ರಾಜ್ಯಪಾಲರ ಬದಲಾಗಿ ಮುಖ್ಯಮಂತ್ರಿಯನ್ನು ಕುಲಾಧಿಪತಿಯನ್ನಾಗಿ ಮಾಡುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ-2024 ಪ್ರತಿಪಕ್ಷ ಸದಸ್ಯರ ಸಭಾತ್ಯಾಗದ ನಡುವೆ ಮಂಗಳವಾರ (ಡಿ.17) ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ.
ವಿಧೇಯಕವನ್ನು ಸಮರ್ಥಿಸಿಕೊಂಡು ಸದನದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ” ಈ ಕಾನೂನು ವಿಶ್ವವಿದ್ಯಾಲಯದ ಆಡಳಿತವನ್ನು ಸುಧಾರಿಸಲಿದೆ ಮತ್ತು ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲು ನೆರವಾಗಲಿದೆ ಎಂದು ತಿಳಿಸಿದರು.
ಯಾವುದೇ ಕಾನೂನು ರಾಜ್ಯಪಾಲರು ಕುಲಪತಿಯಾಗಬೇಕು ಎಂಬುವುದಾಗಿ ಆದೇಶಿಸುವುದಿಲ್ಲ ಎಂದ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣದ ಮೇಲೆ ಕಾನೂನು ಮಾಡುವ ರಾಜ್ಯದ ಹಕ್ಕನ್ನು ಒತ್ತಿ ಹೇಳಿದರು.
ಪ್ರತಿಪಕ್ಷದ ಸದಸ್ಯರು ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿದರು. ಪ್ರತಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ಕಾಂಗ್ರೆಸ್ ಸರ್ಕಾರವು ರಾಜ್ಯಪಾಲರ ಏಕಮಾತ್ರ ಅಧಿಕಾರವನ್ನು ಕಸಿದುಕೊಂಡಿದೆ ಎಂದು ಆರೋಪಿಸಿದರು. ಮಸೂದೆಯನ್ನು ‘ವಿಭಜಕ’ ಎಂದು ಕರೆದರು.
ವಿಶ್ವವಿದ್ಯಾನಿಲಯದ ಸ್ವಾಯತ್ತತೆಯನ್ನು ಕಡಿಮೆ ಮಾಡುವ ‘ಹಿಮ್ಮುಖ ಹೆಜ್ಜೆ’ ಇದು ಎಂದು ಬಿಜೆಪಿ ಶಾಸಕ ಸಿ.ಎನ್ ಅಶ್ವಥ್ ನಾರಾಯಣ್ ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್ ಶಾಸಕರು ವಿಧೇಯಕವನ್ನು ವಿರೋಧಿಸಿ ಸದನದಿಂದ ಹೊರ ನಡೆದರು. ರಾಜ್ಯಪಾಲರನ್ನು ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿಯಾಗಿ ಏಕೆ ಮುಂದುವರಿಸಲು ಸಾಧ್ಯವಿಲ್ಲ? ಎಂದು ಶಾಸಕ ಆರಗ ಜ್ಞಾನೇಂದ್ರ ಪ್ರಶ್ನಿಸಿದರು.
ವಿಧೇಯಕವನ್ನು ಬೆಂಬಲಿಸಿದ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ, ಮುಖ್ಯಮಂತ್ರಿ ಮೂಲಕ ಉಪಕುಲಪತಿಗಳನ್ನು ನೇಮಕ ಮಾಡುವ ಗುಜರಾತ್‌ನ ಮಾದರಿಯನ್ನು ಉಲ್ಲೇಖಿಸಿದರು.
ಉಪಕುಲಪತಿಗಳನ್ನು ನೇಮಿಸುವ ಅಧಿಕಾರ ಮುಖ್ಯಮಂತ್ರಿಗೆ ನೀಡುವ ಕಾನೂನು ಪರಿಚಯಿಸುವ ಉದ್ದೇಶದ ಬಗ್ಗೆ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಈ ಹಿಂದೆ ಸೂಚನೆ ನೀಡಿದ್ದರು.
ಕರ್ನಾಟಕ ಕಾರ್ಮಿಕರ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ-2024 ಕೂಡ ಮಂಗಳವಾರ ವಿಧಾನಸಭೆಯಲ್ಲಿ ಅನುಮೋದನೆಗೊಂಡಿದೆ. ಮೂಲಕ ಈ ಮೊದಲು ಪ್ರತಿ ಕಾರ್ಮಿಕರಿಂದ 20 ರೂ., ಮಾಲಕರಿಂದ ಕಾರ್ಮಿಕರ ಪಾಲು 40 ರೂ., ಸರ್ಕಾರದಿಂದ ಕಾರ್ಮಿಕರ ಪಾಲು 20 ರೂ.ಗಳನ್ನು ಕಾರ್ಮಿಕ ಕಲ್ಯಾಣ ನಿಧಿಗೆ ಸಂಗ್ರಹಿಸುವುದನ್ನು ಹೆಚ್ಚಿಸಿ, ಕಾರ್ಮಿಕರಿಂದ 50 ರೂ., ಮಾಲಕರಿಂದ ಪ್ರತಿ ಕಾರ್ಮಿಕರಿಗೆ 100 ರೂ. ಹಾಗೂ ಸರ್ಕಾರದಿಂದ ಪ್ರತಿ ಕಾರ್ಮಿಕರಿಗೆ 50 ರೂ.ಗಳ ವಂತಿಗೆಯನ್ನು ಹೆಚ್ಚಿಸಲಾಗಿದೆ.
ಇದನ್ನೂ ಓದಿ : ಸಿಸೇರಿಯನ್ ಹೆರಿಗೆ ತಡೆಯಲು ಹೊಸ ಕಾರ್ಯಕ್ರಮ : ಸಚಿವ ದಿನೇಶ್ ಗುಂಡೂರಾವ್


