ತಬಲಾ ಮಾಂತ್ರಿಕ ಝಾಕಿರ್ ಹುಸೈನ್ (73) ಅವರು ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಯುಎಸ್‌ನ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಿಧನರಾಗಿದ್ದಾರೆ.
ಝಾಕಿರ್ ಹುಸೈನ್ ಸಾವಿನ ಕುರಿತು ನಿನ್ನೆಯೇ (ಡಿ.15) ಸುದ್ದಿ ಹೊರಬಿದ್ದಿತ್ತು. ಆದರೆ, ಅದನ್ನು ಅಲ್ಲಗಳೆದಿದ್ದ ಅವರ ಕುಟುಂಬ. ಝಾಕಿರ್ ಇನ್ನೂ ತೀವ್ರ ನಿಗಾ ಘಟಕ (ಐಸಿಯು)ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿತ್ತು. ಆದರೆ, ಇಂದು (ಡಿ.16) ಅವರು ಮೃತಪಟ್ಟಿರುವುದನ್ನು ಕುಟುಂಬಸ್ಥರು ಖಚಿತಪಡಿಸಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಗ್ರ್ಯಾಮಿ ಪ್ರಶಸ್ತಿ ಪುರಸ್ಕತರಾದ ಝಾಕಿರ್ ಹುಸೈನ್ ಅವರು ಕಳೆದ ಎರಡು ವಾರಗಳಿಂದ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಝಾಕಿರ್ ಹುಸೈನ್ ಅವರು ಪತ್ನಿ ಅಂಟೋನಿಯಾ ಮಿನ್ನೆಕೋಲಾ, ಪುತ್ರಿಯರಾದ ಅನಿಸಾ ಖುರೇಷಿ ಮತ್ತು ಆಕೆಯ ಕುಟುಂಬ, ಇಸಾಬೆಲ್ಲಾ ಖುರೇಷಿ ಮತ್ತು ಆಕೆಯ ಕುಟುಂಬ, ಸಹೋದರರಾದ ತೌಫಿಕ್ ಮತ್ತು ಫಝಲ್ ಖುರೇಷಿ ಹಾಗೂ ಸಹೋದರಿ ಖುರ್ಷಿದ್ ಔಲಿಯಾ ಅವರನ್ನು ಅಗಲಿದ್ದಾರೆ.
ಮುಂಬೈನ ಮಾಹಿಮ್‌ನಲ್ಲಿ ಪ್ರಸಿದ್ಧ ತಬಲಾ ಮಾಸ್ಟರ್ ಉಸ್ತಾದ್ ಅಲ್ಲಾರಾಖಾ ಅವರ ಮಗನಾಗಿ ಮಾರ್ಚ್ 9, 1951 ರಂದು ಝಾಕಿರ್ ಹುಸೈನ್ ಜನಿಸಿದರು. ಅವರು ಖ್ಯಾತ ಸಂಗೀತ ಸಂಯೋಜಕ ರವಿಶಂಕರ್ ಅವರ ದೀರ್ಘಕಾಲದ ಜೊತೆಗಾರರಾಗಿದ್ದರು. ಹುಸೈನ್ ಅವರಿಗೆ ಚಿಕ್ಕ ವಯಸ್ಸಿನಲ್ಲೇ ತಬಲಾ ನುಡಿಸುವ ಒಲವಿತ್ತು.
ತನ್ನ 3ನೇ ವಯಸ್ಸಿನಲ್ಲಿ ತಂದೆಯಿಂದ ಮೃದಂಗ (ಶಾಸ್ತ್ರೀಯ ತಾಳವಾದ್ಯ) ನುಡಿಸಲು ಕಲಿತ ಝಾಕಿರ್ ಹುಸೈನ್, 12ನೇ ವಯಸ್ಸಿನಲ್ಲಿ ಸಂಗೀತ ಕಚೇರಿಗಳಲ್ಲಿ ಪ್ರದರ್ಶನ ನೀಡಲು ಪ್ರಾರಂಭಿಸಿದರು.
ಝಾಕಿರ್ ಹುಸೈನ್ ಅವರು ರವಿಶಂಕರ್, ಅಲಿ ಅಕ್ಬರ್ ಖಾನ್ ಮತ್ತು ಶಿವಕುಮಾರ್ ಶರ್ಮಾ ಸೇರಿದಂತೆ ಭಾರತದ ಎಲ್ಲಾ ಸಂಗೀತ ದಂತಕಥೆ ಕಲಾವಿದರೊಂದಿಗೆ ಪ್ರದರ್ಶನ ನೀಡಿದ್ದಾರೆ.
ದಿ ಬೀಟಲ್ಸ್, ಯೋ-ಯೋ ಮಾ, ಚಾರ್ಲ್ಸ್ ಲಿಯೋಡ್, ಬೆಲಾ ಫ್ಲೆಕ್, ಎಡ್ಗರ್ ಮೆಯೆರ್, ಮಿಕ್ಕಿ ಹಾರ್ಟ್, ಜಾರ್ಜ್ ಹ್ಯಾರಿಸನ್ ಮತ್ತು ಜಾನ್ ಮೆಕ್‌ಲಾಫ್ಲಿನ್‌ರಂತಹ ಕಲಾವಿದರೊಂದಿಗೆ ಪಾಶ್ಚಿಮಾತ್ಯ ಸಂಗೀತದಲ್ಲಿ ಅವರ ಅದ್ಭುತ ಸಾಧನೆಯು ಭಾರತೀಯ ಶಾಸ್ತ್ರೀಯ ಸಂಗೀತವನ್ನು ಜಾಗತಿಕ ಭೂಪಟದಲ್ಲಿ ಇರಿಸಿತು ಮತ್ತು ಝಾಕಿರ್ ಅವರಿಗೆ ಜಾಗತಿಕ ಸಾಂಸ್ಕೃತಿಕ ರಾಯಭಾರಿಯ ಸ್ಥಾನವನ್ನು ತಂದುಕೊಟ್ಟಿತು.
ಸಂಗೀತಕ್ಕೆ ಝಾಕಿರ್ ಹುಸೈನ್ ಅವರ ಕೊಡುಗೆಯನ್ನು ‘ಅನನ್ಯ ಪರಿವರ್ತಿತ’ವೆಂದು(uniquely transformative) ಎಂದು ಪರಿಗಣಿಸಲಾಗಿದೆ. ಅವರ ‘ಲಯದ ಅನನ್ಯ ಪಾಂಡಿತ್ಯ’ವು ಗಡಿಗಳನ್ನು ಮುಕ್ತವಾಗಿ ದಾಟಿ ಸಂಗೀತದ ವಿವಿಧ ಪ್ರಕಾರಗಳ ನಡುವೆ ಅಧಿಕೃತ ಸಂಪರ್ಕ ಸಾಧಿಸಲು ಅವಕಾಶ ಮಾಡಿಕೊಟ್ಟಿತು.
ಝಾಕಿರ್ ಹುಸೈನ್ ಜಾರ್ಜ್ ಹ್ಯಾರಿಸನ್, ಜೋ ಹೆಂಡರ್ಸನ್, ವ್ಯಾನ್ ಮಾರಿಸನ್, ಏರ್ಟೊ ಮೊರೈರಾ, ಫರೋಹ್ ಸ್ಯಾಂಡರ್ಸ್, ಬಿಲ್ಲಿ ಕೋಬ್ಯಾಮ್, ಅಲೋಂಜೊ ಕಿಂಗ್, ಮಾರ್ಕ್ ಮೋರಿಸ್, ರೆನ್ನಿ ಹ್ಯಾರಿಸ್ ಮತ್ತು ಕೊಡೋ ಡ್ರಮ್ಮರ್‌ಗಳೊಂದಿಗೆ ಕೆಲಸ ಮಾಡಿದ್ದಾರೆ.
ಝಾಕಿರ್ ಹುಸೈನ್ ಪೌರಾಣಿಕ ಗಿಟಾರ್ ವಾದಕ ಜಾನ್ ಮೆಕ್ಲಾಫ್ಲಿನ್, ಪಿಟೀಲು ವಾದಕ ಎಲ್. ಶಂಕರ್ ಮತ್ತು ತಾಳವಾದ್ಯ ವಾದಕ ಟಿ.ಹೆಚ್ ಅವರ ಸಹಯೋಗದೊಂದಿಗೆ 1970ರ ದಶಕದಲ್ಲಿ ‘ವಿಕ್ಕು’ ವಿನಾಯಕರಾಮ್ ಜತೆಗೂಡಿ ಶಕ್ತಿ ಫ್ಯೂಶನ್ ಗ್ರೂಪ್ ರಚಿಸಿದರು. ಇದು ಭಾರತದ ಶಾಸ್ತ್ರೀಯ ಸಂಗೀತವನ್ನು ಜಾಝ್‌ನೊಂದಿಗೆ ಬೆಸೆಯಿತು. ಸಮಕಾಲೀನ ಸಂಗೀತ ಕ್ಷೇತ್ರದಲ್ಲಿ ಅಳಿಸಲಾಗದ ಹೊಸ ಮಾದರಿಯ ಸಂಗೀತ ಪ್ರಕಾರವನ್ನು ಸೃಷ್ಟಿಸಿ ತನ್ನದೇ ಛಾಪು ಮೂಡಿಸಿತು.
ಜಾರ್ಜ್ ಹ್ಯಾರಿಸನ್, ರವಿ ಶಂಕರ್ ಮತ್ತು ವ್ಯಾನ್ ಮಾರಿಸನ್ ಅವರಂತಹ ಹೆಸರಾಂತ ಕಲಾವಿದರೊಂದಿಗೆ ಝಾಕಿರ್ ಹುಸೈನ್ ಕೆಲಸ ಮಾಡಿದ್ದರು. ಗ್ರೇಟ್‌ಫುಲ್ ಡೆಡ್ ಅಂಡ್ ಅರ್ಥ್, ವಿಂಡ್ ಅಂಡ್ ಫೈರ್‌ನ ಆಲ್ಬಂಗಳಲ್ಲಿ ಸಹ ಪ್ರದರ್ಶನ ನೀಡಿದ್ದರು. 1991ರಲ್ಲಿ ಮಿಕ್ಕಿ ಹಾರ್ಟ್ ಅವರೊಂದಿಗೆ ರಚಿಸಲಾದ ಅವರ ಆಲ್ಬಂ ಪ್ಲಾನೆಟ್ ಡ್ರಮ್, ಅತ್ಯುತ್ತಮ ವಿಶ್ವ ಸಂಗೀತ ಆಲ್ಬಮ್‌ಗಾಗಿ ಮೊದಲ ಬಾರಿಗೆ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಝಾಕಿರ್ ಹುಸೈನ್ ಅವರ ಸಂಗೀತ ಲೋಕದ ಸಾಧನೆಯನ್ನು ಗುರುತಿಸಿ ಭಾರತದಲ್ಲಿ ಕೇಂದ್ರ ಸರ್ಕಾರದಿಂದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಝಾಕಿರ್ ಅವರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್‌ನ ಜೀವಮಾನದ ಗೌರವ ಪ್ರಶಸ್ತಿಯನ್ನೂ ಪಡೆದಿದ್ದಾರೆ.
2024 ರಲ್ಲಿ ನಡೆದ 66 ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಒಂದೇ ರಾತ್ರಿಯಲ್ಲಿ ಮೂರು ಸೇರಿದಂತೆ ಐದು ಗ್ರ್ಯಾಮಿ ಪ್ರಶಸ್ತಿಗಳನ್ನು ಝಾಕಿರ್ ಹುಸೈನ್ ಗೆದ್ದಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಸಂಗೀತಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದರು.
ಇದನ್ನೂ ಓದಿ : ಉತ್ತರ ಪ್ರದೇಶ: ಭೂ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ನಕಲಿ ನೋಟಿಸ್ ಕಳುಹಿಸಿದ ಅಪರಿಚಿತರು!


