ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಂಗಳು ಅತ್ಯಾಚಾರ, ಆ್ಯಸಿಡ್ ದಾಳಿ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
16 ವರ್ಷದ ಬಾಲಕಿಯ ಮೇಲೆ ಆಕೆಯ ತಂದೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಪ್ರತಿಭಾ ಎಂ ಸಿಂಗ್ ಮತ್ತು ಅಮಿತ್ ಶರ್ಮಾ ಅವರ ಪೀಠ ಸೋಮವಾರ (ಡಿ.23) ಹಲವು ನಿರ್ದೇಶನಗಳನ್ನು ನೀಡಿದೆ.
ಎಲ್ಲಾ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಕ್ಲಿನಿಕ್‌ಗಳು, ವೈದ್ಯಕೀಯ ಕೇಂದ್ರಗಳು ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೊಳಗಾದವರು, ಪೋಕ್ಸೋ ಪ್ರಕರಣದ ಸಂತ್ರಸ್ತರು ಮತ್ತು ಇಂತದ್ದೇ ಪ್ರಕರಣಗಳ ಇತರ ಸಂತ್ರಸ್ತರಿಗೆ ಉಚಿತ ವೈದ್ಯಕೀಯ ಆರೈಕೆ ಮತ್ತು ಚಿಕಿತ್ಸೆ ಒದಗಿಸುವುದು ಕರ್ತವ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಲೈಂಗಿಕ ದೌರ್ಜನ್ಯಕ್ಕೊಳಗಾದವರಿಗೆ ಚಿಕಿತ್ಸೆ ನಿರಾಕರಿಸುವುದು ಅಪರಾಧವಾಗಿದ್ದು, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಮತ್ತು ಆಡಳಿತ ಮಂಡಳಿಗೆ ದಂಡ ವಿಧಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ.
ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳಲ್ಲಿ ಸಂತ್ರಸ್ತರು ವೈದ್ಯಕೀಯ ಚಿಕಿತ್ಸೆ ಪಡೆಯುವಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದಿರುವ ಪೀಠ, ಉಚಿತ ಚಿಕಿತ್ಸೆ ಎಂದರೆ, ಸಂತ್ರಸ್ತರಿಗೆ ಪ್ರಾಥಮಿಕ ಚಿಕಿತ್ಸೆ, ಅಗತ್ಯವಿದ್ದರೆ ದೀರ್ಘಾವದಿಯ ಚಿಕಿತ್ಸೆ, ರೋಗ ನಿರ್ಣಯ ಪರೀಕ್ಷೆಗಳು, ಮಾನಸಿಕ ಸಮಾಲೋಚನೆ (ಆಪ್ತ ಸಮಾಲೋಚನೆ) ಯು ಸೇರಿದೆ ಎಂದು ವಿವರಿಸಿದೆ.
ವೈದ್ಯಕೀಯ ಕೇಂದ್ರಗಳಿಗೆ ನ್ಯಾಯಾಲಯದ ನಿರ್ದೇಶಿಸಿದ ಮಾರ್ಗಸೂಚಿಗಳು
- ದೆಹಲಿಯ ಪ್ರತಿಯೊಂದು ವೈದ್ಯಕೀಯ ಕೇಂದ್ರಗಳು ‘ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಆ್ಯಸಿಡ್ ದಾಳಿಯ ಸಂತ್ರಸ್ತರಗೆ ಉಚಿತ ಹೊರರೋಗಿ ಮತ್ತು ಒಳರೋಗಿ ವೈದ್ಯಕೀಯ ಚಿಕಿತ್ಸೆ’ ಲಭ್ಯವಿದೆ ಎಂದು ಬೋರ್ಡ್ ಹಾಕಬೇಕು.
- ಅತ್ಯಾಚಾರ ಸಂತ್ರಸ್ತೆ ಆಸ್ಪತ್ರೆಗೆ ಬಂದ ತಕ್ಷಣ ಅವರನ್ನು ಪರೀಕ್ಷಿಸಿ ಚಿಕಿತ್ಸೆ ಪ್ರಾರಂಭಿಸಬೇಕು. ಅಗತ್ಯವಿದ್ದರೆ ಲೈಂಗಿಕ ಸಂಪರ್ಕದ ಮೂಲಕ ಹರಡುವ ಹೆಚ್‌ಐವಿಯಂತಹ ರೋಗಗಳನ್ನು ತಡೆಗಟ್ಟಲು ಚಿಕಿತ್ಸೆ ನೀಡಬೇಕು. ಸಂತ್ರಸ್ತೆಗೆ ಆಪ್ತ ಸಮಾಲೋಚನೆಯ ಮೂಲಕ ಮಾನಸಿಕ ಚಿಕಿತ್ಸೆ ಒದಗಿಸಬೇಕು. ಸಂತ್ರಸ್ತೆ ಗರ್ಭಿಣಿಯಾಗುವ ಸಾಧ್ಯತೆಯಿದ್ದರೆ, ಗರ್ಭ ನಿರೋಧಕ ನೀಡಬೇಕು.
- ತುರ್ತು ಸಂದರ್ಭಗಳಲ್ಲಿ, ಸಂತ್ರಸ್ತೆಯನ್ನು ದಾಖಲಿಸಿಕೊಳ್ಳಲು ಸಂಬಂಧಪಟ್ಟ ವೈದ್ಯಕೀಯ ಕೇಂದ್ರಗಳು ಯಾವುದೇ ಗುರುತಿನ ಚೀಟಿಗಳನ್ನು, ದಾಖಲೆಗಳನ್ನು ನೀಡುವಂತೆ ಒತ್ತಾಯಿಸಬಾರದು.
ಮಗಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಮೇಲಿನ ನಿರ್ದೇಶನಗಳನ್ನು ನೀಡಿದೆ.
ಈ ಪ್ರಕರಣದಲ್ಲಿ ನ್ಯಾಯಾಲಯ ಮತ್ತು ದೆಹಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಡಿಎಲ್‌ಎಸ್‌ಎ) ಹಲವು ಭಾರೀ ಹಲವು ಬಾರಿ ಮಧ್ಯ ಪ್ರವೇಶಿಸಿದ ಹೊರತಾಗಿಯೂ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಸಂತ್ರಸ್ತೆ ಕಾಯಬೇಕಾಯಿತು ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿದೆ.
ಇದನ್ನೂ ಓದಿ : ಬಿಹಾರ | ಮುಸ್ಲಿಂ ಯುವಕನಿಗೆ ಥಳಿಸಿ, ಉಗುಳು ನೆಕ್ಕುವಂತೆ ಬಲವಂತ ; ಎಫ್‌ಐಆರ್ ದಾಖಲು


