ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ, ಕಾಂಗ್ರೆಸ್ ಮುಖಂಡ ರಾಜು ಕಪನೂರು ಹಾಗೂ ಇತರೆ ಎಂಟು ಜನರಿಂದ ಜೀವ ಬೆದರಿಕೆ ಇರುವುದಾಗಿ ಡೆತ್ ನೋಟ್ ಬರೆದಿಟ್ಟು ಯುವ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಬೀದರ್ ನಗರದ ಗಾಂಧಿಗಂಜ್ ಪೊಲೀಸ್ ಠಾಣೆಯ ಇಬ್ಬರು ಹೆಡ್ ಕಾನ್‌ಸ್ಟೇಬಲ್‌ಗಳನ್ನು ಶುಕ್ರವಾರ (ಡಿ.27) ಅಮಾನತುಗೊಳಿಸಲಾಗಿದೆ.
ರಾಜೇಶ್ ಚೆಲ್ವಾ ಹಾಗೂ ಶಾಮಲಾ ಅಮಾನತುಗೊಂಡವರು ಎಂದು ತಿಳಿದು ಬಂದಿದೆ.
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಕಟ್ಟಿತೂಗಾಂವ್ ಗ್ರಾಮದ ಯುವ ಗುತ್ತಿಗೆದಾರ ಸಚಿನ್ ಮಾನಪ್ಪ ಪಾಂಚಾಳ್ (26) ಅವರು ಗುರುವಾರ (ಡಿ.26) ಡೆತ್‌ನೋಟ್ ಬರೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಅದನ್ನು ನೋಡಿ ಗಾಬರಿಗೊಂಡ ಸಚಿನ್ ಕುಟುಂಬಸ್ಥರು ಗಾಂಧಿಗಂಜ್ ಪೊಲೀಸ್ ಠಾಣೆಗೆ ತೆರಳಿ ಸಚಿನ್ ಅವರನ್ನು ಹುಡುಕಿ ಕೊಡುವಂತೆ ದೂರು ಕೊಡಲು ಮುಂದಾಗಿದ್ದರು. ಈ ವೇಳೆ ಠಾಣೆಯಲ್ಲಿದ್ದ ಹೆಡ್ ಕಾನ್‌ಸ್ಟೇಬಲ್‌ಗಳಾದ ರಾಜೇಶ್ ಚೆಲ್ವಾ ಮತ್ತು ಶಾಮಲಾ ಅವರು ದೂರು ಸ್ವೀಕರಿಸಿ, ಎಫ್‌ಐಆರ್ ದಾಖಲಿಸಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ ನಿರ್ಲಕ್ಷ್ಯ ತೋರಿ, ಕರ್ತವ್ಯಲೋಪ ಎಸಗಿದ ಕಾರಣಕ್ಕೆ ಇಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಡೆತ್ ನೋಟ್ ಪೋಸ್ಟ್ ಮಾಡಿ ಸಚಿನ್ ಆತ್ಮಹತ್ಯೆ
ಸಾಮಾಜಿಕ ಜಾಲತಾಣಗಳಲ್ಲಿ ಡೆತ್‌ನೋಟ್ ಪೋಸ್ಟ್ ಮಾಡಿ ನಾಪತ್ತೆಯಾಗಿದ್ದ ಸಚಿನ್ ಅವರು ಗುರುವಾರ ಬೀದರ್-ಹೈದರಾಬಾದ್ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹೋಗಿದ್ದ ಸಚಿನ್ ಕುಟುಂಬಸ್ಥರು, ಅಲ್ಲಿಯೇ ಧರಣಿ ನಡೆಸಿ ಸಚಿನ್ ದೇಹವನ್ನು ಆಸ್ಪತ್ರೆಗೆ ಸಾಗಿಸಲು ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಶವವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಘಟನೆ ಸಂಬಂಧ ಮೃತ ಸಚಿನ್ ಸಹೋದರಿ ಸವಿತಾ ಅವರು ನೀಡಿರುವ ದೂರು ಆಧರಿಸಿ ರಾಜು ಕಪನೂರ್ ಸೇರಿದಂತೆ ಒಂಬತ್ತು ಜನರ ವಿರುದ್ದ ಬೀದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ : ಮನಮೋಹನ್ ಸಿಂಗ್ ಅವರ ಬದುಕು, ಆರ್ಥಿಕ ನೀತಿಗಳು ನಮಗೆಲ್ಲ ಪ್ರೇರಣೆ : ಸಿಎಂ ಸಿದ್ದರಾಮಯ್ಯ


