ವಕ್ಫ್ ಆಸ್ತಿಗಳ ಒಡೆತನ, ಖಾತೆ ವರ್ಗಾವಣೆ ಸಂಬಂಧಿಸಿದ ಗೊಂದಲಗಳ ಪರಿಶೀಲನೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ (ಡಿ.18) ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ.
ವಕ್ಫ್ ಮಂಡಳಿಯು ರೈತರು, ಮಠ-ಮಂದಿರಗಳ ಆಸ್ತಿಯನ್ನು ಕಬಳಿಸುತ್ತಿದೆ ಎಂದು ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆಗೆ ಸದನದಲ್ಲಿ ಉತ್ತರ ನೀಡಿದ ಸಿಎಂ, “ರೈತರಿಗೆ ಮಂಜೂರಾದ ಜಮೀನು, ಮಠ-ಮಂದಿರಗಳ ಆಸ್ತಿ ಮತ್ತು ರುದ್ರಭೂಮಿಗಳ ಜಮೀನಿನ ಮೇಲೆ ವಕ್ಫ್ ಮಂಡಳಿ ಹಕ್ಕು ಸಾಧಿಸುವುದಿಲ್ಲ. ಇದರ ಹೊರತಾಗಿಯೂ ಗೊಂದಲಗಳಿದ್ದರೆ ಪರಿಹಾರ ಕಂಡುಕೊಳ್ಳಲು ಸಮಿತಿ ರಚಿಸಲಾಗುವುದು ಎಂದಿದ್ದಾರೆ.
ಇನಾಂ ರದ್ದತಿ ಕಾಯ್ದೆ ಮತ್ತು ಕರ್ನಾಟಕ ಭೂ ಸುಧಾರಣಾ ಕಾಯ್ದೆಯಡಿ ರೈತರಿಗೆ ಮಂಜೂರಾಗಿರುವ ಯಾವುದೇ ಜಮೀನಿನ ಮೇಲೆ ವಕ್ಫ್ ಮಂಡಳಿ ಹಕ್ಕು ಸಾಧಿಸಲು ಅವಕಾಶ ನೀಡುವುದಿಲ್ಲ. ದೇವಸ್ಥಾನ, ರುದ್ರಭೂಮಿ ಮತ್ತು ಶಾಲೆಗಳು ವಕ್ಫ್ ಆಸ್ತಿಯಲ್ಲಿದ್ದರೆ ಅಂತಹ ಆಸ್ತಿಗಳ ಮೇಲಿನ ಹಕ್ಕನ್ನೂ ತ್ಯಜಿಸಲು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸಭೆಯಲ್ಲಿ ತೀರ್ಮಾನವಾಗಿದೆ ಎಂದು ವಕ್ಫ್ ಸಚಿವ ಝಮೀರ್ ಅಹ್ಮದ್ ತಿಳಿಸಿದ್ದಾರೆ. ಅವರ ಸಲಹೆಯಂತೆ ವಕ್ಫ್ ಆಸ್ತಿಯಲ್ಲಿರುವ ದೇವಸ್ಥಾನ, ರುದ್ರಭೂಮಿ ಮತ್ತು ಶಾಲೆಗಳಿಗೆ ರಕ್ಷಣೆ ದೊರೆಯಲಿದೆ ಎಂದು ಸಿಎಂ ತಿಳಿಸಿದ್ದಾರೆ.
ವಕ್ಫ್ ಆಸ್ತಿ ಸಂಬಂಧ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ನಮ್ಮ ಸರ್ಕಾರ ಸಿದ್ಧವಿದೆ. pic.twitter.com/0TpYaEO7G1
— Siddaramaiah (@siddaramaiah) December 18, 2024
ಯಾವುದೇ ಖಾಸಗಿ ಆಸ್ತಿಗೆ ವಕ್ಫ್ ಮಂಡಳಿ ನೋಟಿಸ್ ನೀಡಿದ್ದರೆ, ಮಂಜೂರಾದ ಜಮೀನುಗಳ ಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದರೆ, ಇನಾಂ ರದ್ದತಿ ಕಾಯ್ದೆ ಮತ್ತು ಭೂ ಸುಧಾರಣಾ ಕಾಯ್ದೆಯಡಿ ಹಕ್ಕು ಮಂಡನೆ ಬಾಕಿ ಉಳಿದಿದ್ದರೆ ಸಮಿತಿ ಮುಂದೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು. ಸಮಿತಿಯು ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳುತ್ತದೆ ಎಂದು ಸಿಎಂ ಹೇಳಿದ್ದಾರೆ.
ವಕ್ಫ್ ಅದಾಲತ್ ಅನ್ನು ಬಿಜೆಪಿಯವರು ತಪ್ಪಾಗಿ ಬಿಂಬಿಸಿದರು- ಸಚಿವ ಝಮೀರ್ ಅಹ್ಮದ್
ವಕ್ಫ್ ಮಂಡಳಿಗೆ ಸೇರಿದ ಆಸ್ತಿಗಳ ರಕ್ಷಣೆ ಹಾಗೂ ಗೊಂದಲಗಳ ನಿವಾರಣೆಗೆ ನಾನು ವಕ್ಫ್ ಆದಾಲತ್ ನಡೆಸಿದ್ದೆ. ಅದನ್ನೇ ಬಿಜೆಪಿಯವರು ತಪ್ಪಾಗಿ ಬಿಂಬಿಸಿದರು. ಕೇಂದ್ರ ಸರ್ಕಾರ ರೂಪಿಸಿರುವ ಕಾಯ್ದೆಯಂತೆ ವಕ್ಫ್ ಆಸ್ತಿಗಳ ರಕ್ಷಣೆ ಕಾರ್ಯ ನಡೆದಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸೇರಿ ಎಲ್ಲಾ ಸರ್ಕಾರಗಳ ಅವಧಿಯಲ್ಲಿ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಚ್ಚು ನೋಟಿಸ್‌ಗಳನ್ನು ನೀಡಲಾಗಿತ್ತು ಎಂದು ಸಚಿವ ಝಮೀರ್ ಅಹ್ಮದ್ ಹೇಳಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗಲೇ 2010, 2020 ಮತ್ತು 2021ರಲ್ಲಿ ನಾಲ್ಕು ಆದೇಶಗಳನ್ನೂ ಹೊರಡಿಸಲಾಗಿದೆ ಎಂದು ಸದನದಲ್ಲಿ ದಾಖಲೆ ಪ್ರದರ್ಶಿಸಿದರು.
ರಾಜ್ಯದಲ್ಲಿ 1.28 ಲಕ್ಷ ಎಕರೆ ವಕ್ಫ್ ಆಸ್ತಿಯಿತ್ತು. ಅದೆಲ್ಲ ದಾನಿಗಳು ಸಮಾಜದ ಶ್ರೇಯೋಭಿವೃದ್ದಿಗಾಗಿ ನೀಡಿರುವಂತದ್ದು. ಖಬರಸ್ಥಾನಗಳನ್ನು ಹೊರತುಪಡಿಸಿ ಒಂದೇ ಒಂದು ಇಂಚು ಜಾಗವನ್ನು ವಕ್ಫ್ ಮಂಡಳಿ ಸರ್ಕಾರದಿಂದ ಪಡೆದಿಲ್ಲ. 1.28 ಲಕ್ಷ ಎಕರೆಯಲ್ಲಿ ಇನಾಂ ರದ್ದತಿ ಕಾಯ್ದೆಯಡಿ 47,263 ಎಕರೆ, ಭೂ ಸುಧಾರಣಾ ಕಾಯ್ದೆಯಡಿ 23,620 ಎಕರೆ, ಸರ್ಕಾರದ ವಿವಿಧ ಯೋಜನೆಗಳಿಗೆ ಸ್ವಾಧೀನಪಡಿಸಿಕೊಳ್ಳುವ ಮೂಲಕ 3 ಸಾವಿರ ಎಕರೆ ಹೋಗಿದೆ. ಉಳಿದಿರುವುದು 17, 966 ಎಕರೆ ಮಾತ್ರ ಎಂದು ಝಮೀರ್ ಅಹ್ಮದ್ ತಿಳಿಸಿದರು.
ಸುಳ್ಳು ಹಬ್ಬಿಸಿ ಜನರಲ್ಲಿ ಭೀತಿ ಹುಟ್ಟಿಸಲಾಗುತ್ತಿದೆ – ಸಚಿವ ಕೃಷ್ಣಬೈರೇಗೌಡ
ವಕ್ಫ್ ಆಸ್ತಿಯನ್ನು ಶೇ.95ರಷ್ಟು ಒತ್ತುವರಿ ಮಾಡಿರುವುದು ಮುಸ್ಲಿಮರೇ ಆಗಿದ್ದಾರೆ. ವಕ್ಫ್ ಆಸ್ತಿಯ ಹೆಸರಿನಲ್ಲಿ ರೈತರು ಉಳುಮೆ ಮಾಡುತ್ತಿರುವ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಸುಳ್ಳು ಹಬ್ಬಿಸಲಾಗುತ್ತಿದೆ. ಈ ಮೂಲಕ ಒಗ್ಗಟ್ಟಿನಿಂದ ಇರುವ ಗ್ರಾಮೀಣ ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದಾರೆ. ಎಲ್ಲಾ ಸರ್ಕಾರಗಳ ಅವಧಿಯಲ್ಲಿ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದೆ. ವಕ್ಫ್ ಆಸ್ತಿ ಅತಿಕ್ರಮಣದ ವಿರುದ್ದ ಕಾರ್ಯಪಡೆ ರಚಿಸಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದೇಶವಾಗಿತ್ತು. ಹೀಗಿದ್ದರೂ, ರೈತರು, ದೇವಸ್ಥಾನಗಳ ಆಸ್ತಿಯನ್ನು ಕಸಿದುಕೊಳ್ಳಲಾಗತ್ತಿದೆ ಎಂದು ಬಿಜೆಪಿಗರು ವಿವಾದ ಎಬ್ಬಿಸಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದರು.
ವಕ್ಫ್ ಮಂಡಳಿಗೆ 1,12,000 ಎಕರೆ ಜಮೀನು ನೋಟಿಫೈ ಆಗಿತ್ತು. 47,263 ಎಕರೆ ಇನಾಂ ರದ್ಧತಿ ಹಾಗೂ 23,620 ಎಕರೆಯನ್ನು ಭೂಸುಧಾರಣಾ ಕಾಯಿದೆಯಡಿ ರೈತರಿಗೆ ಮಂಜೂರು ಮಾಡಲಾಗಿದೆ. ಒಟ್ಟು 70 ಸಾವಿರ ಎಕರೆ ರೈತರ ವಶದಲ್ಲಿದೆ. ಇನಾಮ್ ರದ್ದತಿ ಮತ್ತು ಭೂ ಸುಧಾರಣೆ ಕಾಯ್ದೆಯಡಿ ಭೂಮಿ ಮಂಜೂರಾದ ರೈತರ ತಂಟೆಗೆ ಸರ್ಕಾರ ಹೋಗುವುದಿಲ್ಲ. ವಕ್ಫ್ ಜಮೀನಿನಲ್ಲಿ ಮಸೀದಿ, ದರ್ಗಾ, ಖಬರ್‌ಸ್ತಾನ ಇದೆ. ಅಂತದ್ದು ಒತ್ತುವರಿ ಆಗಿದ್ದರೆ ಅದನ್ನು ಬಿಟ್ಟು ಕೊಡುವಂತೆ ಹೇಳಿದ್ದಾರೆ. ನೀರಾವರಿ ಹಾಗೂ ಇನ್ನಿತರೆ ಉದ್ದೇಶಗಳಿಗೆ 3,101 ಎಕರೆಯನ್ನು ಸರ್ಕಾರ ಸ್ವಾಧೀನಕ್ಕೆ ಪಡೆದಿದೆ. ಸುಮಾರು 17,969 ಎಕರೆಯನ್ನು ಖಾಸಗಿಯವರು ಒತ್ತುವರಿ ಮಾಡಿದ್ದಾರೆ ಕೃಷ್ಣಬೈರೆಗೌಡ ಸದನಕ್ಕೆ ತಿಳಿಸಿದರು.
ಬಿಜೆಪಿಗೆ ಕೈಕೊಟ್ಟ ಜೆಡಿಎಸ್
ವಕ್ಫ್ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಭಾತ್ಯಾಗ ಮಾಡಿತು. ಆದರೆ, ಅದರ ಮಿತ್ರಪಕ್ಷ ಜೆಡಿಎಸ್‌ನ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಸೇರಿದಂತೆ ಸದಸ್ಯರಾದ ಎ. ಮಂಜು, ಶಾರದಾ ಪೂರ್ಯಾನಾಯ್ಕ್, ಜಿ.ಟಿ ದೇವೇಗೌಡ ಸದನದಲ್ಲೇ ಉಳಿಯುವ ಮೂಲಕ ಬಿಜೆಪಿ ಮುಖಭಂಗ ಉಂಟು ಮಾಡಿದರು. ಸರ್ಕಾರ ನೀಡಿದ ಸುದೀರ್ಘ ಉತ್ತರಕ್ಕೆ ಸುರೇಶ್ ಬಾಬು ಅಭಿನಂದಿಸಿದರು. ಈ ಮೂಲಕ ಬಿಜೆಪಿ ಹೋರಾಟಕ್ಕೆ ನಮ್ಮ ಬೆಂಬಲ ಇಲ್ಲ ಎಂಬ ಸಂದೇಶ ನೀಡಿದರು. ಇದೇ ವೇಳೆ ಬಿಜೆಪಿ ಸದಸ್ಯರಾದ ಎಸ್.ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಕೂಡ ಸದನದಲ್ಲೇ ಉಳಿಯುವ ಮೂಲಕ ಗಮನಸೆಳೆದರು.
ಇದನ್ನೂ ಓದಿ : ಕೆಐಎಡಿಬಿ ಭೂ ಸ್ವಾಧೀನ ಪರಿಹಾರದ ಹಣ ಆರ್‌ಟಿಜಿಎಸ್ ಮೂಲಕ ಪಾವತಿ: ಸಚಿವ ಎಂ.ಬಿ. ಪಾಟೀಲ್


