ದೇವಸ್ಥಾನ ಪ್ರವೇಶಿಸಿದ ದಲಿತರನ್ನು ಹೊರದಬ್ಬಿದ ಸವರ್ಣೀಯರು, ಅವರಿಗೆ ಎರಡೂವರೆ ಲಕ್ಷ ರೂಪಾಯಿ ದಂಡ ವಿಧಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೀರೂರು ಹೋಬಳಿಯ ಬಿ.ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿರುವ ಆರೋಪ ಕೇಳಿ ಬಂದಿದೆ.
ಡಿಸೆಂಬರ್ 17ರಂದು ರಾತ್ರಿ ಗ್ರಾಮದ ಮಂಜಪ್ಪ ಮತ್ತು ಮದನ್ ಎಂಬವರು ಪೂಜೆ ಮಾಡಿಸಲು ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿದ್ದರು. ಈ ವೇಳೆ ಅವರು ದೇವಸ್ಥಾನದ ಒಳಗೆ ಪ್ರವೇಶಿಸಿ ಪಾವಿತ್ರ್ಯತೆ ಹಾಳು ಮಾಡಿದ್ದಾರೆ ಎಂದು ಆರೋಪಿಸಿ ಹೊರದಬ್ಬಲಾಗಿದೆ. ಅಲ್ಲದೆ, ದೇವಸ್ಥಾನವನ್ನು ಶುದ್ದೀಕರಿಸಲು 2.50 ಲಕ್ಷ ರೂ. ನೀಡುವಂತೆ ದೌರ್ಜನ್ಯವೆಸಗಿದ್ದಾರೆ ಮತ್ತು ದೇವಸ್ಥಾನದ ಕಾಂಪೌಂಡ್‌ಗೆ ಬೀಗ ಹಾಕಿ ದಲಿತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದಾರೆ. ದೇವಸ್ಥಾನದಲ್ಲಿ ಪೂಜೆಯನ್ನೂ ನಿಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ.
ದೇವಸ್ಥಾನ ಪೂಜಾರಿ ಮಲ್ಲೇಶಪ್ಪ, ಪ್ರವೀಣ, ಶೇಖರಪ್ಪ, ವಿಜಯಕುಮಾರ್ ಹಾಗೂ ರಮೇಶ ಜಾತಿ ಮುಂದಿಟ್ಟು ದೌರ್ಜನ್ಯ ಎಸಗಿದ್ದಾರೆ ಎಂದು ಕಡೂರು ತಹಶೀಲ್ದಾರ್‌ಗೆ ನೀಡಿದ ದೂರಿನಲ್ಲಿ ಗ್ರಾಮದ ಮಂಜಪ್ಪ ಆರೋಪಿಸಿದ್ದಾರೆ. ಜಾತಿ ದೌರ್ಜನ್ಯವೆಸಗಿದವರ ವಿರುದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ತಮಗೆ ದೇವಸ್ಥಾನ ಪ್ರವೇಶಿಸಿ, ಪೂಜೆ ಮಾಡಲು ಅನುವು ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.

ವರದಿಗಳ ಪ್ರಕಾರ, ತಹಶೀಲ್ದಾರ್‌ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂತ್ರಸ್ತರು ದೂರಿದ್ದು, ಗುರುವಾರ (ಡಿ.19) ಚಿಕ್ಕಮಗಳೂರು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಎಸ್ಪಿಗೆ ದೂರು ನೀಡಿದ್ದಾರೆ. ಅಸ್ಪೃಶ್ಯತೆ ಆಚರಣೆ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಇದನ್ನೂ ಓದಿ : ಮಂಡ್ಯ | ಧ್ವಜಾರೋಹಣದ ಮೂಲಕ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ


