ಜನರ ಹಣ ವಂಚಿಸುವ ಮೋಸದ ಕಂಪೆನಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಣಕಾಸು ಸಂಸ್ಥೆಗಳಲ್ಲಿ ‘ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ವಿಧೇಯಕ’ಕ್ಕೆ ಹಲವು ಪ್ರಮುಖ ತಿದ್ದುಪಡಿಗಳನ್ನು ತರಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಸೋಮವಾರ (ಡಿ.16) ವಿಧಾನಸಭೆಯಲ್ಲಿ “ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ವಿಧೇಯಕ 2024” ಮಂಡಿಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, “2003-04 ರಲ್ಲಿ ವಿನಿವಿಂಕ್ ಶಾಸ್ತ್ರಿ ಚಿಟ್‌ಫಂಡ್ ಸ್ಕೀಂನಿಂದ ಸಾವಿರಾರು ಜನ ಬಡ ಠೇವಣಿದಾರರು ಹಣ ಕಳೆದುಕೊಂಡಿದ್ದರು. ಅಪಾರ ಸಂಖ್ಯೆಯ ಅಮಾಯಕರು ಹಣ ಕಳೆದುಕೊಂಡಿದ್ದರು. ಆ ಪ್ರಕರಣ ಅಂದಿನ ದಿನಗಳಲ್ಲೇ ಸದನದಲ್ಲಿ ಭಾರೀ ಸದ್ದು ಮಾಡಿತ್ತು. ಪರಿಣಾಮ 2004 ರಲ್ಲಿ ದೀರ್ಘ ಚರ್ಚೆಯ ನಂತರ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ವಿಧೇಯಕವನ್ನು ಜಾರಿಗೆ ತರಲಾಯಿತು” ಎಂದರು.
“ಚೈನ್‌ಲಿಂಕ್, ಚಿಟ್‌ಫಂಡ್, ಪಿರಮಿಡ್ ಮಾದರಿ ಹಾಗೂ ಹಣ ಡಬ್ಲಿಂಗ್ ಮಾಡುವ ಆಮಿಷ ಒಡ್ಡಿ ಜನರಿಂದ ಹಣ ಠೇವಣಿ ಪಡೆದು ವಂಚಿಸುವ ಕಂಪೆನಿಗಳಿಗೆ ಕಡಿವಾಣ ಹಾಕುವುದು ಈ ಕಾನೂನಿನ ಮುಖ್ಯ ಉದ್ದೇಶ. ಈ ಕಾನೂನು ಜಾರಿಗೆ ಬಂದು 20 ವರ್ಷ ಆಯ್ತು. ಆದರೆ, ಈಗಲೂ ಈ ಬಗ್ಗೆ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಲೇ ಇದೆ. ಸೆಟಲ್ಮೆಂಟ್‌ಗಳೂ ಆಗುತ್ತಲೇ ಇವೆ. ಹೀಗಾಗಿ ಈ ಕಾನೂನನ್ನು ಅನುಷ್ಠಾನಗೊಳುವಾಗ ಒಂದಷ್ಟು ಬದಲಾವಣೆ ತಂದರೆ ಮತ್ತಷ್ಟು ಪ್ರಬಲವಾಗಿ ಅನುಷ್ಠಾನಗೊಳಿಸಬಹುದು ಹಾಗೂ ಬಾಧಿತರಿಗೆ ಮತ್ತಷ್ಟು ಪರಿಹಾರ ಒದಗಿಸಬಹುದು ಎಂಬ ಮಹತ್ವಾಕಾಂಕ್ಷೆಯಿಂದ ಈ ಕಾನೂನಿಗೆ ತಿದ್ದುಪಡಿ ತರಲಾಗುತ್ತಿದೆ” ಎಂದು ಸ್ಪಷ್ಟಪಡಿಸಿದರು.
“ಈ ಕಾನೂನಿಗೆ ಏನೆಲ್ಲಾ ತಿದ್ದುಪಡಿ ತರಬೇಕು ಎಂದು ಅನುಭವದ ಆಧಾರದ ಮೇಲೆ ಕಳೆದ ಎರಡು ವರ್ಷಗಳಿಂದ ಅಧಿಕಾರಿಗಳ ಜೊತೆ ಸುದೀರ್ಘವಾಗಿ ಚರ್ಚಿಸಿ ತಿದ್ದುಪಡಿ ತರಲಾಗಿದೆ. ಕಾನೂನಿನ ಸಮರ್ಪಕ ಅನುಷ್ಠಾನ ಹಾಗೂ ಠೇವಣಿದಾರರಿಗೆ ಸಹಾಯ ಮಾಡಿಕೊಡುವ, ಅವರ ಹಣವನ್ನು ಸುಲಭಕ್ಕೆ ಹಿಂತಿರುಗಿ ಪಡೆಯುವ ನಿಟ್ಟಿನಲ್ಲಿ ಸರಳೀಕರಣಕ್ಕೆ ಅಗತ್ಯವಾದ ಎಲ್ಲ ಕ್ರಮಗಳನ್ನೂ ತಿದ್ದುಪಡಿಯಲ್ಲಿ ತರಲಾಗಿದೆ” ಎಂದು ಅವರು ತಿಳಿಸಿದರು.
“ಕೆಲವರು ಕಂಪೆನಿ ತೆರೆದು ಹಗರಣ ಮಾಡಿ, ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗುವ ಮೊದಲೇ ಆ ಕಂಪನಿಯ ನಿರ್ದೇಶಕ ಹುದ್ದೆಯಿಂದ ನಿರ್ಗಮಿಸಿರುತ್ತಾರೆ. ನಿರ್ಗಮಿತ ನಿರ್ದೇಶಕರನ್ನು ವಿಚಾರಿಸುವ ಅವಕಾಶ ಹಳೆಯ ಕಾನೂನಿನಲ್ಲಿ ಇರಲಿಲ್ಲ. ಆದರೆ, ಇದೀಗ ಹೊಸ ತಿದ್ದುಪಡಿಯಲ್ಲಿ ಅದಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೆ, ಅಂತಹ ವಂಚಕ ಕಂಪೆನಿಗಳು ತಮ್ಮ ಅಧಿಕಾರ ವ್ಯಾಪ್ತಿಯ ಪ್ರದೇಶದಲ್ಲಿ ಚಟುವಟಿಕೆ ಆರಂಭಿಸಿರುವ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಉಪ-ವಿಭಾಗಾಧಿಕಾರಿಗಳು ಆ ಬಗ್ಗೆ ಕ್ರಮವಹಿಸಬೇಕು, ಅಂತಹ ಕಂಪೆನಿಗಳ ಪ್ರಚಾರ-ಜಾಹೀರಾತುಗಳಿಗೂ ತಡೆಯೊಡ್ಡುವ ಅಧಿಕಾರವನ್ನು ಅವರಿಗೆ ನೀಡಲಾಗಿದೆ” ಎಂದು ಸಚಿವ ಕೃಷ್ಣ ಬೈರೇಗೌಡ ಸದನಕ್ಕೆ ಮಾಹಿತಿ ನೀಡಿದರು.
ಮೈಕ್ರೋ ಫೈನಾನ್ಸ್ ಕಂಪೆನಿಗಳ ವಿರುದ್ಧವೂ ಕ್ರಮ
ತಿದ್ದುಪಡಿ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಅವರು ವಿವರಿಸುತ್ತಿದ್ದಂತೆ ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ಶಾಸಕರಾದ ಸುನೀಲ್ ಕುಮಾರ್ ಹಾಗೂ ಅರಗ ಜ್ಞಾನೇಂದ್ರ ಅವರು ಗ್ರಾಮೀಣ ಭಾಗದ ಮಹಿಳೆಯರನ್ನು ಶೋಷಿಸುತ್ತಿರುವ ಮೈಕ್ರೋ ಫನಾನ್ಸ್, ಹೌಸಿಂಗ್ ಸ್ಕೀಂ ಹಾಗೂ ಗೋಲ್ಡ್ ಲೋನ್ ಕಂಪೆನಿಗಳ ವಂಚನೆಗಳ ಬಗ್ಗೆ ಗಮನ ಸೆಳೆದರು. ಅಲ್ಲದೆ, ಈ ಅಕ್ರಮಗಳಿಗೂ ತಡೆಯೊಡ್ಡಬೇಕು ಎಂದು ಆಗ್ರಹಿಸಿದರು.
“ಹೌಸಿಂಗ್ ಸ್ಕೀಂ, ಮೈಕ್ರೋ ಲೆಂಡಿಂಗ್, ಗೋಲ್ಡ್‌ಲೋನ್ ನಂತರ ಅಕ್ರಮಗಳನ್ನು ತಡೆಯಲು ಪ್ರತ್ಯೇಕ ಕಾನೂನು ಇದೆ. ಆ ಚಟುವಟಿಕೆಗಳು ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ವಿಧೇಯಕದ ಅಡಿ ಬರುವುದಿಲ್ಲ. ಆದರೆ, ಆ ಕಾನೂನುಗಳನ್ನೂ ಸಹ ಬಲಪಡಿಸಬೇಕು ಎಂದು ಸಿಎಂ ಸಿದ್ದರಾಮಯ್ಯನವರು ಸೂಚನೆ ನೀಡಿದ್ದಾರೆ. ಇಂತಹ ಮೋಸದ ಕಂಪೆನಿಗಳನ್ನು ಸಂಪೂರ್ಣವಾಗಿ ನಿಲ್ಲಿಸುವ ಕುರಿತೂ ಚಿಂತಿಸಲಾಗುತ್ತಿದೆ. ಕೆಲವು ಮೈಕ್ರೋ ಫೈನಾನ್ಸ್ ಹೆಸರಿನ ಕಂಪೆನಿಗಳು ಮಹಿಳೆಯರನ್ನು ಶೋಷಿಸುತ್ತಿದ್ದು, ಇಂತಹ ಚಟುವಟಿಕೆಗಳನ್ನು ತಡೆಗಟ್ಟಲು, ತದ್ಸಂಬದ್ದ ಕಾನೂನಿಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಹಣಕಾಸು ಇಲಾಖೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡುತ್ತೇನೆ” ಎಂದು ಸದನಕ್ಕೆ ಭರವಸೆ ನೀಡಿದರು.
ಇದನ್ನೂ ಓದಿ; ಮಂಡ್ಯ | ಮುಸ್ಲಿಂ ಯುವಕರನ್ನು ಸುತ್ತುವರೆದು ‘ಜೈ ಶ್ರೀರಾಮ್’ ಕೂಗುವಂತೆ ಒತ್ತಾಯಿಸಿದ ಬಜರಂಗದಳದ ದುಷ್ಕರ್ಮಿಗಳು


