ಚುನಾವಣಾ ದಾಖಲೆಗಳನ್ನು ಒದಗಿಸುವಂತೆ ಪಂಜಾಬ್ – ಹರಿಯಾಣ ಹೈಕೋರ್ಟ್ ನಿರ್ದೇಶನ ನೀಡಿದ ನಂತರ ಚುನಾವಣಾ ನೀತಿಯನ್ನೆ ಕೇಂದ್ರ ಸರ್ಕಾರ ಬದಲಾಯಿಸಿರುವುದರ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಹೇಳಿದೆ. ಇತ್ತಿಚಿನ ಹರಿಯಾಣದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮತಗಟ್ಟೆಯಲ್ಲಿ ಪಡೆದ ಮತಗಳಿಗೆ ಸಂಬಂಧಿಸಿದ ದಾಖಲೆಗಳ ಪ್ರತಿಗಳನ್ನು ವಕೀಲರೊಬ್ಬರಿಗೆ ಒದಗಿಸುವಂತೆ ಸೂಚಿಸಿದ ಕೆಲವು ದಿನಗಳ ನಂತರ ಕೇಂದ್ರ ಸರ್ಕಾರ ಈ ಬದಲಾವಣೆ ಮಾಡಿತ್ತು. ಚುನಾವಣಾ ನೀತಿ ಬದಲಾವಣೆ
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಜವಾಬ್ದಾರಿ ಹೊಂದಿರುವ ಸಾಂವಿಧಾನಿಕ ಸಂಸ್ಥೆಯಾಗಿರುವ ಚುನಾವಣಾ ಆಯೋಗವು ಸಾರ್ವಜನಿಕ ಸಮಾಲೋಚನೆ ಇಲ್ಲದೆ ಪ್ರಮುಖ ನಿಯಮಗಳನ್ನು “ಏಕಪಕ್ಷೀಯವಾಗಿ ಮತ್ತು ನಿರ್ಲಜ್ಜವಾಗಿ” ತಿದ್ದುಪಡಿ ಮಾಡಲು ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಎಂದು ಪಕ್ಷದ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ವಿಶೇಷವಾಗಿ ಆ ತಿದ್ದುಪಡಿಯಿಂದ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಜವಾಬ್ದಾರಿಯುತವಾಗಿಸುವ ಅಗತ್ಯ ಮಾಹಿತಿಯ ಸಾರ್ವಜನಿಕರಿಗೆ ಲಭ್ಯವಿಲ್ಲದೆಂತೆ ಆಗುತ್ತದೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಚುನಾವಣಾ ಪ್ರಕ್ರಿಯೆಯು ಕುಸಿಯುತ್ತಿರುವ ವೇಳೆ ಅದರ ಸಮಗ್ರತೆಯನ್ನು ಪುನಃಸ್ಥಾಪಿಸಲು ಸುಪ್ರೀಂ ಕೋರ್ಟ್ ಸಹಾಯ ಮಾಡುತ್ತದೆ ಎಂಬ ಭರವಸೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
1961 ರ ಚುನಾವಣಾ ನಿಯಮಗಳ ಹಿಂದಿನ ನಿಯಮ 93 (2) (ಎ) “ಚುನಾವಣೆಗೆ ಸಂಬಂಧಿಸಿದ ಎಲ್ಲಾ ಇತರ ದಾಖಲೆಗಳು ಸಾರ್ವಜನಿಕ ತಪಾಸಣೆಗೆ ಲಭ್ಯವಿರುತ್ತದೆ” ಎಂದು ಇತ್ತು. ಇದೀಗ ಕೇಂದ್ರ ಸರ್ಕಾರ ಇದನ್ನು ಬದಲಾಯಿಸಿ, “ಚುನಾವಣೆಗೆ ಸಂಬಂಧಿಸಿದ ಈ ‘ನಿಯಮಾವಳಿಗಳಲ್ಲಿ ನಿರ್ದಿಷ್ಟ’ಪಡಿಸಿದ ಎಲ್ಲಾ ಇತರ ದಾಖಲೆಗಳು ಸಾರ್ವಜನಿಕ ತಪಾಸಣೆಗೆ ಲಭ್ಯವಿರುತ್ತವೆ.” ಎಂದು ನಿಯಮ ತಂದಿದೆ. ಚುನಾವಣಾ ನೀತಿ ಬದಲಾವಣೆ
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ಚುನಾವಣಾ ಆಯೋಗದೊಂದಿಗೆ ಸಮಾಲೋಚಿಸಿ ಈ ಬದಲಾವಣೆಗೆ ಸೂಚನೆ ನೀಡಿದ್ದು, ಹಾಗಾಗಿ ಸಾರ್ವಜನಿಕರಿಂದ ಮತದಾನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಲು ಇನ್ನು ಮುಂದೆ ಸಾಧ್ಯವಾಗುವುದಿಲ್ಲ. ಚುನಾವಣಾ ನಿಯಮಗಳ ನಡವಳಿಕೆಯಲ್ಲಿ ನಿರ್ದಿಷ್ಟಪಡಿಸಿದ ದಾಖಲೆಗಳನ್ನು ಮಾತ್ರ ಸಾರ್ವಜನಿಕರು ಪರಿಶೀಲಿಸಬಹುದು. ಹಾಗಾಗಿ, ಸಾರ್ವಜನಿಕರಿಗೆ ಚುನಾವಣಾ ಸಂಬಂಧಿತ ಎಲ್ಲಾ ದಾಖಲೆಗಳನ್ನು ಒದಗಿಸಲು ಚುನಾವಣಾ ಸಮಿತಿಗೆ ನಿರ್ದೇಶನ ನೀಡಲು ನ್ಯಾಯಾಲಯಗಳಿಗೆ ಸಾಧ್ಯವಾಗುವುದಿಲ್ಲ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಡಿಸೆಂಬರ್ 9 ರಂದು ಚುನಾವಣಾ ಆಯೋಗಕ್ಕೆ ವೀಡಿಯೋಗ್ರಫಿ, ಭದ್ರತಾ ಕ್ಯಾಮೆರಾದ ದೃಶ್ಯಾವಳಿಗಳು ಮತ್ತು ಇತ್ತೀಚಿನ ಹರಿಯಾಣ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮತಗಟ್ಟೆಯಲ್ಲಿ ಪಡೆದ ಮತಗಳಿಗೆ ಸಂಬಂಧಿಸಿದ ದಾಖಲೆಗಳ ಪ್ರತಿಗಳನ್ನು ವಕೀಲ ಮೆಹಮೂದ್ ಪ್ರಾಚಾಗೆ ಒದಗಿಸುವಂತೆ ಸೂಚಿಸಿತ್ತು. ಇದಾಗಿ ಕೆಲವು ದಿನಗಳ ನಂತರ ಕೇಂದ್ರ ಸರ್ಕಾರ ನಿಯಮಗಳನ್ನು ಬದಲಾಯಿಸಿದೆ.
ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವಾರು ವಿರೋಧ ಪಕ್ಷದ ನಾಯಕರು ಈ ತಿದ್ದುಪಡಿಯನ್ನು ಟೀಕಿಸಿದ್ದು, ಇದು ಚುನಾವಣಾ ಪ್ರಕ್ರಿಯೆಯಲ್ಲಿ “ಪಾರದರ್ಶಕತೆಯನ್ನು ಕೊಲ್ಲುವ” ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಚುನಾವಣಾ ದಾಖಲೆಗಳನ್ನು ಒದಗಿಸುವಂತೆ ಹೈಕೋರ್ಟ್ ನಿರ್ದೇಶನ; ನಿಯಮವನ್ನೆ ಬದಲಾಯಿಸಿದ ಕೇಂದ್ರ ಸರ್ಕಾರ!
ಚುನಾವಣಾ ದಾಖಲೆಗಳನ್ನು ಒದಗಿಸುವಂತೆ ಹೈಕೋರ್ಟ್ ನಿರ್ದೇಶನ; ನಿಯಮವನ್ನೆ ಬದಲಾಯಿಸಿದ ಕೇಂದ್ರ ಸರ್ಕಾರ!


