ಡಿಸೆಂಬರ್ 8 ಭಾನುವಾರದಂದು ಅಲಹಾಬಾದ್ ಹೈಕೋರ್ಟ್‌ನ ಗ್ರಂಥಾಲಯ ಸಭಾಂಗಣದಲ್ಲಿ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹಾಲಿ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು, ಮುಸ್ಲಿಮರನ್ನು ಗುರಿಯಾಗಿಸಿ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ.
ಭಾರತ ದೇಶ ಬಹುಸಂಖ್ಯಾತರ ಇಚ್ಚೆಯಂತೆ ನಡೆಯಲಿದೆ ಎಂದಿರುವ ನ್ಯಾ.ಶೇಖರ್ ಕುಮಾರ್ ಯಾದವ್, ಸಾಮಾಜಿಕ ಜಾಲತಾಣಗಳಲ್ಲಿ ಬಲಪಂಥೀಯರು ಮುಸ್ಲಿಮರನ್ನು ಗುರಿಯಾಗಿಸಿ ಬಳಸುವ ‘ಕಠ್ಮುಲ್ಲಾ’ಎಂಬ ಪದ ಉಪಯೋಗಿಸಿ ಮುಸ್ಲಿಮರ ವಿರುದ್ದ ಟೀಕೆ ಮಾಡಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಪ್ರಾಣಿಗಳ ಹತ್ಯೆಯನ್ನು ನೋಡುವುದರಿಂದ ಮುಸ್ಲಿಂ ಮಕ್ಕಳು ದಯೆ ತೋರುತ್ತಾರೆ ಎಂದು ನಿರೀಕ್ಷಿಸುವಂತಿಲ್ಲ ಎಂಬ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ನ್ಯಾಯಮೂರ್ತಿಗಳ ಈ ಹೇಳಿಕೆ ದೇಶದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಯಮೂರ್ತಿ ವಿರುದ್ದ ಸಿಜೆಐ ಸಂಜೀವ್ ಖನ್ನಾ ಅವರಿಗೆ ದೂರು ನೀಡಲಾಗಿದೆ. ಸುಪ್ರೀಂ ಕೋರ್ಟ್ ಅಲಹಾಬಾದ್ ಹೈಕೋರ್ಟ್‌ನಿಂದ ಈ ಬಗ್ಗೆ ಮಾಹಿತಿ ಕೋರಿದೆ. ನ್ಯಾ. ಶೇಖರ್ ಕುಮಾರ್ ಯಾದವ್ ಅವರಿಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಸಮನ್ಸ್ ನೀಡಿದೆ. ರಾಜ್ಯಸಭೆಯಲ್ಲಿ ವಾಗ್ದಂಡನೆ ನೋಟಿಸ್ ನೀಡಲಾಗಿದೆ. ಅದಕ್ಕೆ 55 ಸದಸ್ಯರು ಸಹಿ ಹಾಕಿದ್ದಾರೆ. ಲೋಕಸಭೆಯಲ್ಲಿ ಸಂಸದ ಅಸಾದುದ್ದೀನ್ ಓವೈಸಿ ವಾಗ್ದಂಡನೆ ನೋಟಿಸ್ ನೀಡಿದ್ದಾರೆ. ಅದಕ್ಕೆ 100 ಸಂಸದರ ಸಹಿ ಬೇಕಿದೆ.
ಹಾಲಿ ನ್ಯಾಯಾಧೀಶರಾಗಿರುವ ಶೇಖರ್ ಕುಮಾರ್ ಯಾದವ್ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಹಿನ್ನೆಲೆ ಅವರ ಪದಚ್ಯುತಿಗೆ ಆಗ್ರಹ ಹೆಚ್ಚಾಗಿದೆ. ಹಾಗಾದರೆ, ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಸಾಧ್ಯನಾ? ಅದರ ಪ್ರಕ್ರಿಯೆ ಹೇಗೆ ನಡೆಯಲಿದೆ ನೋಡೋಣ..
ಸಂವಿಧಾನ ವಿಧಿಗಳಾದ 124 ಮತ್ತು 218 ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರನ್ನು ಹುದ್ದೆಯಿಂದ ಕೆಳಗಿಳಿಸುವ ಬಗ್ಗೆ ವಿವರಿಸುತ್ತದೆ.
ಹಾಲಿ ನ್ಯಾಯಾಧೀಶರನ್ನು ಹುದ್ದೆಯಿಂದ ಕೆಳಗಿಳಿಸುವುದು ಸುಧೀರ್ಘ ಪ್ರಕ್ರಿಯೆಯನ್ನು ಒಳಗೊಂಡಿದೆ ಮತ್ತು ಬಹಳ ಸಂಕೀರ್ಣ ವಿಷಯವಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದುವರೆಗೆ ಯಾವುದೇ ನ್ಯಾಯಾಧೀಶರನ್ನು ಹುದ್ದೆಯಿಂದ ಕೆಳಗಿಳಿಸಿಲ್ಲ. ಆದರೆ, ಹಲವರ ವಿರುದ್ದ ಪದಚ್ಯುತಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.
ಸಂವಿಧಾನದ ವಿಧಿ 124(4) ಪ್ರಕಾರ : ರಾಷ್ಟ್ರಪತಿಗಳು ಸಂಸತ್ತಿನ ಎರಡೂ ಮನೆಗಳ ಅಭಿಪ್ರಾಯಗಳನ್ನು ಪಡೆದು ಅಂತಿಮ ನಿರ್ಧಾರ ತೆಗೆದುಕೊಳ್ಳದ ಹೊರತು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರನ್ನು ‘ಅನುಚಿತ ವರ್ತನೆ ಅಥವಾ ಅಸಮರ್ಥತೆ’ ಕಾರಣ ನೀಡಿ ಹುದ್ದೆಯಿಂದ ತೆಗೆದು ಹಾಕಲು ಸಾಧ್ಯವಿಲ್ಲ. ರಾಷ್ಟ್ರಪತಿಗಳು ಸಂಸತ್ತಿನ ಅಭಿಪ್ರಾಯ ಪಡೆಯುವಾಗ ಸಂಸತ್ತಿನ ಎರಡೂ ಸದನಗಳ ಒಟ್ಟು ಸದಸ್ಯರಲ್ಲಿ ಮೂರನೇ ಎರಡರಷ್ಟು ಸದಸ್ಯರು ಹಾಜರಿದ್ದು ಮತ ಚಲಾಯಿಸಬೇಕು.
ಸಂವಿಧಾನದ ವಿಧಿ 218ರ ಪ್ರಕಾರ : ಹೈಕೋರ್ಟ್‌ನ ನ್ಯಾಯಾಧೀಶರಿಗೂ ಮೇಲ್ಗಡೆ ವಿವರಿಸಿದ ಅದೇ ನಿಯಮಗಳು ಅನ್ವಯಿಸುತ್ತದೆ.
ನ್ಯಾಯಾಧೀಶರ ಪದಚ್ಯುತಿ ಪ್ರಕ್ರಿಯೆಯನ್ನು ಸಂವಿಧಾನ ಹೇಗೆ ವಿವರಿಸಿದೆಯೂ, ಅದನ್ನು ಅನಸರಿಸಿ ನ್ಯಾಯಾಧೀಶರ (ವಿಚಾರಣೆ) ಕಾಯ್ದೆ-1968 ಅನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆಯಡಿ ನ್ಯಾಯಾಧೀಶರ ವಿರುದ್ಧ ಕೇಳಿ ಬಂದಿರುವ ಆರೋಪಗಳ ತನಿಖೆಯ ಮತ್ತು ಸಾಕ್ಷ್ಯ ಸಂಗ್ರಹದ ಕಾರ್ಯ ವಿಧಾನಗಳನ್ನು ನಿಯಂತ್ರಿಸಲಾಗುತ್ತದೆ.
ನ್ಯಾಯಾಧೀಶರ (ವಿಚಾರಣೆ) ಕಾಯ್ದೆ-1968ರ ಮೂಲಕ ನಿಗದಿಪಡಿಸಲಾದ ಪ್ರಕ್ರಿಯೆ
ಹಂತ 1 : ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ಪದಚ್ಯುತಿಯ ಮೊದಲ ಹಂತ ಲೋಕಸಭೆ ಅಥವಾ ರಾಜ್ಯಸಭೆಯಿಂದ ಪ್ರಾರಂಭವಾಗುತ್ತದೆ. ಕನಿಷ್ಠ 100 ಲೋಕಸಭಾ ಸಂಸದರು ಅಥವಾ ಕನಿಷ್ಠ 50 ರಾಜ್ಯಸಭಾ ಸಂಸದರು ಪದಚ್ಯುತಿ ನೋಟಿಸ್‌ಗೆ ಸಹಿ ಹಾಕಬೇಕಿದೆ.
ಹಂತ 2 : ಲೋಕಸಭೆಯ ಸ್ಪೀಕರ್ ಅಥವಾ ರಾಜ್ಯಸಭಾ ಅಧ್ಯಕ್ಷರು ನೋಟಿಸ್ ಸ್ವೀಕೃತಿ ಮಾಡಬಹುದು ಅಥವಾ ತಿರಸ್ಕರಿಸಬಹುದು
ಹಂತ 3 : ಸ್ಪೀಕರ್ ಅಥವಾ ಅಧ್ಯಕ್ಷರು ಪದಚ್ಯುತಿ ನೋಟಿಸ್ ಒಪ್ಪಿಕೊಂಡರೆ, ನ್ಯಾಯಾಧೀಶರ ವಿರುದ್ಧದ ಆರೋಪಗಳನ್ನು ಪರಿಶೀಲಿಸಲು ಅವರು ಸಮಿತಿಯನ್ನು ರಚಿಸಬೇಕಾಗುತ್ತದೆ. ಆ ಸಮಿತಿಯು ಈ ಕೆಳಗಿನವರನ್ನು ಒಳಗೊಂಡಿರಬೇಕು..
- ಒಬ್ಬರು ಸುಪ್ರೀಂ ಕೋರ್ಟ್ ನ್ಯಾಯಾಧೀಶರು
- ಒಬ್ಬ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ
- ಒಬ್ಬ ಖ್ಯಾತ ನ್ಯಾಯಶಾಸ್ತ್ರಜ್ಞ
ಹಂತ 4 : ಸಂಸತ್ತಿನ ಉಭಯ ಸದನಗಳಲ್ಲಿ ಒಂದೇ ದಿನದಲ್ಲಿ ವಾಗ್ದಂಡನೆ ಅಥವಾ ಪದಚ್ಯುತಿ ನೋಟಿಸ್ ನೀಡಿದರೆ, ಈ ಎರಡೂ ನೋಟಿಸ್‌ಗಳನ್ನು ಅಂಗೀಕರಿಸಿದರೆ ಮಾತ್ರ ಸಮಿತಿ ರಚಿಸಬಹುದು. ಸಮಿತಿಯ ರಚನೆಯ ಬಗ್ಗೆ ಲೋಕಸಭೆಯ ಸ್ಪೀಕರ್ ಮತ್ತು ರಾಜ್ಯಸಭೆಯ ಅಧ್ಯಕ್ಷರು ಜಂಟಿಯಾಗಿ ನಿರ್ಧಾರ ಕೈಗೊಳ್ಳಬೇಕು.
ಹಂತ 5 : ಸಮಿತಿಯು ನಂತರ ನ್ಯಾಯಾಧೀಶರ ವಿರುದ್ಧ ಆರೋಪಗಳನ್ನು ರೂಪಿಸುವ ಕೆಲಸವನ್ನು ಮಾಡುತ್ತದೆ.
ಹಂತ 6 : ನ್ಯಾಯಾಧೀಶರಿಗೆ ಅವರ ವಿರುದ್ದದ ಆರೋಪಗಳ ಕುರಿತ ಲಿಖಿತ ಪ್ರತಿಕ್ರಿಯೆಗಾಗಿ ನೋಟಿಸ್ ನೀಡಬೇಕು.
ಹಂತ 7 : ತನಿಖಾ ಸಮಿತಿಯು ತನ್ನ ವರದಿಯನ್ನು ಮತ್ತು ನ್ಯಾಯಾಧೀಶರ ಲಿಖಿತ ಪ್ರತಿಕ್ರಿಯೆಯನ್ನು ಸಂಸತ್ತಿಗೆ ಸಲ್ಲಿಸಬೇಕು. ಅದನ್ನು ಸ್ಪೀಕರ್ ಅಥವಾ ಅಧ್ಯಕ್ಷರು ಸದನದಲ್ಲಿ ಮಂಡಿಸಬೇಕು. ವರದಿಯಲ್ಲಿ ನ್ಯಾಯಾಧೀಶರ ವಿರುದ್ದದ ಅನುಚಿತ ವರ್ತನೆ ಅಥವಾ ಅಸಮರ್ಥತೆ ರುಜುವಾತಾದರೆ, ನಂತರ ಸದನವು ಅದರ ಮೇಲೆ ಚರ್ಚೆ ನಡೆಸಿ ಮತ ಚಲಾಯಿಸುತ್ತದೆ.
ಹಂತ 8 : ಮತದಾನದಕ್ಕೂ ಮೊದಲು, ಆರೋಪ ಹೊತ್ತಿರುವ ನ್ಯಾಯಾಧೀಶರು ತಮ್ಮ ವಾದವನ್ನು ಸದನದಲ್ಲಿ ಮಂಡಿಸಬಹುದು.
ಹಂತ 9 : ನ್ಯಾಯಾಧೀಶರ ವಿರುದ್ದ ಸಂಸತ್ತಿನ ಉಭಯ ಸದನಗಳಲ್ಲಿ ಪದಚ್ಯತಿ ಅಂಗೀಕರಿಸಲು ಬಹುಮತಬೇಕು. ಅಂದರೆ, ಸದನದ ಒಟ್ಟು ಸದಸ್ಯರ ಪೈಕಿ ಅರ್ಧಕ್ಕಿಂತ ಹೆಚ್ಚು ಜನರು ನಿರ್ಣಯ ಬೆಂಬಲಿಸಬೇಕು. ಉಪಸ್ಥಿತರಿರುವ ಮತ್ತು ಮತ ಚಲಾಯಿಸುವ ಕನಿಷ್ಠ ಮೂರನೇ ಎರಡರಷ್ಟು ಸದಸ್ಯರ ಬೆಂಬಲ ಇದಕ್ಕೆ ಅಗತ್ಯವಿದೆ.
ಹಂತ 10 : ನಂತರ ರಾಷ್ಟ್ರಪತಿಗಳಿಗೆ ಪದಚ್ಯುತಿ ನಿರ್ಣಯ ಕಳುಹಿಸಲಾಗುತ್ತದೆ. ಅವರು ನ್ಯಾಯಾಧೀಶರನ್ನು ಹುದ್ದೆಯಿಂದ ತೆಗೆದುಹಾಕುವ ಆದೇಶ ನೀಡುತ್ತಾರೆ.
ಸ್ವತಂತ್ರ ಭಾರತದ ಇತಿಹಾಸಲ್ಲಿ ಇದುವರೆಗೆ ಒಬ್ಬರು ನ್ಯಾಯಾಧೀಶರ ವಿರುದ್ದ ಮಾತ್ರ 8ನೇ ಹಂತದವರೆಗೆ ಪದಚ್ಯುತಿ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ.
ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಸೌಮಿತ್ರ ಸೇನ್ ಅವರ ವಿರುದ್ದ ಹಣ ದುರುಪಯೋಗದ ಆರೋಪ ಕೇಳಿ ಬಂದಿತ್ತು. ರಾಜ್ಯಸಭೆಯ ಸದನದಲ್ಲಿ ಅವರು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದರು. ರಾಜ್ಯಸಭೆಯು ಅವರ ಪದಚ್ಯುತಿಗೆ ನಿರ್ಣಯ ಅಂಗೀಕರಿಸಿತ್ತು. ಆದರೆ, ಲೋಕಸಭೆಯಲ್ಲಿ ಪದಚ್ಯುತಿ ನಿರ್ಣಯ ಮತದಾನಕ್ಕೆ ಬರುವ ಮುನ್ನವೇ ನ್ಯಾಯಾಧೀಶ ಸೌಮಿತ್ರ ಸೇನ್ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಉನ್ನತ ನ್ಯಾಯಾಂಗದ ನ್ಯಾಯಾಧೀಶರನ್ನು ಪದಚ್ಯುತಗೊಳಿಸಲು ಸಂಸದೀಯ ಕ್ರಮವು ಅಗತ್ಯವಾಗಿದ್ದರೂ, ಇಡೀ ವಿಷಯವನ್ನು ನ್ಯಾಯಾಂಗದಿಂದಲೇ ಪ್ರಾರಂಭಿಸಬಹುದು. 1999 ರಲ್ಲಿ, ಸುಪ್ರೀಂ ಕೋರ್ಟ್ “ಇನ್-ಹೌಸ್ ಪ್ರೊಸೀಜರ್” ಗಾಗಿ ಮಾರ್ಗಸೂಚಿಗಳನ್ನು ನೀಡಿದೆ. ಈ ಮಾರ್ಗಸೂಚಿಗಳನ್ನು 2014 ರಲ್ಲಿ ಸಾರ್ವಜನಿಕಗೊಳಿಸಲಾಯಿತು. ಆಂತರಿಕ ಕಾರ್ಯವಿಧಾನವನ್ನು ದೋಷಾರೋಪಣೆಯ ಮುಜುಗರವನ್ನು ತಪ್ಪಿಸುವ ಮಾರ್ಗವಾಗಿಯೂ ನೋಡಲಾಗುತ್ತದೆ.
ಆಂತರಿಕ ಕಾರ್ಯವಿಧಾನದ ಪ್ರಕಾರ, ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ವಿರುದ್ಧದ ದೂರನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅಥವಾ ರಾಷ್ಟ್ರಪತಿಗಳು ಸ್ವೀಕರಿಸಬಹುದು.
ಹಂತ 1 : ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ದೂರು ಸ್ವೀಕರಿಸಿದರೆ, ಅವರು ದೂರು ನಿಷ್ಪ್ರಯೋಜಕವಾಗಿದೆಯೇ ಅಥವಾ ಅರ್ಹತೆ ಹೊಂದಿದೆಯೇ ಎಂಬುವುದನ್ನು ಪರಿಶೀಲಿಸಬೇಕು. ದೂರು ಅರ್ಹವಾಗಿದ್ದರೆ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು, ಆರೋಪ ಹೊತ್ತಿರುವ ನ್ಯಾಯಾಧೀಶರ ಪ್ರತಿಕ್ರಿಯೆ ಕೇಳಬೇಕು. ಈ ಪ್ರತಿಕ್ರಿಯೆಯ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಬೇಕೇ..ಬೇಡವೇ? ಎಂದು ನಿರ್ಧರಿಸಬೇಕು. ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ, ಅವರು ದೂರು, ಪ್ರತಿಕ್ರಿಯೆ ಮತ್ತು ಪರಿಸ್ಥಿತಿಯ ಬಗ್ಗೆ ಸಿಜೆಐಗೆ ಮಾಹಿತಿ ನೀಡಬೇಕು.
ರಾಷ್ಟ್ರಪತಿಗಳು ದೂರನ್ನು ಸ್ವೀಕರಿಸಿದರೆ, ಅವರು ಅದನ್ನು ಸಿಜೆಐಗೆ ರವಾನಿಸಬೇಕು. ರಾಷ್ಟ್ರಪತಿಯಿಂದ ದೂರು ಬಂದರೆ ಅಥವಾ ಸಿಜೆಐ ನೇರವಾಗಿ ದೂರನ್ನು ಸ್ವೀಕರಿಸಿದರೆ, ಅದು ಅರ್ಹವಾಗಿದೆಯೇ? ಎಂದು ಮೊದಲು ಪರಿಶೀಲನೆ ಮಾಡಬೇಕಾಗುತ್ತದೆ. ದೂರು ವಿಚಾರಣೆಗೆ ಅರ್ಹವಾಗಿದೆ ಎಂದು ಅವರು ಕಂಡುಕೊಂಡರೆ, ಅದನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ರವಾನಿಸಬೇಕು. ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಮೇಲೆ ವಿವರಿಸಿದಂತೆ ಪ್ರಕ್ರಿಯೆಯನ್ನು ಅನುಸರಿಸುತ್ತಾರೆ.
ಹಂತ 2 : ಪ್ರಕರಣವು ಹೈಕೋರ್ಟ್‌ನಿಂದ ಸಿಜೆಐಗೆ ಹಿಂತಿರುಗಿದ ನಂತರ, ಹೆಚ್ಚಿನ ತನಿಖೆಯ ಅಗತ್ಯವಿದೆಯೇ ? ಎಂದು ಸಿಜೆಐ ನಿರ್ಧರಿಸಬೇಕು. ಹಾಗಿದ್ದಲ್ಲಿ, ಸಿಜೆಐ ಮೂವರು ಸದಸ್ಯರ ಸಮಿತಿಯನ್ನು ರಚಿಸಬೇಕು. ಈ ಸಮಿತಿಯಲ್ಲಿ ಆರೋಪ ಎದುರಿಸುತ್ತಿರುವ ನ್ಯಾಯಾಧೀಶರು ಹೊರತುಪಡಿಸಿ ಹೈಕೋರ್ಟ್‌ಗಳ ಇಬ್ಬರು ಮುಖ್ಯ ನ್ಯಾಯಮೂರ್ತಿಗಳು ಮತ್ತು ಒಬ್ಬರು ಹೈಕೋರ್ಟ್ ನ್ಯಾಯಾಧೀಶರನ್ನು ಒಳಗೊಂಡಿರಬೇಕು.
ಹಂತ 3 : ಈ ಸಮಿತಿಯು ನಂತರ ದೂರು ನಿಜವೇ? ಎಂದು ನಿರ್ಧರಿಸಬೇಕು ಮತ್ತು ಸಿಜೆಐಗೆ ದೂರಿನ ಕುರಿತು ಕೆಳಗಿನ ಮೂರು ರೀತಿಯಲ್ಲಿ ಹೇಳಬೇಕು..
- ಗಂಭೀರ ಮತ್ತು ನ್ಯಾಯಾಧೀಶರನ್ನು ತೆಗೆದುಹಾಕುವ ಅಗತ್ಯವಿದೆ
- ನಿಜ, ಆದರೆ ನ್ಯಾಯಾಧೀಶರನ್ನು ತೆಗೆದುಹಾಕುವ ಅಗತ್ಯವಿಲ್ಲ
- ಸುಳ್ಳು
ಹಂತ 4 : ನ್ಯಾಯಾಧೀಶರನ್ನು ತೆಗೆದು ಹಾಕುವ ಅಗತ್ಯವಿದೆ ಎಂದು ಸಮಿತಿಯು ಕಂಡುಕೊಂಡರೆ, ಸಿಜೆಐ ಆರೋಪ ಹೊತ್ತಿರುವ ನ್ಯಾಯಾಧೀಶರನ್ನು ರಾಜೀನಾಮೆ ನೀಡುವಂತೆ ಕೇಳುತ್ತಾರೆ. ನ್ಯಾಯಾಧೀಶರ ಪದಚ್ಯುತಿಗೆ ಅಗತ್ಯವಿರುವಷ್ಟು ಸಮಸ್ಯೆ ಗಂಭೀರವಾಗಿಲ್ಲದಿದ್ದರೆ, ಸಿಜೆಐ ನ್ಯಾಯಾಧೀಶರೊಂದಿಗೆ ಮಾತನಾಡಿ ಅವರಿಗೆ ಸಲಹೆ ನೀಡಬಹುದು.
ಹಂತ 5 : ನ್ಯಾಯಾಧೀಶರು ರಾಜೀನಾಮೆ ನೀಡಲು ನಿರಾಕರಿಸಿದರೆ, ಅವರಿಗೆ ಯಾವುದೇ ಪ್ರಕರಣಗಳನ್ನು ವಹಿಸದಂತೆ ಸಿಜೆಐ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನು ಕೇಳಬೇಕಾಗುತ್ತದೆ. ಸಿಜೆಐ ಈ ವಿಚಾರವನ್ನು ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೆ ತಿಳಿಸಬೇಕು. ನ್ಯಾಯಾಧೀಶರ ಪದಚ್ಯುತಿಗಾಗಿ ಸಂಸತ್ತಿನ ಪ್ರಕ್ರಿಯೆಗಳನ್ನು ಪ್ರಾರಂಭಿಸುವಂತೆ ಕೋರಬೇಕು.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾವುದೇ ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ಪದಚ್ಯುತಗೊಳಿಸಿಲ್ಲ. ಆದಾಗ್ಯೂ, ಹಲವಾರು ನ್ಯಾಯಾಧೀಶರ ವಿರುದ್ಧ ಆಂತರಿಕ ಪ್ರಕ್ರಿಯೆ, ಅಥವಾ ತೆಗೆದು ಹಾಕಲು ಸಂಸತ್ತಿನ ಪ್ರಕ್ರಿಯೆ ಅಥವಾ ಎರಡನ್ನೂ ಪ್ರಾರಂಭಿಸಲಾಗಿದೆ.


