ಇಂದು ಪ್ರಜಾವಾಣಿಯ ಮುಖಪುಟದಲ್ಲಿ ಎ. ನಾರಾಯಣ್ ಅವರ “ಆಪದ್ಬಾಂಧವ ಅರ್ಥಮಾಂತ್ರಿಕ” ಲೇಖನದಲ್ಲಿ ಮನಮೋಹನ್ ಸಿಂಗ್ ಅವರಿಗಿಂತಲೂ ಜಗತ್ತಿನಲ್ಲಿ ಪ್ರಖ್ಯಾತ ಅರ್ಥಶಾಸ್ತ್ರಜ್ಞರು ಇರಬಹುದು ಆದರೆ, ಒಬ್ಬ ಅರ್ಥಶಾಸ್ತ್ರಜ್ಞನಾಗಿ ಆರ್ಥಿಕವಲಯದ ಎಲ್ಲಾ ಆಯಾಕಟ್ಟಿನ ಉನ್ನತ ಹುದ್ದೆಗಳನ್ನು ಅಲಂಕರಿಸಿದರೂ ನಿಗರ್ವಿಯಾಗಿ ನಿರ್ಗಮಿಸಿದರು, ಎಂದು ಓದುವಾಗ ಒಂದು ಕ್ಷಣ ರೋಮಾಂಚನವಾಯಿತು.
ಮನಮೋಹನ್ ಸಿಂಗ್ ಅವರನ್ನು ವಿಶ್ಲೇಷಣೆ ಮಾಡಿ ಬರೆಯಲು ನಾನು ಅರ್ಥಶಾಸ್ತ್ರದ ವಿದ್ಯಾರ್ಥಿ ಅಲ್ಲ ಆದರೆ, ಎರಡುವರೆ ದಶಕದಿಂದ ಸಾಮಾಜಿಕ ಕಾರ್ಯಕರ್ತೆಯಾಗಿ ಹಾಗೂ ರಾಜಕೀಯ ಕಾರ್ಯಕರ್ತೆಯಾಗಿ ನನಗನ್ನಿಸುವುದೇನೆಂದರೆ, ಮನಮೋಹನ್ ಸಿಂಗ್ ಅವರು ತಾವು ಜೀವಿತವಾಗಿರುವಾಗಲೇ, ಜಗತ್ತಿನ ದೊಡ್ಡ ದೊಡ್ಡ ಅರ್ಥಶಾಸ್ತ್ರಜ್ಞರೆಲ್ಲರೂ ತಮ್ಮನ್ನು ಹಾಡಿ ಹೊಗಳಿದವರನ್ನು ಹಾಗೆಯೇ ತಮ್ಮನ್ನು ಅತ್ಯಂತ ಹೀನಾಯವಾಗಿ ಜರಿದವರನ್ನೂ ಒಟ್ಟೊಟ್ಟಿಗೆ ತಮ್ಮ ಬದುಕಿನ ಕಾಲಘಟ್ಟದಲ್ಲಿ ಕಂಡರೂ, ಹೊಗಳಿಕೆಗೂ ಹಾಗೂ ತೆಗಳಿಕೆಗೂ ಅವರ ಮೌನವೇ ಉತ್ತರವಾಗಿತ್ತು…
ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ “ಏನು ಮಾತಾಡಬೇಕು ಎನ್ನುವುದಕ್ಕಿಂತ ಏನೆಲ್ಲಾ ಮಾತಾಡಬಾರದು” ಎನ್ನುವುದನ್ನು ಸ್ವಾಸ್ಥ ನಾಗರಿಕ ಸಮಾಜ ಅತ್ಯಂತ ಗಂಭೀರವಾಗಿ ಯೋಚಿಸುವ ಕಾಲಘಟ್ಟದಲ್ಲಿ, ಮನಮೋಹನ್ ಸಿಂಗ್ ಅವರನ್ನು ಜರಿಯುವುದಕ್ಕಾಗಿ ಬಳಸಿದ ಆ ಮೌನಿಸಿಂಗ್ ಎಂಬ ಪದವೇ ಉತ್ತರವಲ್ಲವೇ? ಯಾಕೋ ಈ ಮೌನಿಸಿಂಗ್ ಎಂಬ ಪದ ನನಗೆ ಬಲು ತಂಪಾಗಿ ಇಂದು ಕೇಳಿಸುತ್ತಿದೆ. ಕಾರಣ “ಆಡದೇ ಮಾಡುವನು ರೂಢಿಯೊಳಗುತ್ತಮನು” ಎಂಬ ಸರ್ವಜ್ಞನ ಮಾತಿನಂತೆ ಕತ್ತಲಿನಲ್ಲಿ ಕಂದೀಲ ದೀಪದಲ್ಲಿ ವಿದ್ಯಾಭ್ಯಾಸ ಮಾಡಿದರೂ, ಭಾರತದ ಅರ್ಥವ್ಯವಸ್ಥೆಯ ಪ್ರಜ್ವಲ ಬೆಳಕಾಗಿ ಮೌನವಾಗಿಯೇ ಪ್ರಕಾಶಿಸಿದ್ದು ಒಂದು ಅತ್ಯದ್ಭುತವಾದ ಸಂಗತಿ.
ವಿರೋಧಪಕ್ಷದವರಿಂದ “ಆಕ್ಸಿಡೆಂಟಲ್ ಪ್ರಧಾನಿ” ಎಂದು ಟೀಕೆಗೆ ಒಳಪಟ್ಟರೂ, ಭಾರತದ ಆರ್ಥಿಕ ವ್ಯವಸ್ಥೆಯನ್ನು ಎಲ್ಲಿಯೂ ಆಕ್ಸಿಡೆಂಟ್ ಆಗದ ಹಾಗೆ ಆಡಳಿತ ನಡೆಸಿ ಆರ್ಥಿಕ ಜಗತ್ತಿನ ಮಾಂತ್ರಿಕನಾಗಿ ಮೌನವಾಗಿಯೇ ಮೆರೆದರು.
ಪ್ರಸ್ತುತ ದೇಶದ ಪ್ರಧಾನಿಯವರ ಮಾಧ್ಯಮಗೋಷ್ಠಿಗಾಗಿ 10 ವರ್ಷಗಳಿಂದಲೂ ಕೂಗುಗಳಿದ್ದರೂ, ಮನಮೋಹನ್ ಸಿಂಗ್ ಅವರು 117 ಮಾಧ್ಯಮಗೋಷ್ಠಿಗಳಲ್ಲಿ ನಿರಂತರವಾಗಿ ಮಾತನಾಡುತ್ತಾ, ತಮ್ಮ ಕೊನೆಯ ಗೋಷ್ಠಿಯಲ್ಲಿ ನೂರಕ್ಕೂ ಹೆಚ್ಚು ಮಾಧ್ಯಮ ಪ್ರತಿನಿಧಿಗಳ ಮುಂದೆ “ನಾನು ಮಾತನಾಡುವುದಕ್ಕೆ ಹೆದರುವ ಪ್ರಧಾನಿಯಲ್ಲ” ಎಂದು ಹೇಳಿದ್ದು ಇದೇ ಮೌನಿಸಿಂಗ್ ಮನಮೋಹನ್ ಸಿಂಗ್ ಅವರೇ….
ಹೀಗೆ ಹೇಳಿ ಮಾತಿನ ತೂಕವನ್ನು ಜಗತ್ತಿಗೆ ಸಾರಿದರು.
ಈ 10-11 ವರ್ಷಗಳಲ್ಲಿ ದೇಶದ ಆಡಳಿತ ವ್ಯವಸ್ಥೆಯಲ್ಲಿ ಕೇವಲ ಮಾತುಗಳನ್ನು ಕೇಳಿ ಕೇಳಿ ಸಾಕಾಗಿ ಹೋಗಿದೆ. ಇಂದು ಬರೀ ಮಾತುಗಳಿಂದಲೇ ದೇಶದ ಅಭಿವೃದ್ಧಿ ಹಾಗೂ ಸಾಮಾಜಿಕ ಸ್ವಾರ್ಥಕ್ಕೆ ಧಕ್ಕೆ ಉಂಟಾಗಿರುವಾಗ, ಮಾತು ಬಂಗಾರದಂತೆ ಬಳಸಿ ಆರ್ಥಿಕ ಸಾರೋಟದಲ್ಲಿ ಜರಿದವರಿಂದಲೇ ಮೆರವಣಿಗೆ ಮಾಡಿಸಿಕೊಂಡವರು ಇದೇ ಮನಮೋಹನ್ ಸಿಂಗ್… ಅಲ್ಲವೇ ?
ಪ್ರಾಧ್ಯಾಪಕನಿಂದ ಪ್ರಧಾನಿ ಹುದ್ದೆ ಏರಿದರೂ, ವಿಶ್ವದ್ಯಾಂತ ಅನೇಕ ರಾಷ್ಟ್ರಗಳಲ್ಲಿ ಪ್ರವಾಸ ಮಾಡಿದರೂ, ಅನೇಕ ಪ್ರಶಸ್ತಿಗೆ ಭಾಜನರಾಗಿ ಅನೇಕ ಸಾಧನೆಗಳನ್ನು ಮಾಡಿದರೂ, ಎಲ್ಲಿಯೂ ಫೋಟೋಶೂಟ್ ಮಾಡಿಸಿಕೊಳ್ಳದೆ ಯಾವುದನ್ನು ಪ್ರಚಾರ ಮಾಡಿಕೊಳ್ಳದೆ, ಮೌನವಾಗಿಯೇ ತಮ್ಮ ಹೆಸರನ್ನು ಇತಿಹಾಸದ ಪುಟಗಳಲ್ಲಿ ಸೇರಿಸಿದ ಮಾಂತ್ರಿಕ, ಅವರೇ ಹೇಳಿದಂತೆ “ಯಾವಾಗ ಏನಾಗಬೇಕೋ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ” ( Nobody power on earth can stop an idia whose time has come ) ಎಂದು, ಪ್ರಕೃತಿಯ ಕರೆಗೆ ಓಗೊಟ್ಟು ಸಾಗಿದ ಆರ್ಥಿಕ ಜಗತ್ತಿನ ಸಾಮ್ರಾಟ, ಮೌನವಾಗಿಯೇ ಸಾಧಿಸಿದ ಕಾರ್ಯಗಳು ಈ ಜಗತ್ತು ಇರುವವರೆಗೂ ಮಾತಾಡುತ್ತವೆ..
ಮನಮೋಹನ್ ಸಿಂಗ್ ಎಂಬ ಮೌನಿಸಿಂಗ್ ಹೋಗಿಬನ್ನಿ, ಇತಿಹಾಸ ನಿಮ್ಮನ್ನು ಎಂದೂ ಮರೆಯುವುದಿಲ್ಲ….
ಮನಮೋಹನ್ ಸಿಂಗ್ ಅವರ ಬದುಕು, ಆರ್ಥಿಕ ನೀತಿಗಳು ನಮಗೆಲ್ಲ ಪ್ರೇರಣೆ : ಸಿಎಂ ಸಿದ್ದರಾಮಯ್ಯ


