ದಲಿತ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಕುರವಾಲಿ ಡೆವಲಪ್‌ಮೆಂಟ್ ಬ್ಲಾಕ್‌ನ ರೀಚ್‌ಪುರ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಸುಮಾರು 10 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಕಳೆದ ಗುರುವಾರ ಮಕ್ಕಳ ಮೈಮೇಲೆ ಗಾಯಗಳಿರುವುದನ್ನು ಗಮನಿಸಿ ಪೋಷಕರು ಆತಂಕ ವ್ಯಕ್ತಪಡಿಸಿದ ಬಳಿಕ ಬೆಳಕಿಗೆ ಬಂದಿದೆ.
ಮಕ್ಕಳ ಮೈಮೇಲೆ ಗಾಯಗಳಿರುವ ವಿಡಿಯೋವೊಂದು ಕಳೆದ ವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವ 40 ರ ಹರೆಯದ ಅನಿತಾ ಗುಪ್ತಾ ಎಂಬುವವರು ಕ್ಷುಲ್ಲಕ ವಿಷಯಗಳಿಗೆ ನಿಯಮಿತವಾಗಿ ತಮ್ಮ ಮಕ್ಕಳನ್ನು ಹೊಡೆಯುತ್ತಾರೆ; ಅವರ ದುರ್ವರ್ತನೆಯು ಮರುಕಳಿಸುವ ವಿಷಯವಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
“ಮೇಡಂ ನಮ್ಮ ಮೇಲೆ ತುಂಬಾ ಸಿಟ್ಟಾಗುತ್ತಾರೆ” ಎಂದು ದಲಿತ ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ.
ಗುಪ್ತಾ ಅವರು ಆರು-ಏಳು ದಲಿತ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ, ನಿರ್ದಿಷ್ಟವಾಗಿ ಅವರ ಜಾತಿಯ ಕಾರಣದಿಂದ. ಹೆಚ್ಚು ಸವಲತ್ತು ಹೊಂದಿರುವ ಮಕ್ಕಳ ಬಗ್ಗೆ ಒಲವು ತೋರುವಾಗ ಅವರು ದಲಿತ ವಿದ್ಯಾರ್ಥಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ, ತಾರತಮ್ಯ ಮಾಡಿದ್ದಾರೆ ಎಂದು ಪೋಷಕರು ಹೇಳಿದರು.
‘ಶಿಕ್ಷಕಿ ನಮ್ಮ ಮಕ್ಕಳನ್ನು ಅಸ್ಪೃಶ್ಯರೆಂದು ಪರಿಗಣಿಸಿ ಥಳಿಸುತ್ತಾಳೆ’ ಎಂದು ಒಬ್ಬ ವಿದ್ಯಾರ್ಥಿಯ ತಂದೆ ಅಮರ್ ಸಿಂಗ್ ಹೇಳಿದ್ದಾರೆ.
ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಬಗ್ಗೆ ತನಿಖೆ ಆರಂಭಿಸಿದೆ. ಅನಿತಾ ಗುಪ್ತಾ ವಿದ್ಯಾರ್ಥಿಗಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿರುವುದನ್ನು ಶನಿವಾರ ಅಧಿಕಾರಿಗಳು ಖಚಿತಪಡಿಸಿದ್ದಾರೆ. “ಜಾತಿವಾದಿ ಹೇಳಿಕೆಗಳ ಆರೋಪಗಳನ್ನು ಸಮರ್ಥಿಸುವ ಯಾವುದೇ ಪುರಾವೆಗಳು ಕಂಡುಬಂದಿಲ್ಲ” ಎಂದು ಅವರು ಹೇಳಿದರು.
ಮೂಲ ಶಿಕ್ಷಾ ಅಧಿಕಾರಿ ದೀಪಿಕಾ ಗುಪ್ತಾ ಮಾತನಾಡಿ, “ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಕ್ಕಳ ವೀಡಿಯೊಗಳು ಕಾಣಿಸಿಕೊಂಡವು. ಆದರೆ, ತನಿಖೆಯಲ್ಲಿ ಆಕೆಯ ವಿರುದ್ಧ ಜಾತಿ ಸಂಬಂಧಿತ ಆರೋಪಗಳು ದೃಢೀಕರಿಸಲ್ಪಟ್ಟಿಲ್ಲ. ಅವರು ತಪ್ಪಿತಸ್ಥರೆಂದು ಕಂಡುಬಂದಿದೆ. ವಿದ್ಯಾರ್ಥಿಗಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದು, ಆಕೆಯನ್ನು ಅಮಾನತುಗೊಳಿಸಲಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ; ಮಹಾರಾಷ್ಟ್ರ ಖಾತೆ ಹಂಚಿಕೆ | ಶಿಂದೆಗೆ ಎರಡು ಮತ್ತೊಂದು, ಅಜಿತ್‌ಗೆ ಹಣಕಾಸು


