ದೇವಸ್ಥಾನಗಳಲ್ಲಿ ಪುರುಷ ಭಕ್ತರು ತಮ್ಮ ಮೇಲಂಗಿ ಕಳಚಿ ಒಳಹೋಗುವ ಪದ್ದತಿಯನ್ನು ಕೈಬಿಡಲು ದೇವಸ್ವಂ ಬೋರ್ಡ್ ಮುಂದಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ (ಜ.1) ತಿಳಿಸಿದ್ದಾರೆ.
ಸಮಾಜ ಸುಧಾರಕ ನಾರಾಯಣ ಗುರು ಅವರು ಸ್ಥಾಪಿಸಿರುವ ಪ್ರಸಿದ್ದ ಶಿವಗಿರಿ ಮಠದ ಸಚ್ಚಿದಾನಂದ ಸ್ವಾಮಿ ಮೇಲಂಗಿ ಕಳಚುವ ಪದ್ದತಿಯನ್ನು ವಿರೋಧಿಸಿದ ಬೆನ್ನಲ್ಲೇ ದೇವಸ್ವಂ ಮಂಡಳಿಗೆ ಸಂಬಂಧಿಸಿದಂತೆ ಸಿಎಂ ಹೇಳಿಕೆ ನೀಡಿದ್ದಾರೆ.
ಮಂಗಳವಾರ (ಡಿ.30) ಶಿವಗಿರಿ ತೀರ್ಥೋದ್ಭವ ಸಮಾವೇಶದಲ್ಲಿ ಮಾತನಾಡಿದ್ದ ಸಚ್ಚಿದಾನಂದ ಸ್ವಾಮಿಯವರು ಮೇಲಂಗಿ ಕಳಚುವ ಪದ್ಧತಿಯನ್ನು ಸಾಮಾಜಿಕ ಅನಿಷ್ಟ ಎಂದಿದ್ದರು. ಅದನ್ನು ನಿರ್ಮೂಲನೆ ಮಾಡುವಂತೆ ಕರೆ ನೀಡಿದ್ದರು.
ತೀರ್ಥೋದ್ಭವ ಸಮಾವೇಶವನ್ನು ಉದ್ಘಾಟನೆ ಮಾಡಿದ್ದ ಸಿಎಂ ಪಿಣರಾಯಿ ವಿಜಯನ್ ಅವರು ಸ್ವಾಮಿಯ ಮಾತಿಗೆ ಸಹಮತ ವ್ಯಕ್ತಪಡಿಸಿದ್ದು, ಮೇಲಂಗಿ ಕಳಚುವ ಪದ್ದತಿಯ ನಿರ್ಮೂಲನೆ ಸಾಮಾಜ ಸುಧಾರಣೆಯ ಮಹತ್ವದ ಹೆಜ್ಜೆ ಎಂದಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, “ದೇವಸ್ವಂ ಮಂಡಳಿಯ ಪ್ರತಿನಿಧಿಯೊಬ್ಬರು ನನ್ನನ್ನು ಭೇಟಿಯಾಗಿ ಮೇಲಂಗಿ ಕಳಚುವ ಪದ್ದತಿ ಕೈ ಬಿಡುವ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಇದು ಉತ್ತಮ ಯೋಚನೆ ಎಂದು ನಾನು ಹೇಳಿದ್ದೇನೆ” ಎಂದಿದ್ದಾರೆ. ಆದರೆ, ಯಾವ ದೇವಸ್ವಂ ಬೋರ್ಡ್ ಈ ನಿರ್ಧಾರವನ್ನು ಜಾರಿಗೆ ತರಲಿದೆ ಎಂಬುವುದನ್ನು ಸಿಎಂ ಸ್ಪಷ್ಟಪಡಿಸಿಲ್ಲ.
ಕೇರಳದಲ್ಲಿ ಗುರುವಾಯೂರ್, ತಿರುವಾಂಕೂರ್, ಮಲಬಾರ್, ಕೊಚ್ಚಿನ್ ಮತ್ತು ಕೂಡಲ್ಮಾಣಿಕ್ಯಂ ಎಂಬ ಐದು ಪ್ರಮುಖ ದೇವಸ್ವಂ ಬೋರ್ಡ್‌ಗಳಿವೆ. ಇವುಗಳು ಸುಮಾರು 3,000 ದೇವಾಲಯಗಳ ನಿರ್ವಹಣೆ ಮಾಡುತ್ತಿವೆ.
ಈ ವಿಚಾರದಲ್ಲಿ ಚರ್ಚೆಯಾಗಬೇಕು ಎಂಬ ಬಿಜೆಪಿ ನಾಯಕರ ಆಗ್ರಹದ ಕುರಿತು ಪ್ರತಿಕ್ರಿಯಿಸಿದ ಸಿಎಂ, “ಚರ್ಚೆಯಾಗಲಿ. ಆದರೆ, ನಿರ್ಧಾರ ತೆಗೆದುಕೊಳ್ಳುವುದು ಸರ್ಕಾರವಲ್ಲ, ದೇವಸ್ವಂ ಬೋರ್ಡ್” ಎಂದಿದ್ದಾರೆ.
ನಾರಾಯಣ ಗುರುಗಳಿಗೆ ಸಂಬಂಧಿಸಿದ ದೇವಸ್ಥಾನಗಳು ಮೇಲಂಗಿ ಕಳಚುವ ಪದ್ದತಿಯನ್ನು ಕೈಬಿಡಲಿದೆ ಎಂದು ಸಚ್ಚಿದಾನಂದ ಸ್ವಾಮಿ ತಿಳಿಸಿದ್ದಾರೆ.
ಬ್ರಾಹ್ಮಣರ ಜನಿವಾರ ಇದೆಯೇ ಎಂದು ಖಚಿತಪಡಿಸಿಕೊಳ್ಳಲು ದೇವಸ್ಥಾನಗಳಲ್ಲಿ ಪುರುಷರು ಮೇಲಂಗಿ ಕಳಚುವ ಪದ್ದತಿಯನ್ನು ಹಿಂದೆ ಜಾರಿಗೆ ತರಲಾಗಿದೆ. ಈ ಪದ್ದತಿ ನಾರಾಯಣ ಗುರುಗಳ ಉಪದೇಶಗಳಿಗೆ ವಿರುದ್ದವಾಗಿದೆ. ಆದರೆ, ಗುರುಗಳಿಗೆ ಸಂಬಂಧಿಸಿದ ಕೆಲ ದೇವಸ್ಥಾನಗಳಲ್ಲೇ ಈ ಪದ್ದತಿ ಚಾಲ್ತಿಯಲ್ಲಿದೆ. ಅದನ್ನು ಕೈ ಬಿಡಬೇಕು ಎಂದು ಸಚ್ಚಿದಾನಂದ ಸ್ವಾಮಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ : ದೇವಾಲಯಗಳಿಗೆ ಪ್ರವೇಶಿಸುವ ಮೊದಲು ಶರ್ಟ್ ತೆಗೆಯುವ ರೂಢಿ ಕೆಟ್ಟದ್ದು: ಕೇರಳ ಶಿವಗಿರಿ ಮಠದ ಮುಖ್ಯಸ್ಥ


