ತಮಿಳು ಹಾಗೂ ಬಹುಭಾಷಾ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರು ಬಿಜೆಪಿ ವಿರುದ್ಧ ಗರಂ ಆಗಿದ್ದಾರೆ. ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರನ್ನು ಭೇಟಿಯಾದ ಬಳಿಕ, ರಜನಿಕಾಂತ್ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಊಹಾಪೋಹಗಳು ಎಲ್ಲೆಡೆ ಹರಿದಾಡಿದ್ದವು. ಈ ಎಲ್ಲಾ ಸುದ್ದಿಗಳನ್ನು ರಜನಿಕಾಂತ್ ತಳ್ಳಿ ಹಾಕಿದ್ದಾರೆ. ತಿರುವಳ್ಳುರ್ ಅವರಂತೆ ನನ್ನನ್ನೂ ಕೇಸರಿಮಯ ಮಾಡುವ ಯತ್ನ ನಡೆದಿದೆ ಎಂದು ಹರಿಹಾಯ್ದರು.
ತಮಿಳುನಾಡಿನಲ್ಲಿ ೨೦೨೧ಕ್ಕೆ ನಡೆಯಲಿರುವ ವಿಧಾನಸಭೆ ಚುನಾವಣೆ ವೇಳೆ ನಟ ರಜನಿಕಾಂತ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಅವರನ್ನು ಕೇಸರಿಮಯ ಮಾಡಲಾಗುವುದು ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಚೆನ್ನೈನಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಬಿಜೆಪಿಯಿಂದ ಯಾವುದೇ ಆಫರ್ ಬಂದಿಲ್ಲ. ಯಾವುದೇ ಪಕ್ಷವನ್ನು ಸೇರಬೇಕೋ ಬೇಡವೋ ಎಂಬ ಬಗ್ಗೆ ಜನರು ತೀರ್ಮಾನಿಸಲಿದ್ದಾರೆ. ನನ್ನನ್ನು ಬಿಜೆಪಿ ಕೇಸರಿಮಯ ಮಾಡಲು ನೋಡುತ್ತಿದೆ. ಆದರೆ ಇದಕ್ಕೆ ಯಾವುದೇ ಅವಕಾಶವಿಲ್ಲ. ಅಷ್ಟು ಸುಲಭವಾಗಿ ನಮ್ಮನ್ನು ಭೇದಿಸಲು ಸಾಧ್ಯವಿಲ್ಲ ಎಂದರು.
ತಿರುವಳ್ಳುರ್ ಅವರನ್ನು ಕೇಸರಿಮಯ ಮಾಡಲು ಯತ್ನಿಸಿದಂತೆ, ರಜನಿಕಾಂತ್ ಅವರನ್ನೂ ಕೇಸರಿಮಯವನ್ನಾಗಿ ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದರು. ತಮಿಳು ಹೊಸ ವರ್ಷವಾದ ನವೆಂಬರ್ ೨ರಂದು ತಮಿಳುನಾಡು ಬಿಜೆಪಿ ಘಟಕವು, ತಮಿಳಿನ ಖ್ಯಾತ ದಾರ್ಶನಿಕ ಕವಿ ತಿರುವಳ್ಳುರ್ ಅವರಿಗೆ ಕೇಸರಿ ನಿಲುವಂಗಿ ತೊಡಿಸಿದ ಚಿತ್ರವನ್ನು ಟ್ವೀಟ್ ಮಾಡಿತ್ತು. ಅದಕ್ಕೆ ಭಾರೀ ಪ್ರತಿರೋಧ ಎದುರಾಗಿತ್ತು.
“ತಿರುವಳ್ಳುರ್ ಅವರು ಬೌದ್ಧಿಕವಾಗಿ ಕೃಷಿ ಮಾಡಿದವರು. ಅಂತಹವರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಬಾರದು. ಇಂತಹ ವ್ಯಕ್ತಿಗಳನ್ನು ಧರ್ಮದ ಬಂಧನದಲ್ಲಿ ಬಂಧಿಸುವುದು ತಪ್ಪಾಗುತ್ತದೆ. ತಿರುವಳ್ಳುರ್ ನಾಸ್ತಿಕರಲ್ಲ. ಅವರು ನಂಬಿಕೆ ಉಳ್ಳವರು. ಅವರನ್ನು ಯಾರೂ ಮರೆಯಲು ಸಾಧ್ಯವಿಲ್ಲ” ಎಂದು ರಜನೀಕಾಂತ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
“ಬಿಜೆಪಿ ಪಕ್ಷವು ಕೇಸರಿ ಬಣ್ಣಕ್ಕೆ ಪೇಟೆಂಟ್ ಪಡೆದಿಟ್ಟುಕೊಂಡಂತೆ ಕಾಣುತ್ತೆ. ದೇಶದಲ್ಲಿ ಚರ್ಚಿಸಲು ಸಾಕಷ್ಟು ವಿಷಯಗಳಿವೆ. ಸಮಾಜವನ್ನು ಕಾಡುತ್ತಿರುವ ಅತಿದೊಡ್ಡ ಸಮಸ್ಯೆಗಳಿವೆ. ಅವುಗಳ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು, ಬರೀ ಕೇಸರಿ ಬಣ್ಣದ ಬಟ್ಟೆ ಧರಿಸುವುದನ್ನೇ ದೊಡ್ಡ ಸಮಸ್ಯೆಯನ್ನಾಗಿ ಬಿಂಬಿಸಲಾಗುತ್ತಿದೆ. ಇದೆಲ್ಲಾ ಸಿಲ್ಲಿಯಾಗಿದೆ” ಎಂದರು.
“ಇಂದು ನೋಟ್ ನಿಷೇಧಕ್ಕೆ ೩ ವರ್ಷ ಸಂದಿದೆ. ಭಾರತದ ಆರ್ಥಿಕತೆ ನೆಲಕಚ್ಚಿದೆ. ಅಭಿವೃದ್ಧಿ ಮಂದಗತಿಯಲ್ಲಿ ಸಾಗುತ್ತಿದೆ. ಕೇಂದ್ರ ಸರ್ಕಾರ ಕುಸಿಯುತ್ತಿರುವ ಆರ್ಥಿಕತೆಯನ್ನು ಸುಧಾರಿಸಲು ಸೂಕ್ತ ಕ್ರಮ ಕೈಗೊಳ್ಳುವತ್ತ ಹೆಜ್ಜೆಯಿಡಬೇಕು” ಎಂದು ಹೇಳಿದರು.


