ಟ್ರ್ಯಾಕ್ಟರ್ ಕದ್ದ ಶಂಕೆ ಮೇಲೆ ವ್ಯಕ್ತಿಯೊಬ್ಬನನ್ನು ಥಳಿಸಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಬಿಹಾರದ ಮುಝಪ್ಫರ್‌ಪುರದಲ್ಲಿ ನಡೆದಿದೆ.
ಬಿಹಾರದ ರಾಜಧಾನಿ ಪಾಟ್ನಾದಿಂದ ಸುಮಾರು 70 ಕಿ.ಮೀ ದೂರದ ಮುಝಫ್ಪರ್‌ಪುರದ ಉತ್ತರ ರಾಜ್‌ಖಂಡ್ ಪಂಚಾಯತ್ ವ್ಯಾಪ್ತಿಯ ಯೋಗಿಯ ಗ್ರಾಮದಿಂದ ಈ ಘಟನೆ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಶಂಭು ಸಾಹ್ನಿ ಎಂದು ಗುರುತಿಸಲಾಗಿದ್ದು, ಇವರೊಂದಿಗೆ ಇನ್ನೂ ಮೂವರು ಇದ್ದರು. ಅವರು ಸ್ಥಳದಿಂದ ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದ ಶಂಭು ಸಾಹ್ನಿಗೆ ಸ್ಥಳೀಯರು ಮೈ ಕೊರೆಯುವ ಚಳಿಯಲ್ಲಿ ಕೈಕಾಲು ಕಟ್ಟಿಹಾಕಿ ರಾತ್ರಿಯಿಡೀ ಥಳಿಸಿದ್ದಾರೆ. ಇದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಎನ್‌ಡಿ ಟಿವಿ ವರದಿ ಮಾಡಿದೆ.
ಶಂಭು ಸಾಹ್ನಿ ಅವರು ಥಳಿತಕ್ಕೊಳಗಾದ ಮೇಲೆ ಕೈಗಳನ್ನು ಹಗ್ಗದಿಂದ ಕಟ್ಟಿ, ಕಾಲುಗಳನ್ನು ಹಗ್ಗದಿಂದ ಬಿಗಿದು ಟ್ರ್ಯಾಕ್ಟರ್‌ಗೆ ಕಟ್ಟಿದ ರೀತಿಯಲ್ಲಿ ಬಿದ್ದಿರುವ ಫೋಟೋ ವೈರಲ್ ಆಗಿದೆ. ಹಲ್ಲೆಗೊಳಗಾದ ಮೇಲೆ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ, ಅಷ್ಟರಲ್ಲಿ ಮೃತಪಟ್ಟಿದ್ದರು ಎಂದು ವರದಿಗಳು ವಿವರಿಸಿವೆ.
ಗ್ರಾಮಸ್ಥರ ಪ್ರಕಾರ, ಮೃತ ಶಂಭು ಸಾಹ್ನಿ ಮತ್ತು ಅವರ ಮೂವರು ಸ್ನೇಹಿತರು ರಾತ್ರಿ ಹೊತ್ತು ಟ್ರ್ಯಾಕ್ಟರ್ ಕದಿಯಲು ಹೋಗಿದ್ದರು. ಈ ವೇಳೆ ಭಾರೀ ಶಬ್ದ ಕೇಳಿ ನಿದ್ದೆಯಿಂದ ಎದ್ದ ಗ್ರಾಮಸ್ಥರು ಅವರನ್ನು ಹಿಂಬಾಲಿಸಿದ್ದಾರೆ. ಈ ವೇಳೆ ಮೂವರು ತಪ್ಪಿಸಿಕೊಂಡಿದ್ದು, ಶಂಭು ಸಿಕ್ಕಿಬಿದ್ದಿದ್ದಾರೆ.
ಘಟನೆ ಸಂಬಂಧ ಟ್ರ್ಯಾಕ್ಟರ್ ಮಾಲೀಕ ಗಂಗಾ ಸಾಹ್ನಿ ಹಾಗೈ ಅತನ ಸೋದರಳಿಯ ಪುಕಾರ್ ಸಾಹ್ನಿಯನ್ನು ಬಂಧಿಸಲಾಗಿದೆ. ಅವರನ್ನು ಪ್ರಕರಣದ ಪ್ರಮುಖ ಆರೋಪಿಗಳಾಗಿ ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಉಪವಾಸ ಕೊನೆಗೊಳಿಸುವಂತೆ ರೈತ ನಾಯಕ ದಲ್ಲೆವಾಲ್ ಅವರಲ್ಲಿ ಪಂಜಾಬ್ ಡಿಜಿಪಿ-ಎಂಎಚ್‌ಎ ಮನವಿ


