ಉತ್ತರ ಗಾಝಾದ ಕೊನೆಯ ಆಸ್ಪತ್ರೆ ಎನ್ನಲಾದ ‘ಕಮಲ್ ಅದ್ವಾನ್’ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಿ ಸುಟ್ಟು ಹಾಕಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಕಮಲ್ ಅದ್ವಾನ್ ಆಸ್ಪತ್ರೆಯಲ್ಲಿ ಉಗ್ರರು ತಂಗಿದ್ದಾರೆ ಎಂದು ಆರೋಪಿಸಿದ್ದ ಇಸ್ರೇಲ್ ಸೇನೆ ಕೆಲ ದಿನಗಳ ಹಿಂದೆ ಆಸ್ಪತ್ರೆಯನ್ನು ತೊರೆಯುವಂತೆ ಅದರ ಸಿಬ್ಬಂದಿಗೆ ಸೂಚಿಸಿತ್ತು. ಆದರೆ, ಸಮೀಪದಲ್ಲಿ ಬೇರೆ ಆಸ್ಪತ್ರೆಗಳು ಮತ್ತು ಸಾಕಷ್ಟು ಆಂಬ್ಯುಲೆನ್ಸ್‌ಗಳು ಇಲ್ಲದ ಕಾರಣ ಆಸ್ಪತ್ರೆ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದರು.
ನೂರಾರು ರೋಗಿಗಳು ಮತ್ತು ಇಸ್ರೇಲ್ ದಾಳಿಯಲ್ಲಿ ಗಾಯಗೊಂಡವರು ಬಾಕಿ ಉಳಿದಿರುವ ಏಕೈಕ ಆಸ್ಪತ್ರೆಯನ್ನು ಆಶ್ರಯಿಸಿದ್ದಾರೆ. ಇಲ್ಲಿ ಸರಿಯಾದ ವೈದ್ಯಕೀಯ ಸಾಮಾಗ್ರಿಗಳು ಲಭ್ಯವಿಲ್ಲ. ಆದರೂ, ವಿಶ್ವಸಂಸ್ಥೆಯ ನೆರವಿನಿಂದ ನಾವು ಜನರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಆಸ್ಪತ್ರೆ ಮುಖ್ಯಸ್ಥರು ತಿಳಿಸಿದ್ದರು.
ಆದರೆ, ಶುಕ್ರವಾರ (ಡಿ.27) ಇಸ್ರೇಲ್ ಸೇನೆ ಆಸ್ಪತ್ರೆಯಲ್ಲಿ ಪರಿಶೀಲನೆ ಆರಂಭಿಸಿತ್ತು. ಆ ಬಳಿಕ ಬೆಂಕಿ ಹಚ್ಚಿದೆ. ಇದರಿಂದ ಕೆಲ ವೈದ್ಯಕೀಯ ಸಿಬ್ಬಂದಿ ಸಜೀವ ದಹನವಾಗಿದ್ದಾರೆ. ಇನ್ನೂ ಕೆಲವರು ಕಿಲೋ ಮೀಟರ್‌ಗಟ್ಟಲೆ ದೂರ ಓಡಿ ಹೋಗಿದ್ದಾರೆ ಎಂದು ಅಲ್-ಜಝೀರಾ ಮತ್ತು ದಿ ನ್ಯೂ ಅರಬ್ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಆಸ್ಪತ್ರೆಯ ನಿರ್ದೇಶಕ ಹುಸಾಮ್ ಅಬೂ ಸಫಿಯಾ ಸೇರಿದಂತೆ ಕೆಲ ಸಿಬ್ಬಂದಿಯನ್ನು ಇಸ್ರೇಲ್ ಸೇನೆ ಬಂಧಿಸಿ ಕರೆದುಕೊಂಡು ಹೋಗಿದೆ ಎಂದು ಹಮಾಸ್ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದ್ದಾಗಿ ವರದಿಯಾಗಿದೆ.
“ಇಸ್ರೇಲ್ ಸೇನೆ ನಮ್ಮನ್ನು ಬಂಧಿಸಿ ಸುಮಾರು 12 ಗಂಟೆಗಳ ಕಾಲ ಚಳಿಯಲ್ಲಿ ವಿವಸ್ತ್ರರಾಗಿ ನಿಲ್ಲಿಸಿತ್ತು. ಗಾಯಗೊಂಡವರನ್ನು, ಅಸ್ವಸ್ತರಾದವರನ್ನು ಥಳಿಸಿದೆ. ಪರಿಶೀಲನೆ ನಡೆಸಲು ಮಹಿಳೆಯರಿಗೆ ಬಟ್ಟೆ ಕಳಚುವಂತೆ ಒತ್ತಾಯಿಸಿದೆ. ವಿರೋಧಿಸಿದಾಗ ಕಪಾಳಮೋಕ್ಷ ಮಾಡಿದ್ದಾರೆ. ಶೌಚಾಲಯಕ್ಕೆ ಹೋಗಲೂ ನಮಗೆ ಅವಕಾಶ ನೀಡಿರಲಿಲ್ಲ. ನಾವು ಅವಮಾನದಲ್ಲಿ ಬದುಕುತ್ತಿದ್ದೇವೆ, ನಾವು ದಣಿದಿದ್ದೇವೆ. ಸಾಕು, ನಮಗೆ ಈ ಜೀವನ ಸಾಕು” ಎಂದು” ವಿಚಾರಣೆಗೆ ಒಳಪಟ್ಟು ಹೊರಬಂದ ಕಮಲ್ ಅದ್ವಾನ್ ಆಸ್ಪತ್ರೆಯ ನರ್ಸ್ ಇಸ್ಮಾಯಿಲ್ ಅಲ್-ಕಹ್ಲೌತ್ ಹೇಳಿದ್ದಾಗಿ ಅಲ್-ಜಝೀರಾ ವರದಿ ಮಾಡಿದೆ.
“ನಮ್ಮನ್ನು ವಿಚಾರಣೆಗೆ ಒಳಪಡಿಸುವ ಮೊದಲು ಸುಮಾರು ಎರಡು ಗಂಟೆಗಳ ಕಾಲ ಮೈನಡುಗುವ ಚಳಿಯಲ್ಲಿ ನಡೆಸಿದರು. ಇಸ್ರೇಲ್ ಸೇನಾ ಸಿಬ್ಬಂದಿ ನಮ್ಮ ಮೇಲೆ ಉಗುಳಿ ಅವಮಾನ ಮಾಡಿದ್ದಾರೆ. ನಮ್ಮೆಲ್ಲರ ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಬಿಡುಗಡೆ ಮಾಡುವ ಮೊದಲು ನಮ್ಮ ಎದೆ ಮತ್ತು ಬೆನ್ನಿನ ಮೇಲೆ ಸಂಖ್ಯೆಗಳನ್ನು ಬರೆದಿದ್ದಾರೆ” ಎಂದು ಆಸ್ಪತ್ರೆಯಲ್ಲಿ ತಂಗಿದ್ದ ಎಝಾತ್ ರಮದಾನ್ ಎಂಬವರು ಹೇಳಿದ್ದಾಗಿ ಅಲ್-ಜಝೀರಾ ವರದಿ ಉಲ್ಲೇಖಿಸಿದೆ.
“ಇಸ್ರೇಲಿ ಸೇನಾ ಸಿಬ್ಬಂದಿ ನಮ್ಮ ಕೈಗಳನ್ನು ಬಿಗಿದು, ಕಣ್ಣಿಗೆ ಬಟ್ಟೆ ಕಟ್ಟಿ ಕರೆದುಕೊಂಡು ಹೋದರು. ನಮ್ಮ ಸುತ್ತಮುತ್ತ ಜನರು ಕಿರುಚಾಡುವುದು ಕೇಳುತ್ತಿತ್ತು. ಆದರೆ, ಎಲ್ಲಿ ಏನಾಗ್ತಿದೆ ಗೊತ್ತಾಗುತ್ತಿರಲಿಲ್ಲ. ನಾನು ನನಗೆ ಯಾವಾಗ ಥಳಿಸುತ್ತಾರೆ ಎಂದು ಕಾಯುತ್ತಿದ್ದೆ” ಎಂದು ಆಸ್ಪತ್ರೆಯ ಸಿಬ್ಬಂದಿ ಶೋರೂಕ್ ಅಲ್-ರಾಂಟಿಸಿ ಹೇಳಿದ್ದಾಗಿ ವರದಿ ವಿವರಿಸಿದೆ.
ಕಳೆದ 24 ಗಂಟೆಗಳಲ್ಲಿ ಇಸ್ರೇಲ್ ಸೇನೆ ಗಾಝಾದಲ್ಲಿ 48 ನಾಗರಿಕರನ್ನು ಹತ್ಯೆ ಮಾಡಿದೆ. ಗಾಝಾ ಪಟ್ಟಿಯಾದ್ಯಂತ 52 ಮಂದಿ ಗಾಯಗೊಂಡಿದ್ದಾರೆ.
2023 ಅಕ್ಟೋಬರ್ 7ರಿಂದ ಇದುವರೆಗೆ ಇಸ್ರೇಲ್ ನಡೆಸಿದ ಆಕ್ರಮಣದಲ್ಲಿ ಸಾವನ್ನಪ್ಪಿದ ಜನರ ಸಂಖ್ಯೆ 45,484ಕ್ಕೆ ತಲುಪಿದೆ. 108,090ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇದನ್ನೂ ಓದಿ : ಹಿಮಾಚಲ ಪ್ರದೇಶ: ಕಾಶ್ಮೀರಿ ಶಾಲು ಮಾರಾಟಗಾರರಿಗೆ ಹಿಂದುತ್ವ ಗುಂಪುಗಳಿಂದ ಬೆದರಿಕೆ: ಸಿಎಂ ಮಧ್ಯಪ್ರವೇಶಕ್ಕೆ ಮುಫ್ತಿ ಕರೆ


