ಮುಸ್ಲಿಂ ಯುವಕನಿಗೆ ಥಳಿಸಿ, ಉಗುಳು ನೆಕ್ಕುವಂತೆ ಬಲವಂತ ಮಾಡಿದ ಘಟನೆ ಬಿಹಾರದ ಮುಝಫ್ಪರ್‌ಪುರದಲ್ಲಿ ನಡೆದಿದೆ.
ಆರೋಪಿಗಳು ತಮ್ಮ ದುಷ್ಕೃತ್ಯದ ವಿಡಿಯೋ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಅದು ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ವರದಿಗಳ ಪ್ರಕಾರ, ಡಿಸೆಂಬರ್ 16ರಂದು ಮುಝಫ್ಫರ್‌ಪುರದ ಎಂಎಸ್‌ಕೆಬಿ ಕಾಲೇಜು ಬಳಿ ಘಟನೆ ನಡೆದಿದೆ. ಈ ಸಂಬಂಧ ಸಂತ್ರಸ್ತ ಯುವಕ ನಬಿ ಹಸನ್ ತಾಯಿ ಫರ್ಝಾನಾ ದೂರು ದಾಖಲಿಸಿದ್ದು, ಅದನ್ನು ಆಧರಿಸಿ ಮೂವರು ಗುರುತಿಸಲ್ಪಟ್ಟ ವ್ಯಕ್ತಿಗಳು ಮತ್ತು ಇತರ ಐವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
“ಫೇಸ್ಬುಕ್‌ನಲ್ಲಿ ಹಲ್ಲೆಯ ವಿಡಿಯೋ ವೈರಲ್ ಆದ ನಂತರವೇ ನಮಗೆ ವಿಷಯ ತಿಳಿಯಿತು. ಆರೋಪಿಗಳು ಚಾಕು ತೋರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಮಗ ಬೆದರಿ ಸುಮ್ಮನಿದ್ದ. ಆದರೆ, ಇದೀಗ ವಿಡಿಯೋ ವೈರಲ್ ಆದ ಬಳಿಕ ಪ್ರಶ್ನಿಸಿದಾಗ ಎಲ್ಲವೂ ಬಯಲಾಗಿದೆ. ನೆಲದಿಂದ ಉಗುಳು ನೆಕ್ಕುವಂತೆ ನನ್ನ ಮಗನಿಗೆ ಬಲವಂತ ಮಾಡಲಾಗಿದೆ, ಆತನಿಂದ 2000ರೂ. ಹಣವನ್ನು ದೋಚಲಾಗಿದೆ” ಎಂದು ಫರ್ಝಾನಾ ಅವರು ಆರೋಪಿಸಿದ್ದಾರೆ.
ಪ್ರಕರಣದ ಕುರಿತು ಮಾತನಾಡಿದ ಮುಝಫ್ಪರ್‌ಪುರ್ ನಗರ ಪೊಲೀಸ್ ಠಾಣೆ ಪ್ರಭಾರಿ ಶರತ್ ಕುಮಾರ್, ವಿಡಿಯೋ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗುವುದು ಮತ್ತು ಪ್ರಕರಣದ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಪರ್ಭಾನಿಯಲ್ಲಿ ಪೊಲೀಸರಿಂದ ದಲಿತ ವ್ಯಕ್ತಿ ಹತ್ಯೆ, ಸಿಎಂ ಸುಳ್ಳು ಹೇಳಿದ್ದಾರೆ: ರಾಹುಲ್ ಗಾಂಧಿ ಆರೋಪ


