“ಕೇರಳದ ಪರಿಸ್ಥಿತಿ ಪಾಕಿಸ್ತಾನದಂತಿದೆ. ಈ ಕಾರಣಕ್ಕೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅಲ್ಲಿಂದ ಗೆದ್ದು ಬರುತ್ತಿದ್ದಾರೆ. ಅವರಿಗೆ ಭಯೋತ್ಪಾದಕ ಸಂಘಟನೆಗಳ ಬೆಂಬಲವಿದೆ” ಎಂದು ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರ್ಕಾರದ ಮೀನುಗಾರಿಕಾ ಮತ್ತು ಬಂದರು ಸಚಿವ ನಿತೇಶ್ ರಾಣೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸೋಮವಾರ (ಡಿ.30) ಪುಣೆ ಜಿಲ್ಲೆಯ ಪುರಂದರ ತಾಲೂಕಿನಲ್ಲಿ ಆಯೋಜಿಸಿದ್ದ ಅಫ್ಝಲ್‌ಖಾನ್ ವಿರುದ್ದದ ಶಿವಾಜಿಯ ಗೆಲುವಿನ ವರ್ಷಾಚರಣೆ ಕಾರ್ಯಕ್ರಮದಲ್ಲಿ ನಿತೇಶ್ ರಾಣೆ ಮೇಲಿನ ಮಾತುಗಳನ್ನಾಡಿದ್ದಾರೆ.
ತನ್ನ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ನಿತೇಶ್ ರಾಣೆ,
“ಕೇರಳ ಕೂಡ ನಮ್ಮ ದೇಶದ ಭಾಗವೇ ಹೌದು. ಅಲ್ಲಿ ಹಿಂದೂಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದಕ್ಕೆ ಎಲ್ಲರೂ ಆತಂಕಪಡಬೇಕು. ಕ್ರೈಸ್ತ ಹಾಗೂ ಮುಸ್ಲಿಂ ಧರ್ಮಗಳಿಗೆ ಅಲ್ಲಿ ನಿತ್ಯ ಮತಾಂತರ ಮಾಡಲಾಗುತ್ತಿದೆ. ಲವ್ ಜಿಹಾದ್ ಪ್ರಕರಣಗಳೂ ಹೆಚ್ಚಾಗುತ್ತಿವೆ. ಪಾಕಿಸ್ತಾನದಲ್ಲಿ ಹಿಂದೂಗಳ ವಿಷಯದಲ್ಲಿ ಹೇಗೆ ವರ್ತಿಸುತ್ತಿದ್ದಾರೆಯೋ ಅದೇ ಪರಿಸ್ಥಿತಿ ಮುಂದೆ ಕೇರಳದಲ್ಲಿ ಉದ್ಭವಿಸಲಿದೆ ಎಂಬ ಅರ್ಥದಲ್ಲಿ ನಾನು ಮಾತನಾಡಿದ್ದೆ. ನಾನು ಹೇಳಿರುವುದನ್ನು ಸುಳ್ಳು ಎಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಸಾಬೀತುಪಡಿಸಲಿ” ಎಂದಿದ್ದಾರೆ.
ಮುಂದುವರಿದು, “ಕೇರಳ ಮಿನಿ ಪಾಕಿಸ್ತಾನ. ಆದ್ದರಿಂದಲೇ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಅಲ್ಲಿ ಚುನಾಯಿತರಾಗಿದ್ದಾರೆ. ಎಲ್ಲಾ ಭಯೋತ್ಪಾದಕರು ಅವರಿಗೆ ಮತ ನೀಡಿದ್ದಾರೆ. ಇದು ಸತ್ಯ; ನೀವು ಬೇಕಾದರೆ ಕೇಳಬಹುದು. ಭಯೋತ್ಪಾದಕರನ್ನು ತಮ್ಮ ಜೊತೆ ಕರೆದುಕೊಂಡು ಹೋದ ಬಳಿಕ ರಾಹುಲ್ ಮತ್ತು ಪ್ರಿಯಾಂಕಾ ಸಂಸದರಾದರು” ಎಂದು ರಾಣೆ ಸಮರ್ಥಿಸಿಕೊಂಡಿದ್ದಾರೆ.
ಕಾಂಗ್ರೆಸ್ ಖಂಡನೆ
ನಿತೇಶ್ ರಾಣೆ ಹೇಳಿಕೆಯನ್ನು ಖಂಡಿಸಿರುವ ಮಹಾರಾಷ್ಟ್ರದ ಕಾಂಗ್ರೆಸ್ ವಕ್ತಾರ ಅತುಲ್ ಲೋಂಧೆ ಪಾಟೀಲ್ ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, “ರಾಣೆ ಸಂಪುಟದ ಭಾಗವಾಗಿ ಉಳಿಯುವ ಅಗತ್ಯವೇನಿದೆ? ಈ ರೀತಿಯ ಹೇಳಿಕೆ ಕೊಡುವುದೇ ಅವರ ಕೆಲಸವಾಗಿಬಿಟ್ಟಿದೆ” ಎಂದಿದ್ದಾರೆ.
ನಿತೇಶ್ ರಾಣೆ ಹೇಳಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಬೇಕು. ರಾಣೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಕೆ.ಸಿ ವೇಣುಗೋಪಾಲ್ ಆಗ್ರಹಿಸಿದ್ದಾರೆ.
2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಂಕಾವತಿ ಕ್ಷೇತ್ರದಿಂದ ನಿತೇಶ್ ರಾಣೆ ಜಯಗಳಿಸಿದ್ದು, ನೂತನ ಸಂಪುಟದಲ್ಲಿ ಅವರಿಗೆ ಮೀನುಗಾರಿಕೆ ಹಾಗೂ ಬಂದರು ಖಾತೆಯನ್ನು ನೀಡಲಾಗಿದೆ.
ಇದನ್ನೂ ಓದಿ : ಸಿಎಂ ಆದಿತ್ಯನಾಥ್ ಮನೆಯ ಅಡಿಯಲ್ಲಿ ಶಿವಲಿಂಗ – ಅಖಿಲೇಶ್ ಯಾದವ್



If BJP treated. and called kerala is
Pakistaan then BJP people are no doubt terrorists.