ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದು, “ದೆಹಲಿಯಲ್ಲಿ ಮತಗಳನ್ನು ಖರೀದಿಸಲು ಬಿಜೆಪಿ ನಾಯಕರು ಹಣ ಹಂಚುತ್ತಿದ್ದಾರೆ. ಇದನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತಾ?” ಎಂದು ಪ್ರಶ್ನಿಸಿದ್ದಾರೆ.
“ದೆಹಲಿಯಲ್ಲಿ ದಲಿತರು ಮತ್ತು ಪೂರ್ವಾಂಚಲಿಗಳ ಹೆಸರನ್ನು ಮತದಾರರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಅಳಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಸರಿ ಎಂದು ಆರ್‌ಎಸ್‌ಎಸ್‌ಗೆ ಅನಿಸುತ್ತಿದೆಯಾ?” ಎಂದು ಕೇಜ್ರಿವಾಲ್ ಪತ್ರದಲ್ಲಿ ಕೇಳಿದ್ದಾಗಿ ವರದಿಯಾಗಿದೆ.
“ದೆಹಲಿ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಆರ್‌ಎಸ್‌ಎಸ್ ಮತ ಕೇಳಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅದಕ್ಕೂ ಮೊದಲು, ಕಳೆದ ಕೆಲವು ದಿನಗಳಲ್ಲಿ ಬಿಜೆಪಿ ಮಾಡಿರುವ ತಪ್ಪುಗಳನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತಾ? ಎಂಬುವುದನ್ನು ಜನರು ನಿಮ್ಮಿಂದ ತಿಳಿದುಕೊಳ್ಳಲು ಬಯಸಿದ್ದಾರೆ” ಎಂದು ಡಿಸೆಂಬರ್ 30ರಂದು ಬರೆದ ಪತ್ರದಲ್ಲಿ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ.
“ಬಿಜೆಪಿಯು ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ ಎಂದು ನಿಮಗೆ ಅನಿಸುತ್ತಿಲ್ಲವೇ? ಎಂದು ಕೇಜ್ರಿವಾಲ್ ಅವರು ಹಿಂದಿಯಲ್ಲಿ ಬರೆದ ಪತ್ರದ ಕೊನೆಯಲ್ಲಿ ಕೇಳಿದ್ದಾರೆ ಎಂದು ವರದಿಗಳು ಹೇಳಿವೆ.
ದೆಹಲಿಯಲ್ಲಿ ತಂಗಿರುವ ಅಕ್ರಮ ರೊಹಿಂಗ್ಯಾ ಮತ್ತು ಬಾಂಗ್ಲಾದೇಶೀಯರನ್ನು ಚುನಾವಣೆಯಲ್ಲಿ ಮತಬ್ಯಾಂಕ್‌ಗಳಾಗಿ ಬಳಸಿಕೊಳ್ಳಲು ದಾಖಲೆಗಳು ಮತ್ತು ಹಣದ ಮೂಲಕ ಎಎಪಿ ಮತ್ತು ಕೇಜ್ರಿವಾಲ್ ಸಹಾಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದೆ.
ಇದನ್ನೂ ಓದಿ : ನ್ಯಾಯಮೂರ್ತಿಗಳ ಸಂಬಂಧಿಕರಿಗೆ ಹುದ್ದೆ ನೀಡುವ ಕ್ರಮ ಪರಿಶೀಲನೆ : ಕೊಲಿಜಿಯಂ ನಿರ್ಧಾರ ಸ್ವಾಗತಿಸಿದ ಅಭಿಷೇಕ್ ಮನು ಸಿಂಘ್ವಿ


