ಹಿರಿಯ ಪತ್ರಕರ್ತರೊಬ್ಬರ ಮನೆಯನ್ನು ಬುಲ್ಡೋಝರ್ ಬಳಸಿ ಕಾನೂನು ಬಾಹಿರವಾಗಿ ಕೆಡವಿದ ಆರೋಪದ ಮೇಲೆ ಉತ್ತರ ಪ್ರದೇಶದ ಮಹಾರಾಜ್ಗಂಜ್ ಪೊಲೀಸರು ಮಾಜಿ ಜಿಲ್ಲಾಧಿಕಾರಿ (ಜಿಲ್ಲಾ ದಂಡಾಧಿಕಾರಿ), ಪೊಲೀಸ್ ಅಧಿಕಾರಿಗಳು ಸೇರಿದಂತೆ 26 ಮಂದಿಯ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ.
ಹಿರಿಯ ಪತ್ರಕರ್ತ ಮನೋಜ್ ತಿಬ್ರೆವಾಲ್ ಆಕಾಶ್ ಅವರ ಪೂರ್ವಜರ ಮನೆಯನ್ನು ಕಾನೂನು ಬಾಹಿರವಾಗಿ ಕೆಡವಲಾಗಿತ್ತು. ಇದಕ್ಕೆ ಕಾರಣರಾದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿತ್ತು. ನ್ಯಾಯಾಲಯದ ಆದೇಶ ಬಂದ ಎರಡು ತಿಂಗಳ ಬಳಿಕ ತಪ್ಪಿತಸ್ಥರ ವಿರುದ್ದ ಎಫ್ಐಆರ್ ದಾಖಲಾಗಿದೆ.
2019ರಲ್ಲಿ ಪತ್ರಕರ್ತ ಮನೋಜ್ ಅವರ ಮನೆಯನ್ನು ರಸ್ತೆ ವಿಸ್ತರಣೆಯ ನೆಪದಲ್ಲಿ ಕೆಡವಲಾಗಿತ್ತು. ಆಗ ಮಹಾರಾಜ್ಗಂಜ್ನ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಅಮರ್ ನಾಥ್ ಉಪಾಧ್ಯಾಯ ಸೇರಿದಂತೆ 26 ಆರೋಪಿಗಳ ವಿರುದ್ಧ ಕ್ರಿಮಿನಲ್ ಪಿತೂರಿ, ನಕಲಿ ದಾಖಲೆ ಸೃಷ್ಟಿ, ನಿಯಮಗಳ ಉಲ್ಲಂಘನೆ ಸೇರಿದಂತೆ 16 ಅಪರಾಧಗಳನ್ನು ಹೊರಿಸಲಾಗಿದೆ
ಮುಖ್ಯ ನ್ಯಾಯಮೂರ್ತಿಯಾಗಿದ್ದ ಡಿ.ವೈ ಚಂದ್ರಚೂಡ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠವು 2024ರ ನವೆಂಬರ್ 6 ರಂದು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಆದೇಶದಲ್ಲಿ, ಪತ್ರಕರ್ತ ಮನೋಜ್ ಅವರ ಪೂರ್ವಜರ ಎರಡು ಅಂತಸ್ತಿನ ಮನೆ ಅಂಗಡಿಯನ್ನು ಕಾನೂನು ಬಾಹಿರವಾಗಿ ನೆಲಸಮಗೊಳಿಸಿದ್ದ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಮತ್ತು ಸಂತ್ರಸ್ತ ಮನೋಜ್ ಅವರಿಗೆ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿತ್ತು.
ಮನೋಜ್ ಅವರ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆದೇಶಿಸುವ ವೇಳೆ “ಬುಲ್ಡೋಝರ್ ನ್ಯಾಯ ಸ್ವೀಕಾರ್ಹವಲ್ಲ” ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿತ್ತು.
ಮಹಾರಾಜ್ಗಂಜ್ನ ಮೊಹಲ್ಲಾ ಹಮೀದ್ ನಗರದಲ್ಲಿದ್ದ ತನ್ನ ಮನೆಯನ್ನು ಕಾನೂನುಬಾಹಿರವಾಗಿ ನೆಲಸಮಗೊಳಿಸಲಾಗಿದೆ ಎಂದು 2019ರ ಅಕ್ಟೋಬರ್ನಲ್ಲಿ ಪತ್ರಕರ್ತ ಮನೋಜ್ ಅವರು ಸುಪ್ರೀಂ ಕೋರ್ಟ್ಗೆ ಪತ್ರ ಬರೆದು ದೂರು ನೀಡಿದ್ದರು. ಈ ದೂರನ್ನು ಸ್ವಯಂಪ್ರೇರಿತ ರಿಟ್ ಅರ್ಜಿಯಾಗಿ ಪರಿಗಣಿಸಿದ ನ್ಯಾಯಾಲಯ 2020ರಲ್ಲಿ ಮಹಾರಾಜ್ಗಂಜ್ನ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರಿಗೆ ನೋಟಿಸ್ ಜಾರಿ ಮಾಡಿತ್ತು.
ಬಳಿಕ 6 ನವೆಂಬರ್ 2024ರಂದು ನೀಡಿದ ಆದೇಶದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆ ಮತ್ತು ಸಂತ್ರಸ್ತನಿಗೆ ಪರಿಹಾರ ನೀಡುವಂತೆ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿತ್ತು.
ಇದನ್ನೂ ಓದಿ : ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ; ಖಾಸಗಿ ಕಾಲೇಜು ಮಾಲೀಕನ ಮಗನನ್ನು ಬಂಧಿಸಿದ ಪೊಲೀಸರು


