ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಇಬ್ಬರು ಪ್ರಮುಖ ಆರೋಪಿಗಳು ಜಾಮೀನು ಪಡೆದ ಒಂದು ದಿನದ ನಂತರ, ಎಡಪಕ್ಷಗಳು ಮತ್ತು ಕಾಂಗ್ರೆಸ್ ಶನಿವಾರ ಕೋಲ್ಕತ್ತಾದ ವಿವಿಧ ಸ್ಥಳಗಳಲ್ಲಿ ಪ್ರತಿಭಟನಾ ರ‍್ಯಾಲಿಗಳನ್ನು ನಡೆಸಿದವು. “ಪ್ರಕರಣದಲ್ಲಿ ನ್ಯಾಯ ಒದಗಿಸುವಲ್ಲಿ ಸಿಬಿಐ ವಿಫಲವಾಗಿದೆ” ಎಂದು ಆರೋಪಿಸಿವೆ.
ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ನೇತೃತ್ವದ ಕೇಂದ್ರವು ಪ್ರಕರಣದ ಬಗ್ಗೆ “ಮೌನ ತಾಳಿದೆ” ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷವು, ರವೀಂದ್ರ ಸದನ್ ಪ್ರದೇಶದಿಂದ ದಕ್ಷಿಣ ಕೋಲ್ಕತ್ತಾದ ನಿಜಾಮ್ ಪ್ಯಾಲೇಸ್‌ನಲ್ಲಿರುವ ಸಿಬಿಐ ಕಚೇರಿವರೆಗೆ ಮೆರವಣಿಗೆ ನಡೆಸಿತು. ಪ್ರಕರಣದ ಇಬ್ಬರು ಆರೋಪಿಗಳ ವಿರುದ್ಧ ಆರೋಪಗಳನ್ನು ಹೊರಿಸಲು ಅಸಮರ್ಥತೆಗಾಗಿ ಕೇಂದ್ರ ತನಿಖಾ ಸಂಸ್ಥೆಯನ್ನು ಟೀಕಿಸಿತು.
ಕಾಂಗ್ರೆಸ್ ಕಾರ್ಯಕರ್ತರನ್ನು ನಿಜಾಮ್ ಅರಮನೆಗೆ ಪ್ರವೇಶಿಸದಂತೆ ಪೊಲೀಸರು ತಡೆದಿದ್ದು, ಪ್ರತಿಭಟನಾಕಾರರು ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.
ಪಶ್ಚಿಮ ಬಂಗಾಳದ ಜೂನಿಯರ್ ಡಾಕ್ಟರ್ಸ್ ಫ್ರಂಟ್ (ಡಬ್ಲ್ಯುಬಿಜೆಡಿಎಫ್) ಆಯೋಜಿಸಿದ್ದ ರ‍್ಯಾಲಿಯಲ್ಲಿ ನೂರಾರು ಜನರು ಸಾಲ್ಟ್ ಲೇಕ್ ಪ್ರದೇಶದ ಸಿಜಿಒ ಕಾಂಪ್ಲೆಕ್ಸ್‌ನಲ್ಲಿರುವ ಮತ್ತೊಂದು ಸಿಬಿಐ ಕಚೇರಿವರೆಗೆ ಒಂದು ಕಿಲೋಮೀಟರ್ ದೂರವನ್ನು ಕ್ರಮಿಸಿದರು.
ಆಗಸ್ಟ್ 9 ರಂದು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಎಲ್ಲ ಆರೋಪಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಆರೋಪಗಳನ್ನು ರೂಪಿಸುವಲ್ಲಿ ವಿಳಂಬ ಮಾಡಿದ್ದನ್ನು ಪ್ರತಿಭಟಿಸಲು ಜೂನಿಯರ್ ವೈದ್ಯರ ವೇದಿಕೆಯು ಮೆರವಣಿಗೆಯನ್ನು ಆಯೋಜಿಸಿತು.
ಮೃತ ವೈದ್ಯೆಯ ಪೋಷಕರು ಕೂಡ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. “ನಾವು ನ್ಯಾಯಕ್ಕಾಗಿ ಹೋರಾಡುತ್ತೇವೆ; ಅದು ನಮ್ಮ ಹಕ್ಕು” ಎಂದು ಮೃತ ವೈದ್ಯರ ತಾಯಿ ಹೇಳಿದರು.
ಒಂದು ವೇಳೆ ವ್ಯವಸ್ಥೆ ವಿಫಲವಾದರೆ, ನ್ಯಾಯ ಒದಗಿಸಲು ನಾವು ಕಾರ್ಯೋನ್ಮುಖರಾಗುತ್ತೇವೆ ಎಂಬ ಭಿತ್ತಿಪತ್ರಗಳನ್ನು ಪ್ರತಿಭಟನಾಕಾರರು ಹಿಡಿದಿದ್ದರು. ಪ್ರತ್ಯೇಕ ರ್ಯಾಲಿಯಲ್ಲಿ, ಎಸ್‌ಯುಸಿಐ (ಕಮ್ಯುನಿಸ್ಟ್) ಕಾರ್ಯಕರ್ತರು ಕರುಣಾಮೊಯಿಯಿಂದ ಸಾಲ್ಟ್ ಲೇಕ್‌ನಲ್ಲಿರುವ ಸಿಜಿಒ ಕಾಂಪ್ಲೆಕ್ಸ್‌ಗೆ ಮೆರವಣಿಗೆ ನಡೆಸಿದರು. ಆದರೆ, ಸಿಪಿಐ(ಎಂ) ನ ವಿದ್ಯಾರ್ಥಿ ಘಟಕವಾದ ಎಸ್‌ಎಫ್‌ಐನಿಂದ ಉತ್ತರ ನಗರ ಭಾಗದ ಕಾಲೇಜ್ ಸ್ಟ್ರೀಟ್ ಪ್ರದೇಶದಲ್ಲಿ ರ್ಯಾಲಿ ನಡೆಯಿತು.
ಕರ್ತವ್ಯ ನಿರತ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕೋಲ್ಕತ್ತಾದ ಸೀಲ್ದಾ ನ್ಯಾಯಾಲಯವು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್, ತಾಲಾ ಪೊಲೀಸ್ ಠಾಣೆಯ ಮಾಜಿ ಅಧಿಕಾರಿ ಅಭಿಜಿತ್ ಮೊಂಡಲ್‌ಗೆ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಕಡ್ಡಾಯವಾಗಿ 90 ದಿನಗಳ ಅವಧಿಯಲ್ಲಿ ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಸಿಬಿಐ “ವಿಫಲವಾದ” ನಂತರ ಅವರಿಗೆ ಜಾಮೀನು ನೀಡಲಾಯಿತು.
ಇದನ್ನೂ ಓದಿ; ಉತ್ತರ ಪ್ರದೇಶ: ಭೂ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ನಕಲಿ ನೋಟಿಸ್ ಕಳುಹಿಸಿದ ಅಪರಿಚಿತರು!


