ಹೈದರಾಬಾದ್ ಫಾರ್ಮುಲ-ಇ ರೇಸ್‌ನಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಸಂಬಂಧ ದಾಖಲಾಗಿರುವ ದೂರಿನಲ್ಲಿ ವಿಚಾರಣೆಗೆ ಹಾಜರಾಗುವಂತೆ ಭಾರತ ರಾಷ್ಟ್ರ ಸಮಿತಿ (ಬಿಆರ್‌ಸ್) ನಾಯಕ ಕೆ.ಟಿ ರಾಮರಾವ್ (ಕೆಟಿಆರ್) ಮತ್ತು ಇತರರಿಗೆ ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್ ನೀಡಿದೆ.
ಫೆಬ್ರವರಿ 2023ರಲ್ಲಿ ಹೈದರಾಬಾದ್‌ನಲ್ಲಿ ಮೊಟ್ಟ ಮೊದಲ ಫಾರ್ಮುಲ-ಇ ರೇಸ್ ನಡೆದಿತ್ತು. ಆಗ ತೆಲಂಗಾಣದಲ್ಲಿ ಬಿಆರ್‌ಎಸ್ ಸರ್ಕಾರ ಆಡಳಿತ ನಡೆಸುತ್ತಿತ್ತು. ರೇಸ್ ಆಯೋಜನೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ಕೆಟಿಆರ್ ವಿರುದ್ದ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಇಡಿ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದರು.
ಕೆಟಿಆರ್ ಅವರಿಗೆ 2025ರ ಜನವರಿ 7ರಂದು ಮತ್ತು ಹಿರಿಯ ಐಎಸ್‌ನ ಅಧಿಕಾರಿ ಅರವಿಂದ ಕುಮಾರ್, ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಮುಖ್ಯ ಎಂಜಿನಿಯರ್ ಬಿ.ಎಲ್.ಎನ್ ರೆಡ್ಡಿ ಅವರಿಗೆ ಕ್ರಮವಾಗಿ ಜನವರಿ 2 ಹಾಗೂ 3ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ.
ತೆಲಂಗಾಣದ ಮಾಜಿ ಮುಖ್ಯಮಂತ್ರಿ ಹಾಗೂ ಬಿಆರ್‌ಎಸ್ ಪಕ್ಷದ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಅವರ ಮಗನಾಗಿರುವ ಕೆಟಿಆರ್, ಈ ಹಿಂದಿನ ರಾಜ್ಯ ಸರ್ಕಾರದಲ್ಲಿ ಐಟಿ-ಬಿಟಿ ಮತ್ತು ಪೌರಾಡಳಿತ ಸಚಿವರಾಗಿದ್ದರು. ಹೈದರಾಬಾದ್‌ನಲ್ಲಿ ಫಾರ್ಮುಲ-ರೇಸ್ ಆಯೋಜಿಸಿದ್ದ ವೇಳೆ 55 ಕೋಟಿ ರೂಪಾಯಿ ಹಣವನ್ನು ಅಕ್ರಮವಾಗಿ ಪಾವತಿಸಿರುವ ಆರೋಪ ಅವರ ಮೇಲಿದೆ.
ಈ ಪ್ರಕರಣದ ತನಿಖೆಯನ್ನು ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸುತ್ತಿದೆ. ಪ್ರಕರಣ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ್ದರಿಂದ ಜನವರಿ 7ರಂದು ಇಡಿ ಪ್ರಕರಣ ಮಾಹಿತಿ ವರದಿ (ಇಸಿಐಆರ್) ದಾಖಲಿಸಿಕೊಂಡಿತ್ತು.
ವರದಿಗಳ ಪ್ರಕಾರ, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (FEMA) ನಿಬಂಧನೆಗಳ ಅಡಿಯಲ್ಲಿ ಜಾರಿ ನಿರ್ದೇಶನಾಲಯವು, ಈ ಪ್ರಕರಣದಲ್ಲಿ ಸಂಭವನೀಯ ವಿದೇಶಿ ವಿನಿಮಯ ಉಲ್ಲಂಘನೆಗಳ ಬಗ್ಗೆಯೂ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ : ಮಣಿಪುರ | ಮತ್ತೆ ಭುಗಿಲೆದ್ದ ಹಿಂಸಾಚಾರ; ನಾಗರಿಕರು, ಭದ್ರತಾ ಸಿಬ್ಬಂದಿಗೆ ಗಾಯ


