂದು ತಿಳಿದು ಬಂದಿದೆ.
ರಕ್ಷಣಾ ಸಿಬ್ಬಂದಿ ಸುಮಾರು 1 ಗಂಟೆಗಳ ಕಾಲ ಹರಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು ಎಂದು ವರದಿಗಳು ಹೇಳಿವೆ.
ಪೊಲೀಸ್ ತಂಡ ಘಟನೆಯ ಕುರಿತು ತನಿಖೆ ಕೈಗೊಂಡಿದೆ. ದುರಂತದ ಕಾರಣ ಹುಡುಕುವ ಪ್ರಯತ್ನ ಮಾಡುತ್ತಿದೆ ಎಂದು ದಿಂಡಿಗಲ್ ಜಿಲ್ಲಾ ಎಸ್ಪಿ ಎ ಪ್ರದೀಪ್ ತಿಳಿಸಿದ್ದಾರೆ.ತಮಿಳುನಾಡು ಗ್ರಾಮೀಣಾಭಿವೃದ್ದಿ ಸಚಿವ ಐ ಪೆರಿಯಸ್ವಾಮಿ ಗಾಯಾಳುಗಳನ್ನು ಮತ್ತು ಸ್ಥಳೀಯ ಆಸ್ಪತ್ರೆಗೆ ವರ್ಗಾಯಿಸಿದ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.


