ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಕಾರ್ಯಕ್ರಮದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಅಲಹಾಬಾದ್ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರನ್ನು ವಾಗ್ದಂಡನೆಗೆ ಗುರಿಪಡಿಸುವಂತೆ ರಾಜ್ಯಸಭೆಯಲ್ಲಿ ನೋಟಿಸ್ ನೀಡಲಾಗಿದೆ.
ವರದಿಗಳ ಪ್ರಕಾರ, ಕಪಿಲ್ ಸಿಬಲ್, ವಿವೇಕ್ ಟಂಖಾ, ದಿಗ್ವಿಜಯ ಸಿಂಗ್, ಜಾನ್ ಬ್ರಿಟ್ಟಾಸ್, ಮನೋಜ್ ಕುಮಾರ್ ಝಾ ಮತ್ತು ಸಾಕೇತ್ ಗೋಖಲೆ ಸೇರಿದಂತೆ ಪ್ರತಿಪಕ್ಷಗಳ 55 ಸದಸ್ಯರು ವಾಗ್ದಂಡನೆ ನೋಟಿಸ್‌ಗೆ ಸಹಿ ಹಾಕಿದ್ದಾರೆ.
ನಿಯಮಗಳ ಪ್ರಕಾರ, ಸುಮಾರು 50 ಸಂಸದರ ಸಹಿ ಅಗತ್ಯವಿದೆ. ಆದರೆ, ಇಲ್ಲಿ ಹೆಚ್ಚುವರಿಯಾಗಿ 5 ಸಂಸದರು ಸಹಿ ಹಾಕಿದ್ದಾರೆ.
“ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ವಿಹೆಚ್‌ಪಿ ಕಾರ್ಯಕ್ರಮದಲ್ಲಿ ಮಾಡಿದ ಭಾಷಣ ದ್ವೇಷದಿಂದ ಕೂಡಿತ್ತು. ಪೂರ್ವಾಗ್ರಹ ಪೀಡತವಾಗಿತ್ತು. ಅಲ್ಪಸಂಖ್ಯಾತರನ್ನು ನೇರವಾಗಿ ಗುರಿಯಾಗಿಸಲಾಗಿದೆ” ಎಂದು ವಾಗ್ದಂಡನೆ ನೋಟಿಸ್‌ನಲ್ಲಿ ಆರೋಪಿಸಲಾಗಿದೆ.
ಬಹುಸಂಖ್ಯಾತರ ಅಪೇಕ್ಷೆಯಂತೆ ಈ ದೇಶ ನಡೆಯಲಿದೆ ಎಂಬ ನ್ಯಾಯಮೂರ್ತಿ ಯಾದವ್ ಅವರ ಹೇಳಿಕೆ, ಮುಸ್ಲಿಂ ಸಮುದಾಯದ ವಿರುದ್ಧದ ಅವರ ಟೀಕೆಗಳು ಮತ್ತು “ಕಠ್ಮುಲ್ಲಾ” ಎಂಬ ಪದ ಬಳಕೆಯನ್ನು ಉಲ್ಲೇಖಿಸಿ ವಾಗ್ದಂಡನೆ ನೋಟಿಸ್ ನೀಡಲಾಗಿದೆ.
ನ್ಯಾ. ಯಾದವ್ ಅವರು ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಮಾಡಿರುವ ಪ್ರತಿಜ್ಞೆ ಮತ್ತು ಸಂವಿಧಾನದ ಜಾತ್ಯತೀತ ತತ್ವಗಳನ್ನು ಉಲ್ಲಂಘಿಸಿದ್ದಾರೆ. “ಸಣ್ಣ ವಯಸ್ಸಿನಲ್ಲಿಯೇ ಪ್ರಾಣಿಗಳ ಹತ್ಯೆಯನ್ನು ನೋಡುವುದರಿಂದ ಮುಸ್ಲಿಂ ಮಕ್ಕಳು ದಯೆ ತೋರುತ್ತಾರೆ ಎಂದು ನಿರೀಕ್ಷಿಸುವಂತಿಲ್ಲ” ಎಂಬ ಅವರ ಹೇಳಿಕೆಗೆ ಆಕ್ಷೇಪಾರ್ಹವಾಗಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ವಿಭಜಕ ಮತ್ತು ಪೂರ್ವಾಗ್ರಹ ಪೀಡಿತ ಹೇಳಿಕೆಗಳನ್ನು ನೀಡುವ ಮೂಲಕ ನ್ಯಾಯಮೂರ್ತಿ ಯಾದವ್ ಅವರು ನ್ಯಾಯಾಂಗದ ಮೇಲೆ ಸಾರ್ವಜನಿಕರು ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿದ್ದಾರೆ. ರಾಮ ಜನ್ಮಭೂಮಿ ಆಂದೋಲನಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ಹೇಳಿಕೆಗಳು ರಾಜಕೀಯ ಸ್ವರೂಪದ್ದಾಗಿದ್ದು, ನ್ಯಾಯಾಂಗದ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತದೆ. ತಟಸ್ಥ ಮಧ್ಯಸ್ಥಗಾರ ಮತ್ತು ಹಕ್ಕುಗಳ ರಕ್ಷಕನಾಗಿ ನ್ಯಾಯಾಧೀಶರು ನೀಡಿರುವ ಹೇಳಿಕೆ ನ್ಯಾಯಾಂಗಕ್ಕೆ ಅಪಾಯವನ್ನುಂಟುಮಾಡುತ್ತವೆ ಎಂದು ವಾಗ್ದಂಡನೆ ನೋಟಿಸ್ ಅಸಮಾಧಾನ ವ್ಯಕ್ತಪಡಿಸಿದೆ.
ವಿಧಿ 124(4) ಮತ್ತು 124(5) ರೊಂದಿಗೆ ಓದಲಾಗುವ ಭಾರತದ ಸಂವಿಧಾನದ ವಿಧಿ 217(1)(ಬಿ) ಮತ್ತು ವಿಧಿ 218ರ ಪ್ರಕಾರ, ನ್ಯಾಯಾಂಗ ನೀತಿಗಳು, ನಿಷ್ಪಕ್ಷಪಾತ ಮತ್ತು ನ್ಯಾಯಾಂಗದಲ್ಲಿ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ದುರ್ಬಲಗೊಳಿಸುವ ನಡೆಯ ಆಧಾರದ ಮೇಲೆ ನ್ಯಾಯಾಧೀಶರನ್ನು ಹುದ್ದೆಯಿಂದ ತೆಗೆದು ಹಾಕಬಹುದು.
ಲೋಕಸಭೆಯಲ್ಲೂ ಸಂಸದ ಅಸಾದುದ್ದೀನ್ ಓವೈಸಿ ನ್ಯಾ. ಶೇಖರ್ ಯಾದವ್ ಪದಚ್ಯುತಿಗೆ ಆಗ್ರಹಿಸಿ ನೋಟಿಸ್ ನೀಡಿದ್ದಾರೆ. ಅದಕ್ಕೆ 100 ಸಂಸದರ ಸಹಿಯ ಅಗತ್ಯವಿದೆ.
ಸಿಜೆಐ ಸಂಜೀವ್ ಖನ್ನಾ ಅವರಿಗೆ ಹಲವು ದೂರುಗಳು ಬಂದಿರುವ ಹಿನ್ನೆಲೆ ಶೇಖರ್ ಯಾದವ್ ಅವರ ಭಾಷಣದ ಕುರಿತು ಸುಪ್ರೀಂ ಕೋರ್ಟ್ ಅಲಹಾಬಾದ್ ಹೈಕೋರ್ಟ್‌ನಿಂದ ಮಾಹಿತಿ ಕೋರಿದೆ.
ಇದನ್ನೂ ಓದಿ : ‘ಒಬ್ಬ ವ್ಯಕ್ತಿಗಾಗಿ 142 ಕೋಟಿ ಜನರನ್ನು ಕಡೆಗಣಿಸಲಾಗಿದೆ’ : ಪ್ರಿಯಾಂಕಾ ಗಾಂಧಿ


