ಶ್ರೀನಗರ: ನಯನ ಮನೋಹರ ಕಣಿವೆ ಪ್ರದೇಶ ಕಾಶ್ಮೀರದಲ್ಲಿ ಭಾರೀ ಹಿಮಪಾತದ ಹಿನ್ನೆಲೆಯಲ್ಲಿ ನೂರಾರು ಪ್ರವಾಸಿಗರನ್ನು ಬಾಧಿಸುತ್ತಿರುವ ಪ್ರತಿಕೂಲ ಪರಿಸ್ಥಿತಿಯಲ್ಲಿ ಅವರಿಗೆ ಮನೆ, ಮಸೀದಿಗಳಲ್ಲಿ ಕಾಶ್ಮೀರಿಗಳು ಆಶ್ರಯ ನೀಡಿ ತಮ್ಮ ಉದಾತ್ತ ಸ್ವಭಾವವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ.
ಕಣಿವೆ ಪ್ರದೇಶವು ಶುಕ್ರವಾರ ವ್ಯಾಪಕ ಹಿಮಪಾತವನ್ನು ಕಂಡಿದೆ. ಇದು ವಿಮಾನ ಮತ್ತು ರೈಲ್ವೆ ಕಾರ್ಯಾಚರಣೆಗೆ ಸಾಕಷ್ಟು ಅಡ್ಡಿಪಡಿಸಿದೆ. ಅಷ್ಟು ಮಾತ್ರವಲ್ಲ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲು ಕಾರಣವಾಗಿದೆ.

ಕಣಿವೆಯ ಇತರ ಬಯಲು ಪ್ರದೇಶಗಳಲ್ಲಿ ಋತುವಿನ ಮೊದಲ ಹಿಮಪಾತ ಸೇರಿದಂತೆ, ಮಧ್ಯಮದಿಂದ ಭಾರೀ ಹಿಮಪಾತವು ಕಾಶ್ಮೀರವನ್ನು ಆವರಿಸಿದೆ ಎಂದು ಹಲವಾರು ಪ್ರವಾಸಿಗರು ಹೇಳಿಕೊಂಡಿದ್ದಾರೆ. ಕಾಶ್ಮೀರದ ದಕ್ಷಿಣ ಭಾಗಗಳು ವಿಶೇಷವಾಗಿ ಭಾರೀ ಹಿಮಪಾತವನ್ನು ಅನುಭವಿಸುತ್ತಿವೆ. ಕಾಶ್ಮೀರಿಗಳು ತಮ್ಮ ಮನೆಗಳಲ್ಲಿ ಪ್ರವಾಸಿಗರಿಗೆ ಆಹಾರವನ್ನು ಬಡಿಸುವಲ್ಲಿ ಹೃತ್ಪೂರ್ವಕವಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮ ಆತಿಥ್ಯಕ್ಕೆ ಹೆಸರುವಾಸಿಯಾದ ಕಾಶ್ಮೀರಿಗಳು ಈ ಪ್ರದೇಶದ ನಿರಂತರ ಸವಾಲುಗಳ ನಡುವೆಯೂ ಮತ್ತೊಮ್ಮೆ ತಮ್ಮ ಸ್ವಾಗತಾರ್ಹ ಸ್ವಭಾವವನ್ನು ಪ್ರದರ್ಶಿಸಿದ್ದಾರೆ.
ಸರ್ವ ಪಕ್ಷಗಳ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್ ಉಮರ್ ಫಾರೂಕ್ ಅವರು, ಕಾಶ್ಮೀರದ ಜನರ ಮಾನವೀಯ ಸ್ಪಂದನೆಗಾಗಿ ಶ್ಲಾಘಿಸಿದ್ದಾರೆ. ಎಕ್ಸ್ ನಲ್ಲಿ ತಮ್ಮ ಮೆಚ್ಚುಗೆಯನ್ನು ಹಂಚಿಕೊಂಡ ಅವರು ಸಮುದಾಯದ ದಯಾಳುತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಿಮಪಾತದಲ್ಲಿ ಸಿಲುಕಿರುವ ಪ್ರವಾಸಿಗರು ಸ್ಥಳೀಯರಿಂದ ಸಹಾಯಾಸ್ತ ಸ್ವೀಕರಿಸಿರುವ ವೀಡಿಯೊಗಳನ್ನು ಸ್ಥಳೀಯ ರಾಜಕಾರಣಿಗಳು ಮತ್ತು ಕಾರ್ಯಕರ್ತರು ಹಂಚಿಕೊಂಡಿದ್ದಾರೆ. ಕೆಲವು ದೃಶ್ಯಗಳು ಖಾಜಿಗುಂಡ್-ಬನಿಹಾಲ್ ನವಯುಗ್ ಸುರಂಗದೊಳಗೆ ಪ್ರವಾಸಿಗರು ಸ್ಥಳೀಯರೊಂದಿಗೆ ಕ್ರಿಕೆಟ್ ಆಡುತ್ತಿರುವಂತಹ ಲಘು ಕ್ಷಣಗಳನ್ನು ಸೆರೆಹಿಡಿದಿವೆ.

ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಪರಿಸ್ಥಿತಿಯ ಬಗ್ಗೆ ಅವಲೋಕಿಸಿದ್ದು, ಖಾಜಿಗುಂಡ್ ಮತ್ತು ಸುರಂಗದ ನಡುವೆ ಸುಮಾರು 2,000 ವಾಹನಗಳು ಸಿಲುಕಿಕೊಂಡಿವೆ. ಹಿಮ ತೆರವು ಪೂರ್ಣಗೊಂಡಿದ್ದರೂ, ಹಿಮಾವೃತ ರಸ್ತೆಗಳು ಸವಾಲಾಗಿ ಉಳಿದಿವೆ. ಭಾರಿ ವಾಹನಗಳಿಗೆ ಅನುಮತಿ ನೀಡಲಾಗುತ್ತಿದ್ದು, ಉಳಿದ ವಾಹನಗಳನ್ನು ತೆರವುಗೊಳಿಸುವ ಪ್ರಯತ್ನ ಮುಂದುವರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.


