ಗಾಝಾದಲ್ಲಿ ಇಸ್ರೇಲ್ ನರಮೇಧ ನಡೆಸುತ್ತಿರುವ ಹಿನ್ನೆಲೆ ಸತತ ಎರಡನೇ ವರ್ಷವೂ ಏಸು ಕ್ರಿಸ್ತನ ಜನ್ಮ ಸ್ಥಳ ಜೆರುಸಲೇಂನ ಬೆಥ್ಲೆಹೆಮ್‌ನಲ್ಲಿ ಜನರು ಸಂಭ್ರವಿಲ್ಲದ ಸರಳ ಕ್ರಿಸ್‌ಮಸ್ ಆಚರಿಸಿದರು.
ಕ್ರಿಸ್‌ಮಸ್ ಮುನ್ನಾದಿನ ಸಂಜೆ (ಕ್ರಿಸ್‌ಮಸ್ ಈವ್) ಬೆಥ್ಲೆಹೆಮ್‌ನ ಐತಿಹಾಸಿಕ ಬೀದಿಗಳಲ್ಲಿ ವಿಶೇಷ ವಸ್ತ್ರ ಧರಿಸಿ ಮೆರವಣಿಗೆ ನಡೆಸಿದ ‘ಟೆರ್ರಾ ಸ್ಯಾಂಕ್ಟಾ ಸ್ಕೌಟ್ ಟ್ರೂಪ್’ ತಂಡದ ಪುಟಾಣಿ ಮಕ್ಕಳು ‘ನಮಗೆ ಸಾವು ಬೇಡ, ಜೀವನ ಬೇಕು. ಗಾಝಾದಲ್ಲಿ ನರಮೇಧ ನಿಲ್ಲಿಸಿ’ ಎಂಬ ಆಗ್ರಹ ವ್ಯಕ್ತಪಡಿಸಿದರು.
ಸತತ ಎರಡನೇ ವರ್ಷ ಈ ಬಾರಿಯೂ ಬೆತ್ಮಹೆಮ್‌ನ ಕ್ರಿಸ್‌ಮಸ್ ಸಂಭ್ರಮದ ಮೇಲೆ ಯುದ್ದದ ಕಾರ್ಮೋಡ ಕವಿದಿತ್ತು. ಕಳೆದ ವರ್ಷವೂ ಬೆಥ್ಲೆಹೆಮ್‌ನಲ್ಲಿ ಅದ್ದೂರಿ ಕ್ರಿಸ್‌ಮಸ್ ಆಚರಣೆಯನ್ನು ರದ್ದುಗೊಳಿಸಲಾಗಿತ್ತು.
ಒಂದು ದೊಡ್ಡ ಕ್ರಿಸ್ಮಸ್ ಗಿಡವನ್ನು ಬೆಥ್ಲೆಹೆಮ್‌ನ ಚರ್ಚ್ ಬಳಿಯ (ಚರ್ಚ್ ಆಫ್ ನೇಟಿವಿಟಿ) ಐತಿಹಾಸಿಕ ಮ್ಯಾಂಗರ್ ಸ್ಕ್ವೇರ್ ಗುಹೆಯೊಂದರ ಮೇಲೆ ಪ್ರತಿವರ್ಷ ಕ್ರಿಸ್‌ಮಸ್ ವೇಳೆ ನಿಲ್ಲಿಸಲಾಗುತ್ತದೆ. ಈ ಜಾಗದಲ್ಲಿ ಏಸು ಕ್ರಿಸ್ತ 2,000 ವರ್ಷಗಳ ಹಿಂದೆ ಜನಿಸಿದರು ಎಂದು ಕ್ರಿಶ್ಚಿಯನ್ನರು ನಂಬುತ್ತಾರೆ. ಆದರೆ, ಕಳೆದ ಎರಡು ವರ್ಷಗಳಿಂದ ಇಲ್ಲಿ ಸಂಭ್ರಮಕ್ಕೆ ಕಂಡಿಲ್ಲ.
ಕಳೆದ ವರ್ಷದಂತೆ ಈ ವರ್ಷವೂ ಬೆಥ್ಲೆಹೆಮ್ ಮುನ್ಸಿಪಾಲಿಟಿ ಗಾಝಾದಲ್ಲಿ ನರಮೇಧ ನಡೆಯುತ್ತಿರುವ ಹಿನ್ನೆಲೆ ಸರಳ ಕ್ರಿಸ್‌ಮಸ್ ಆಚರಣೆಯ ನಿರ್ಧಾರ ಕೈಗೊಂಡಿದೆ. ಇಸ್ರೇಲ್‌ನಲ್ಲಿರುವ ಸುಮಾರು 185, 000 ಮತ್ತು ಪ್ಯಾಲೆಸ್ತೀನ್ ಭೂ ಪ್ರದೇಶದ ವ್ಯಾಪ್ತಿಯಲ್ಲಿರುವ ಸುಮಾರು 47, 000 ಕ್ರಿಶ್ಚಿಯನ್ನರು ಶಾಂತಿಯುತ ಮತ್ತು ನೆಮ್ಮದಿಯ ಭವಿಷ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.
ಈ ದುಖಃವನ್ನು ಕೊನೆಗೊಳಿಸಿ, ಶಾಂತಿಯ ವಾತಾವರಣ ನೀಡುವಂತೆ ನಾವು ಏಸುಕ್ರಿಸ್ತನಲ್ಲಿ ಪ್ರಾರ್ಥಿಸುತ್ತೇವೆ ಎಂದು ಆಂಟನ್ ಸಲ್ಮಾನ್ ಹೇಳಿದ್ದಾರೆ.
ಕಳೆದ ಭಾನುವಾರ ಗಾಝಾದಲ್ಲಿ ಸಾಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಜೆರುಸಲೆಮ್‌ನ ಆರ್ಚ್‌ಬಿಷಪ್ ಪಿಯರ್‌ಬಟ್ಟಿಸ್ಟಾ ಪಿಜ್ಜಾಬಲ್ಲಾ ಅವರು ಕ್ರಿಸ್‌ಮಸ್ ಈವ್ ದಿನ ಬೆಥ್ಲೆಹೆಮ್‌ನಲ್ಲಿ ಪ್ರಾರ್ಥನೆಗೆ ನೇತೃತ್ವ ನೀಡುವಾಗಲೂ ಶಾಂತಿಗಾಗಿ ಪ್ರಾರ್ಥಿಸುತ್ತೇವೆ ಎಂದಿದ್ದಾರೆ.
“ನಾನು ನಿನ್ನೆಯಷ್ಟೇ ಗಾಝಾದಿಂದ ಬಂದೆ. ಅಲ್ಲಿ ಎಲ್ಲವನ್ನೂ ನಾಶಮಾಡಲಾಗಿದೆ. ಅಲ್ಲಿನ ಶೋಚಣೀಯ ಸ್ಥಿತಿಯನ್ನು ನಾನು ಕಣ್ಣಾರೆ ನೋಡಿದೆ. ಆದರೆ, ಗಾಝಾದ ಜನತೆ ಬಿಟ್ಟುಕೊಡುವರಲ್ಲ. ಅವರು ಆತ್ಮವಿಶ್ವಾಸದಲ್ಲಿದ್ದಾರೆ ಎಂದು ಪಿಯರ್‌ಬಟ್ಟಿಸ್ಟಾ ಅವರು ಬೇಸರದ ಮಾತುಗಳನ್ನು ಆಡಿದ್ದಾರೆ.
ಬೆಥ್ಲೆಹೆಮ್‌ನ ಚರ್ಚ್ ಆಫ್ ನೇಟಿವಿಟಿ ಬಳಿ ಕ್ರಿಸ್‌ಮಸ್ ಈವ್ ದಿನ ಪ್ಯಾಲೆಸ್ತೀನ್ ಜನತೆ ಕೂಡ ವಿಶೇಷ ಮೌನ ಮೆರವಣಿಗೆ ನಡೆಸಿದ್ದಾರೆ. ಈ ಮೂಲಕ ಗಾಝಾದ ನರಮೇಧವನ್ನು ಖಂಡಿಸಿದ್ದಾರೆ.
ಅವಶೇಷಗಳ ನಡುವೆ ಗಾಝಾದಲ್ಲಿ ಕ್ರಿಸ್‌ಮಸ್ ಆಚರಣೆ
ಗಾಝಾದಲ್ಲಿ ಇಸ್ರೇಲ್ ಆಕ್ರಮಣದಿಂದ ಕೇವಲ ಮುಸ್ಲಿಮರಿಗೆ ಮಾತ್ರ ಸಮಸ್ಯೆಯಾಗಿಲ್ಲ. ಅಲ್ಲಿನ ಸ್ಥಳೀಯ ಕ್ರೈಸ್ತರು ಕೂಡ ತಮ್ಮದೆಲ್ಲವನ್ನು ಕಳೆದುಕೊಂಡಿದ್ದಾರೆ. ಸುದ್ದಿ ಸಂಸ್ಥೆ ಅಲ್-ಜಝೀರಾ ಜೊತೆ ಮಾತನಾಡಿರುವ ಗಾಝಾದ ಕ್ರೈಸ್ತ ವ್ಯಕ್ತಿ ರಮೇಝ್ ಸೌರಿ “ಕಳೆದ 14 ತಿಂಗಳಿನಿಂದ ನಾವು ಸೇಂಟ್ ಪೋರ್ಫಿರಿಯಸ್ ಮೈದಾನದಲ್ಲಿ ಮಲಗುತ್ತಿದ್ದೇವೆ. ನಮಗೆಲ್ಲಿಯ ಕ್ರಿಸ್‌ಮಸ್ ಸಂಭ್ರಮ? ಎಂದು ಪ್ರಶ್ನಿಸಿದ್ದಾರೆ.
ಗಾಝಾ ನಗರದ ಪ್ರಾಚೀನ ಗ್ರೀಕ್ ಆರ್ಥೊಡಾಕ್ಸ್ ಚರ್ಚ್ ಬಳಿಯ ಕಟ್ಟಡವೊಂದಕ್ಕೆ ಕಳೆದ ವರ್ಷ ವೈಮಾನಿಕ ದಾಳಿ ನಡೆಸಿದ್ದ ಇಸ್ರೇಲ್, ಮೂವರನ್ನು ಹತ್ಯೆ ಮಾಡಿತ್ತು.

ಗಾಝಾ ಮೇಲೆ ಇಸ್ರೇಲ್ ಆಕ್ರಮಣ ಪ್ರಾರಂಭಿಸಿದ ದಿನದಿಂದ ಅಲ್ಲಿನ ಕ್ರೈಸ್ತ ಸಮುದಾಯದ ಜನರು ಸೇಂಟ್ ಪೋರ್ಫಿರಿಯಸ್ ಮತ್ತು ಹೋಲಿ ಫ್ಯಾಮಿಲಿ ಚರ್ಚ್‌ಗಳಲ್ಲಿ ಉಳಿದುಕೊಂಡಿದ್ದಾರೆ. ಅವರಿಗೆ ಅಲ್ಲಿ ಯಾವುದೇ ವ್ಯವಸ್ಥೆಗಳಿಲ್ಲದೆ, ಸಂಕಷ್ಟದ ಜೀವನ ನಡೆಸುತ್ತಿದ್ಧಾರೆ.
“ನಾವು ತುಂಬಾ ದುಖಃದಲ್ಲಿದ್ದೇವೆ. ಶಾಂತಿಗಾಗಿ ಪ್ರಾರ್ಥಿಸುವುದು ಬಿಟ್ಟರೆ ಬೇರೇನು ಇಲ್ಲ” ಎಂದು ಗಾಝಾದ ಕ್ರೈಸ್ತ ವ್ಯಕ್ತಿ ರಮೇಝ್ ಸೌರಿ ಹೇಳಿದ್ದಾರೆ.
ಅವಶೇಷಗಳ ನಡುವೆ ಗಾಝಾದಲ್ಲಿ ಕ್ರಿಸ್‌ಮಸ್ ಎಂದರೆ, ಅಲ್ಲಿ ಯಾವುದೇ ಆಚರಣೆ ಸಂಭ್ರಮವಿಲ್ಲ. ಜನರು ದುಖಃದ ನಡುವೆ ಮನಸ್ಸಿನಲ್ಲೇ ಕ್ರಿಸ್‌ಮಸ್ ಆಚರಿಸುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ.
ಇದನ್ನೂ ಓದಿ : ರಷ್ಯಾಕ್ಕೆ ತೆರಳುತ್ತಿದ್ದ ವಿಮಾನ ಕಝಾಕಿಸ್ತಾನ್‌ನದಲ್ಲಿ ಪತನ; 42 ಮಂದಿ ಸಾವನ್ನಪ್ಪಿರುವ ಶಂಕೆ


