Homeಅಂಕಣಗಳುಝಕಾತಿನಿಂದ ಬಡತನ ನಿರ್ಮೂಲನ ಯಾಕೆ ಸಾಧ್ಯವಾಗುತ್ತಿಲ್ಲ?

ಝಕಾತಿನಿಂದ ಬಡತನ ನಿರ್ಮೂಲನ ಯಾಕೆ ಸಾಧ್ಯವಾಗುತ್ತಿಲ್ಲ?

- Advertisement -
- Advertisement -

ಒಬ್ಬ ಮುಸಲ್ಮಾನನ ಐದು ಮೂಲಭೂತ ಕರ್ತವ್ಯಗಳಲ್ಲಿ ಝಕಾತ್ ಅರ್ಥಾತ್ ಕಡ್ಡಾಯ ದಾನ ನಾಲ್ಕನೆಯದು. ಆರ್ಥಿಕವಾಗಿ ಸಬಲನಿರುವವನು ತನ್ನ ವಾರ್ಷಿಕ ಆದಾಯ ಅಥವಾ ಉಳಿತಾಯದ ಶೇಕಡಾ ಎರಡೂವರೆಯಷ್ಟನ್ನು ಸಮಾಜದ ಬಡವರಿಗೆ ಕಡ್ಡಾಯವಾಗಿ ದಾನ ನೀಡಲೇಬೇಕು. ಅದು ಅದನ್ನು ನೀಡುವವನ ಔದಾರ್ಯವಲ್ಲ, ಬದಲಾಗಿ ಅದನ್ನು ಪಡೆಯುವವನ ಹಕ್ಕು. ನಾವು ಕಟ್ಟುವ ಇತರೆಲ್ಲಾ ತೆರಿಗೆಯಂತೆ ಬಡವರಿಗೆ ನೀಡಬೇಕಾದ ತೆರಿಗೆ. ಇಸ್ಲಾಮಿಕ್ ರಿಪಬ್ಲಿಕ್‍ನಲ್ಲಿ ಯಾರಾದರೂ ಝಕಾತ್ ನೀಡದಿದ್ದರೆ ಅದನ್ನು ಆತನಿಂದ ಕಸಿದುಕೊಡುವ ಹಕ್ಕು ಮತ್ತು ಜವಾಬ್ದಾರಿ ಪ್ರಭುತ್ವಕ್ಕಿದೆ.
ಈ ಝಕಾತಿನ ಮೂಲ ಉದ್ದೇಶ ಬಡತನ ನಿರ್ಮೂಲನೆ. ಇಂದು ಭಾರತದಾದ್ಯಂತ ಲಕ್ಷಾಂತರ ಮಂದಿ ಮಿಲಿಯಾಧೀಶ, ಬಿಲಿಯಾಧೀಶ ಮುಸ್ಲಿಮರಿದ್ದೂ ಮುಸ್ಲಿಂ ಸಮುದಾಯ ಇಂದಿಗೂ ಏಕೆ ಈ ದೇಶದ ಅತ್ಯಂತ ಬಡ ಸಮುದಾಯವಾಗಿದೆ? ಸಾಚಾರ್ ವರದಿಯ ದಟ್ಟ ದರಿದ್ರ ಸಮುದಾಯದ ಪಟ್ಟಿಯಲ್ಲಿ ಈ ಸಮುದಾಯದ ಹೆಸರೇಕೆ ಅಗ್ರ ಸ್ಥಾನದಲ್ಲಿದೆ? ಇದರರ್ಥವೇನು? ಯಾವ ಉದ್ದೇಶದಿಂದ ಇಸ್ಲಾಮ್ ಝಕಾತನ್ನು ಕಡ್ಡಾಯ ಮಾಡಿತೋ ಅದರ ಅದೇ ಯಾಕೆ ಬುಡಮೇಲಾಗಿದೆ? ಸಮಾಜದ ಎಲ್ಲಾ ಸಮುದಾಯಗಳಲ್ಲಿ ಕಂಡುಬರುವಂತೆ ಮುಸ್ಲಿಂ ಸಮುದಾಯದಲ್ಲೂ ಝಕಾತ್‍ನಂತ ಪದ್ಧತಿ ಇದ್ದಾಗ್ಯೂ ಬಡವ ಮತ್ತು ಶ್ರೀಮಂತರ ನಡುವಿನ ಅಂತರ ದಿನೇ ದಿನೇ ಹೆಚ್ಚುತ್ತಲೇ ಇರೋದು ದುರಂತವೇ ಸರಿ.
ಎಷ್ಟೋ ಮಂದಿ ಶ್ರೀಮಂತ ಮುಸ್ಲಿಮರು ಐದು ವಕ್ತ್ ನಮಾಝ್ ಮಾಡುತ್ತಾರೆ, ರಮಝಾನ್ ವೃತಾನುಷ್ಠಿಸುತ್ತಾರೆ, ಒಂದಲ್ಲ, ಎರಡಲ್ಲ ಮೂರುಮೂರು ಹಜ್ ನಿರ್ವಹಿಸುತ್ತಾರೆ. ಮಾವನ ಮನೆಗೆ ಹೋಗಿ ಬಂದಷ್ಟು ಸಲೀಸಾಗಿ ಬೇಕುಬೇಕೆಂದೆನಿಸಿದಾಗೆಲ್ಲಾ ಉಮ್ರಾ ನಿರ್ವಹಿಸಲು ಹೋಗುತ್ತಾರೆ. ಆದರೆ ಅವರು ಬಡವರ ಪಾಲಿನ ಹಕ್ಕಾದ ಝಕಾತನ್ನು ನೀಡದೇ ವಂಚಿಸುತ್ತಾರೆ. ಸಂಶಯವೇ ಬೇಡ. ಝಕಾತ್ ನೀಡದಾತ ಮಹಾ ಮೋಸಗಾರ!
ಬಡವರ ಪಾಲಿನ ಹಕ್ಕನ್ನು ನೀಡದೆ ಕೇವಲ ನಮಾಝ್, ಉಪವಾಸ, ಹಜ್ ಉಮ್ರಾ ನಿರ್ವಹಿಸಿದ ಮಾತ್ರಕ್ಕೆ ಅಂತವರು ಸಾತ್ವಿಕರು ಸಜ್ಜನರಾಗಿಬಿಡುವುದಿಲ್ಲ. ಝಕಾತ್‍ನ ಹೊರತಾಗಿ ಧರ್ಮ ಪಾಲನೆ ಪರಿಪೂರ್ಣವೆನಿಸದು. ಇದು ಝಕಾತ್ ನೀಡದ ವಂಚಕರ ಕತೆಯಾದರೆ, ಇನ್ನು ಝಕಾತ್ ನೀಡುವವರ ಕತೆ ಇನ್ನೊಂದು ವಿಧದ್ದು.
ಕೆಲವು ಶ್ರೀಮಂತರು ಝಕಾತ್ ಮಾತ್ರವಲ್ಲ ತಮ್ಮ ಬಳಿ ಕೈ ಚಾಚಿ ಬಂದವರನ್ನು ಯಾವತ್ತೂ ಖಾಲಿ ಕೈಯಲ್ಲಿ ಹಿಂದಿರುಗಿಸದೇ ಅವರಿಗೆ ಸ್ವದಕಾವನ್ನೂ ನೀಡುತ್ತಾರೆ. ಅಂದಹಾಗೆ, ಸ್ವದಕಾ ಎಂದರೆ ಅದು ಐಚ್ಚಿಕ ದಾನ. ಅದಕ್ಕೆ ನಿರ್ದಿಷ್ಟವಾಗಿ ಇಂತಿಷ್ಟೆಂದು ಲೆಕ್ಕವಿಲ್ಲ. ಎಷ್ಟು ಬೇಕಾದರೂ ನೀಡಬಹುದು. ಆದರೆ ಝಕಾತ್ ಹಾಗಲ್ಲ. ಅದನ್ನು ಪ್ರತೀ ವರ್ಷವೂ ತಮ್ಮ ಆಯವ್ಯಯದ ಲೆಕ್ಕಾಚಾರ ಮಾಡಿ, ಆದಾಯದ ಅಥವಾ ಉಳಿತಾಯದ ಎರಡೂವರೆ ಶೇಕಡಾವನ್ನು ಕಡ್ಡಾಯವಾಗಿ ಸಮಾಜದ ಬಡಬಗ್ಗರಿಗೆ ನೀಡಲೇಬೇಕು. ಕೆಲವ ಶ್ರೀಮಂತರು ಬಹಳ ಪರ್ಫೆಕ್ಟಾಗಿ ಝಕಾತ್ ನೀಡುತ್ತಾ ಬಂದರೂ ಅದರಿಂದ ಯಾರ ಬಡತನವೂ ನೀಗಿಲ್ಲ. ಯಾಕೆಂದರೆ ನೀಡುವವರು ಅದನ್ನು ನೀಡಬೇಕಾದ ಕ್ರಮದಲ್ಲಿ ನೀಡುತ್ತಿಲ್ಲ. ಆ ಕುರಿತಂತೆ ಸ್ವಲ್ಪ ಆಳವಾಗಿ ಅವಲೋಕಿಸಬೇಕಿರುವುದು ಕಾಲದ ಜರೂರು.
ಒಬ್ಬ ವ್ಯಕ್ತಿಯ ವಾರ್ಷಿಕ ಉಳಿತಾಯ ಒಂದು ಕೋಟಿಯೆಂದಿಟ್ಟುಕೊಳ್ಳೋಣ. ಅದರ ಲೆಕ್ಕಾಚಾರದ ಪ್ರಕಾರ ಆತ ವಾರ್ಷಿಕ ಎರಡೂವರೆ ಲಕ್ಷ ಝಕಾತ್ ನೀಡಬೇಕು. ಆತ ಎರಡೂವರೆ ಲಕ್ಷ ಝಕಾತ್ ನೀಡುತ್ತಾನೆ. ಅದನ್ನು ಹೇಗೆ ನೀಡುತ್ತಾನೆಂಬುವುದೇ ನಮ್ಮ ಮುಂದಿನ ಸವಾಲು. ಎರಡೂವರೆ ಲಕ್ಷವನ್ನು ಇನ್ನೂರೋ, ಮುನ್ನೂರೋ ಐನೂರೋ ಸಾವಿರವೋ ಮಂದಿಗೆ ಹಂಚಿ ನೂರು ರೂಪಾಯಿ, ಇನ್ನೂರು ರೂಪಾಯಿ, ಐನೂರು ರೂಪಾಯಿ, ಸಾವಿರ ರೂಪಾಯಿ, ಐದು ಸಾವಿರ , ಹತ್ತು ಸಾವಿರ ರೂಪಾಯಿಯಂತೆ ನೀಡುತ್ತಾನೆ. ಇವುಗಳಿಂದ ಯಾರ ಬಡತನವೂ ನೀಗುವುದಿಲ್ಲ. ಇದರಿಂದ ಕೆಲವರಿಗೆ ಒಂದು ದಿನಕ್ಕೆ ಎರಡು ಹೊತ್ತಿನ ಊಟ ಮಾಡಲು ಸಾಧ್ಯವಾದರೆ ಮತ್ತೆ ಕೆಲವರಿಗೆ ಅವರ ಕುಟುಂಬದ ಒಂದು ತಿಂಗಳು ಅಥವಾ ಎರಡು ತಿಂಗಳ ಖರ್ಚು ನಿಭಾಯಿಸಲು ಸಾಕಾಗುತ್ತದಷ್ಟೆ.
ಇದರಿಂದ ಝಕಾತ್ ಪಡೆದವನ ಬಡತನ ನೀಗುವುದೂ ಇಲ್ಲ ಮತ್ತು ಆತ ಯಾವತ್ತೂ ಸ್ವಾವಲಂಭಿಯಾಗಲೂ ಸಾಧ್ಯವಿಲ್ಲ. ಈ ರೀತಿ ಝಕಾತ್ ಕೊಡುವುದು ತಪ್ಪು ಎಂದಲ್ಲ. ಆದರೆ ಝಕಾತಿನ ಉದ್ದೇಶಿತ ಗುರಿ ತಲುಪಲು ಸಾಧ್ಯವಿಲ್ಲ.
ಮೊನ್ನೆ ಈದ್ ಹಬ್ಬದ ಮರುದಿನ ಮಂಗಳೂರು ಮೂಲದ ಎರಡು ಸ್ಥಳೀಯ ಟಿವಿ ಚಾನೆಲ್ ಗಳಲ್ಲಿ ಒಂದು ಡಾಕ್ಯುಮೆಂಟರಿ ಪ್ರಸಾರವಾಯಿತು. ಅದು ದೇರಳಕಟ್ಟೆ ಸಮೀಪದ ಕನಕೂರು ಎಂಬ ಪ್ರದೇಶದ ಬಡ ರೋಗಿಯೊಬ್ಬರ ಕಣ್ಣೀರ ಕತೆ. ಕೂಲಿ ಕೆಲಸ ಮಾಡುತ್ತಿದ್ದ ಆ ವ್ಯಕ್ತಿ ಒಮ್ಮೆ ಕೆಲಸ ಮಾಡುತ್ತಿದ್ದಾಗ ಗೋಡೆಯೊಂದರ ಮೇಲಿನಿಂದ ಬಿದ್ದು ಸೊಂಟಕ್ಕೆ ಪೆಟ್ಟಾಗಿತ್ತು. ವೈದ್ಯರ ಬಳಿ ಹೋದಾಗ ಆತನ ಡಿಸ್ಕ್ ಡಿಸ್‍ಲೊಕೇಟ್ ಆಗಿರುವುದಾಗಿ ತಿಳಿದು ಬಂತು. ಡಿಸ್ಕ್ ಡಿಸ್‍ಲೊಕೇಟ್ ಆದರೆ ಅದನ್ನು ಕೆಲವೊಮ್ಮೆ ಚಿಕಿತ್ಸೆ ಮತ್ತು ವ್ಯಾಯಾಮದ ಮೂಲಕ ಸರಿಪಡಿಸಬಹುದು, ಕೆಲವು ಕೇಸ್ ಗಳಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಡಿಸ್ಕನ್ನು ಯಥಾಸ್ಥಾನದಲ್ಲಿ ಲೊಕೇಟ್ ಮಾಡಿ ರೋಗಿಯನ್ನು ಗುಣಪಡಿಸಲು ಸಾಧ್ಯವಾದರೂ ಆತ ಮುಂದೆ ಶ್ರಮದ ಕೆಲಸ ಮಾಡುವುದು ಸುಲಭ ಸಾಧ್ಯವಲ್ಲ. ಹೊಟ್ಟೆ ಪಾಡೆಂದು ಶ್ರಮದ ಕೆಲಸಕ್ಕಿಳಿದರೆ ಪುನಃ ಆತನ ಡಿಸ್ಕಿಗೆ ಸಮಸ್ಯೆ ಬಾಧಿಸುವ ಸಾಧ್ಯತೆ ನಿಚ್ಚಳ. ಆದರೆ ನಾನು ಇಲ್ಲಿ ಹೇಳುತ್ತಿರುವ ವ್ಯಕ್ತಿಗೆ ಈಗಾಗಲೇ ಆಗಿರುವ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ನರಳುತ್ತಿದ್ದಾರೆ. ಇನ್ನೊಂದೆಡೆ ಸಂಸಾರದ ನೊಗದ ಭಾರ ಬೇರೆ ಇದೆ. ಅರ್ಧ ಕಟ್ಟಿದ ಗೋಡೆಗೆ ಅಧರ್ಂಬರ್ಧ ಸಿಮೆಂಟ್ ಶೀಟು, ಅಧರ್ಂಬರ್ಧ ತರ್ಪಾಲು ಹೊದಿಸಿ ದಿನದೂಡುತ್ತಿದ್ದಾರೆ. ಒಟ್ಟಿನಲ್ಲಿ ಗಾಳಿ ಬೀಸಿದರೆ ಹಾರಿ ಹೋಗುವ ತರ್ಪಾಲ್, ಮಳೆ ಬಂದರೆ ಕೊಳವಾಗುವ ಮನೆ… ಈದ್ ದಿನದಲ್ಲೂ ಹರಕಲು ಬಟ್ಟೆ ಧರಿಸಿದ ಅವರ ಮತ್ತು ಕುಟುಂಬದ ಮುಖದಲ್ಲಿ ಈದ್ ಹಬ್ಬದ ಸಂಭ್ರಮದ ಛಾಯೆ ಹೇಗೆ ತಾನೇ ಇರಲು ಸಾಧ್ಯ?
ಇದೇ ದೇರಳಕಟ್ಟೆ ಪರಿಸರದಲ್ಲಿ ವಾರ್ಷಿಕ ಒಂದು ಕೋಟಿ ಉಳಿತಾಯವಿರುವ ಕನಿಷ್ಠ ಐದು ಮನೆಗಳು ಮತ್ತು ವರ್ಷಕ್ಕೆ ಕನಿಷ್ಠ ಐದು ಕೋಟಿ ಉಳಿತಾಯವಿರುವ ಎರಡು ಮಂದಿ ಶ್ರೀಮಂತ ಮುಸ್ಲಿಮರಾದರೂ ಇದ್ದಾರೆ. ಹದಿನೈದು ಕೋಟಿಗೆ ಎಷ್ಟು ಝಕಾತ್ ಆಗುತ್ತದೆಂದು ನೀವೇ ಲೆಕ್ಕ ಹಾಕಿ. ಮೂವತ್ತೇಳೂವರೆ ಲಕ್ಷ ರೂಪಾಯಿ.. ಇನ್ನು ಅದಕ್ಕಿಂತ ಕಡಿಮೆ ಝಕಾತ್ ನೀಡಬಹುದಾದ ಕುಟುಂಬಗಳ ಲೆಕ್ಕ ಹಾಕಿದರೆ ದೇರಳಕಟ್ಟೆ ಪ್ರದೇಶವೊಂದರಲ್ಲೇ ಕನಿಷ್ಠ ಒಂದು ಕೋಟಿ ರೂಪಾಯಿಗಳಷ್ಟಾದರೂ ಝಕಾತ್ ಜನರೇಟ್ ಆಗುತ್ತದೆ.
ಇಷ್ಟು ಝಕಾತ್ ಸಂದಾಯವಾಗಬೇಕಾದ ಒಂದು ಊರಿನಲ್ಲಿ ಮನೆಮಠ ಇಲ್ಲದೇ ದಿನದ ಪಾಡಿಗೆ ಬವಣೆಪಡುವವರಿದ್ದಾರೆಂದರೆ ಏನರ್ಥ? ಒಂದೋ ಆ ಊರಿನ ಶ್ರೀಮಂತ ಮುಸ್ಲಿಮರು ಸರಿಯಾಗಿ ಝಕಾತ್ ನೀಡುತ್ತಿಲ್ಲ, ಅಥವಾ ಅವರ ಝಕಾತ್ ಅರ್ಹರಿಗೆ ತಲುಪಬೇಕಾದ ರೀತಿಯಲ್ಲಿ ತಲುಪುತ್ತಿಲ್ಲ. ಯಾರು ಝಕಾತ್ ನೀಡುತ್ತಾರೆ ಮತ್ತು ನೀಡುವುದಿಲ್ಲ ಎಂಬುದಕ್ಕಿಂತ ಅರ್ಹರಿಗೆ ಅರ್ಹ ರೀತಿಯಲ್ಲಿ ಅದು ತಲುಪುತ್ತಿದೆಯೋ, ಇಲ್ಲವೋ ಎಂದು ನಾವಿಂದು ಚರ್ಚಿಸಬೇಕಿದೆ.
ಒಂದು ಕೋಟಿ ಝಕಾತ್ ಮೊತ್ತವನ್ನು ಎಷ್ಟೋ ಸಾವಿರ ಜನಕ್ಕೆ ತಲುಪಿಸುವುದರಿಂದ ಯಾರ ಬಡತನವೂ ನೀಗುವುದಿಲ್ಲ. ಬದಲಾಗಿ ವ್ಯಕ್ತಿಯೊಬ್ಬರಿಗೆ ಎರಡೂವರೆ ಲಕ್ಷ ರೂಪಾಯಿಯಂತೆ ವರ್ಷಕ್ಕೆ ಇಪ್ಪತ್ತು ಮಂದಿಗೆ ನೀಡಿದರೆ ಅವರು ಯಾವುದಾದರೂ ವ್ಯಾಪಾರ ವಹಿವಾಟು ಪ್ರಾರಂಭಿಸಿ ಸ್ವಾವಲಂಬಿಯಾಗಲು ಸಾಧ್ಯ. ಅಥವಾ ಒಬ್ಬ ದುಡಿಯುವ ವ್ಯಕ್ತಿಗೆ ಒಂದು ಆಟೋ ರಿಕ್ಷಾ ತೆಗೆದುಕೊಟ್ಟರೆ, ಒಂದು ಟೆಂಪೋ ತೆಗೆದುಕೊಟ್ಟರೆ ಆತ ಸ್ವಾವಲಂಬಿಯಾಗಿ ಯಾರಿಗೂ ಕೈಚಾಚದೇ ಬದುಕಲು ಸಾಧ್ಯ. ಒಬ್ಬನಿಗೆ ವ್ಯಾಪಾರ ಮಾಡಲು ಮೂಲಬಂಡವಾಳ ನೀಡಿದರೆ ಆತನೂ ಸ್ವಾವಲಂಭಿಯಾಗಲು ಸಾಧ್ಯ. ಈ ರೀತಿ ಝಕಾತಿನ ಸಮರ್ಪಕ ಹಂಚಿಕೆಯಾದರೆ ಒಮ್ಮೆ ಝಕಾತ್ ಪಡಕೊಂಡು ಸ್ವಾವಲಂಭಿಯಾಗಿ ಮುಂದೆ ಕೆಲವೇ ವರ್ಷಗಳಲ್ಲಿ ಆತನೂ ಝಕಾತ್ ನೀಡಲು ಅರ್ಹನಾಗಬಹುದು. ಇಲ್ಲಿ ದೇರಳಕಟ್ಟೆ ಎಂಬ ಊರು ಉದಾಹರಣೆ ಮಾತ್ರ. ಎಲ್ಲಾ ಊರುಗಳ ಕತೆಯೂ ಇಷ್ಟೆ.
ಇನ್ನು ಕೆಲವರು ಝಕಾತ್ ನೀಡುವ ವಿಧಾನವೇ ತೀರಾ ಅವೈಜ್ಞಾನಿಕವಾಗಿರುತ್ತದೆ ಮತ್ತು ಅದು ವಾಸ್ತವದಲ್ಲಿ ಝಕಾತ್ ಅನ್ನಿಸಿಕೊಳ್ಳುವುದಿಲ್ಲ. ನನಗೆ ತಿಳಿದಂತೆ ಕೆಲವು ಮಧ್ಯಮ ವರ್ಗದ ಝಕಾತ್ ನೀಡುವವರು ರಮಝಾನ್ ತಿಂಗಳಲ್ಲಿ ಝಕಾತ್‍ಗೆಂದೇ ಒಂದಿಷ್ಟು ದುಡ್ಡು ಲೆಕ್ಕ ಮಾಡಿ ತೆಗೆದಿಟ್ಟು ಮನೆಬಾಗಿಲಿಗೆ, ಕಚೇರಿ ಬಾಗಿಲಿಗೆ ಯಾಚಿಸುತ್ತಾ ಬಂದವರಿಗೆ ಹತ್ತೊ, ಇಪ್ಪತ್ತೊ ನೀಡುತ್ತಾ ರಮಝಾನ್ ಮುಗಿಯುವುದರೊಳಗೆ ಆ ದುಡ್ಡನ್ನು ದಾನ ಮಾಡಿ ಮುಗಿಸುತ್ತಾರೆ. ವಾಸ್ತವದಲ್ಲಿ ಇದು ಝಕಾತ್ ಆಗುವುದೇ ಇಲ್ಲ. ಇದು ಸ್ವದಕಾ (ಐಚ್ಚಿಕ ದಾನವಾಗುತ್ತದೆ) ಎನಿಸಿಕೊಳ್ಳುತ್ತದೆ.
ಮತ್ತೆ ಕೆಲವರು ಮಸೀದಿಗೆ ದಾನ ನೀಡಿದ ದುಡ್ಡನ್ನು ಝಕಾತಾಗಿ ಸ್ವಯಂ ಪರಿಗಣಿಸುವುದೂ ಇದೆ. ಇದು ಕೂಡಾ ಝಕಾತ್ ಆಗುವುದಿಲ್ಲ. ಝಕಾತಿನ ಹಕ್ಕುದಾರರಿಗೆ ತಲುಪಿದರೆ ಮಾತ್ರ ಝಕಾತ್ ಆಗುತ್ತದೆ. ಸಮಾಜದ ಬಡವರು ಝಕಾತಿನ ಹಕ್ಕುದಾರರೇ ಹೊರತು ಮಸೀದಿ ಯಾವತ್ತೂ ಝಕಾತಿನ ಹಕ್ಕುದಾರ ಅಲ್ಲ.
ನನಗೆ ತಿಳಿದ ಕೈಗಾರಿಕೋದ್ಯಮಿಯೊಬ್ಬರು ತಮ್ಮ ಕಚೇರಿಯಲ್ಲಿ ಝಕಾತ್ ಬಾಕ್ಸ್ ಇಟ್ಟು ಪ್ರತಿದಿನ ಅದಕ್ಕೆ ದುಡ್ಡು ಹಾಕುತ್ತಾರೆ ಮತ್ತು ಪ್ರತಿದಿನ ಯಾಚಿಸಿ ಬರುವವರಿಗೆ ಅದರಿಂದಲೇ ನೀಡುತ್ತಾರೆ. ಅದು ವ್ಯಕ್ತಿಯೊಬ್ಬನ ಹಸಿವು ನೀಗಿಸಬಹುದು. ಅಥವಾ ಆತನ ಒಂದು ಪುಟ್ಟ ಸಮಸ್ಯೆ ಪರಿಹರಿಸಬಹುದು. ಇಂತಹದ್ದನ್ನು ಝಕಾತ್ ನಿಧಿಯಿಂದ ತೆಗೆಯುವುದಕ್ಕಿಂತ ಸ್ವದಕಾ ಎಂಬ ನೆಲೆಯಲ್ಲಿ ಕೊಡಬೇಕು ಅಥವಾ ಕೊಡದಿರಲೂಬಹುದು. ಆದರೆ ಝಕಾತ್ ಕೊಡಲೇಬೇಕು ಅದು ಕಡ್ಡಾಯ. ಅದನ್ನು ಸಮರ್ಪಕ ರೀತಿಯಲ್ಲಿ ಹಂಚಿಕೆ ಮಾಡಬೇಕು. ಆಗ ಮಾತ್ರ ಸ್ವಾವಲಂಭಿ ಸಮುದಾಯ ಮತ್ತು ಬಡತನ ಮುಕ್ತ ಸಮುದಾಯ ರೂಪಿಸಲು ಸಾಧ್ಯ.
ಈ ನಿಟ್ಟಿನಲ್ಲಿ ಸಮುದಾಯದ ಉಲಮಾ ಮತ್ತು ಉಮರಾ ವರ್ಗಕ್ಕೆ ಮಹತ್ತರವಾದ ಜವಾಬ್ದಾರಿಯಿದೆ. ಎಲ್ಲಾ ಜಮಾಅತ್‍ನ ಉಸ್ತಾದರುಗಳು ಶ್ರೀಮಂತ ಮುಸ್ಲಿಮರಿಗೆ ಈ ವಿಚಾರವನ್ನು ಮನದಟ್ಟು ಮಾಡಿ ಕೊಡುವ ಕೆಲಸ ಮಾಡಬೇಕು. ಮತ್ತು ಪ್ರತೀ ಜಮಾಅತ್ ವ್ಯಾಪ್ತಿಯಲ್ಲಿ ಬಡವರ ಗಣತಿ ಮಾಡಿ ಝಕಾತ್‍ಗೆ ಅರ್ಹರಾದವರ ಪಟ್ಟಿ ತಯಾರಿಸಿ ಒಬ್ಬೊಬ್ಬ ವ್ಯಕ್ತಿಗೆ ಒಬ್ಬೊಬ್ಬನ ಸಂಕಷ್ಟ ನೀಗಿಸುವ ಹೊಣೆ ಜಮಾಅತ್ ನೀಡಬೇಕು. ಅಥವಾ ಇಂತಿಷ್ಟು ಮಂದಿ ಶ್ರೀಮಂತರ ಗುಂಪು ಮಾಡಿ ಅವರಿಗೆ ಓರ್ವ ಬಡವನನ್ನು ಬಡತನ ಮುಕ್ತವಾಗಿಸುವ ಹೊಣೆ ವಹಿಸಬೇಕು…
ಈ ನೆಲೆಯಲ್ಲಿ ಚಿಂತಿಸಿ ಸಮುದಾಯ ಮುಂದಡಿಯಿಟ್ಟರೆ ಬಡತನ ನಿರ್ಮೂಲನ ನಮಗೊಂದು ಸವಾಲೇ ಆಗದು…

– ಇಸ್ಮತ್ ಫಜೀರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...