ತುರ್ತು ಮಿಲಿಟರಿ ಆಡಳಿತ ಹೇರಿ, ಬಳಿಕ ಅದನ್ನು ವಾಪಸ್ ಪಡೆದು ವಾಗ್ದಂಡನೆಗೆ ಗುರಿಯಾಗಿರುವ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರ ಬಂಧನ ಪ್ರಯತ್ನ ವಿಫಲವಾಗಿದೆ.
ಭ್ರಷ್ಟಾಚಾರ ತನಿಖಾ ಕಚೇರಿಯ (ಸಿಐಒ) ಉನ್ನತ ಅಧಿಕಾರಿಗಳು ಇಂದು (ಜ.3) ಯೂನ್ ಸುಕ್ ಯೋಲ್ ಅವರ ಬಂಧನಕ್ಕೆ ಅಧ್ಯಕ್ಷರ ನಿವಾಸಕ್ಕೆ ಆಗಮಿಸಿದ್ದರು. ಆದರೆ, ಅಲ್ಲಿ ಯೂನ್ ಬೆಂಬಲಿಗರು ಮತ್ತು ಅವರ ಭದ್ರತಾ ಸಿಬ್ಬಂದಿಯಿಂದ ಬಂಧನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಇಂದು ಬಂಧನಕ್ಕೊಳಗಾಗುವ ಮಾಹಿತಿ ದೊರೆತ ಹಿನ್ನೆಲೆ, ದೇಶದಾದ್ಯಂತ ಪ್ರತಿಭಟಿಸಲು ಯೂನ್ ಸುಕ್ ಯೋಲ್ ತನ್ನ ಬೆಂಬಲಿಗರಿಗೆ ನಿನ್ನೆಯೇ ಸೂಚನೆ ಕೊಟ್ಟಿದ್ದರು. ಯೂನ್ ಬೆಂಬಲಿಗರು ಇಂದು ಮುಂಜಾನೆಯೇ ಅವರ ನಿವಾಸದ ಬಳಿ ಜಮಾಯಿಸಲು ಶುರುಮಾಡಿದ್ದರು.
ಸೂರ್ಯೋದವಾಗುವ ಹೊತ್ತಿಗೆ ಅಧ್ಯಕ್ಷರ ಮನೆ ಬಳಿ ಜಮಾಯಿಸಿದ ಬೆಂಬಲಿಗರ ಸಂಖ್ಯೆ ಹೆಚ್ಚಾಗಿತ್ತು. ಯೂನ್ ಅವರ ಬಂಧನಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಬೆಂಬಲಿಗರು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದ್ದರು.
ಬೆಳಿಗ್ಗೆ 7 ಗಂಟೆಯ ಹೊತ್ತಿಗೆ ಯೂನ್ ಬಂಧನಕ್ಕೆ ಭ್ರಷ್ಟಾಚಾರ ತನಿಖಾ ಕಚೇರಿಯ(ಸಿಐಒ) ಉನ್ನತ ಅಧಿಕಾರಿಗಳು ಅಧ್ಯಕ್ಷರ ಮನೆ ಬಳಿಗೆ ಪೊಲೀಸರೊಂದಿಗೆ ಬಂದಿದ್ದರು. ಆದರೆ, ಅಲ್ಲಿ ಯೂನ್ ಅವರನ್ನು ಅವರ ಭದ್ರತಾ ಪಡೆ (Presidential Security Service-PSS) ಮತ್ತು ಸೇನಾ ಸಿಬ್ಬಂದಿ ಭದ್ರಕೋಟೆ ರಚಿಸಿ ರಕ್ಷಿಸಿದ್ದಾರೆ. ಇದರಿಂದ ಯೂನ್ ಬಂಧನ ಸಾಧ್ಯವಿಲ್ಲ ಎಂಬುವುದು ಸಿಐಒ ಅಧಿಕಾರಿಗಳಿಗೆ ಮನವರಿಕೆಯಾಗಿತ್ತು.
ಯೂನ್ ಅವರ ಬಂಧನ ಸಾಧ್ಯವಿಲ್ಲ ಎಂದರಿತ ಬಳಿಕ ಸಿಐಒ ಅಧಿಕಾರಿಗಳು ಬಂಧನ ಪ್ರಯತ್ನವನ್ನು ರದ್ದುಗೊಳಿಸಿದರು. ತಮ್ಮನ್ನು ತಡೆದ ಅಧ್ಯಕ್ಷರ ಭದ್ರತಾ ತಂಡ ಮತ್ತು ತನಿಖೆಗೆ ಸಹಕಾರ ನೀಡದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರ ವಿರುದ್ದ ಸಿಐಒ ಅಧಿಕಾರಿಗಳು ಕಿಡಿಕಾರಿದ್ದಾರೆ.
ಯೂನ್ ಸುಕ್ ಯೋಲ್ ಅವರ ಕಾನೂನು ತಂಡ ಬಂಧನ ವಾರೆಂಟ್ ಕಾನೂನು ಬಾಹಿರ ಎಂದಿದ್ದು, ತನಿಖಾಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ನ್ಯಾಯಾಲಯದ ಬಂಧನ ವಾರೆಂಟ್ ಜನವರಿ 6ರವರೆಗೆ ಮಾನ್ಯವಾಗಿರಲಿದೆ. ಅಷ್ಟರೊಳಗೆ ಯೋಲ್ ಅವರನ್ನು ಬಂಧಿಸಬೇಕಿದೆ. ಒಂದು ವೇಳೆ ಬಂಧಿಸಿದರೆ ಕೇವಲ 48 ಗಂಟೆಗಳ ಅವಧಿ ಮಾತ್ರ ಅದು ಮಾನ್ಯವಾಗಿರಲಿದೆ.
ಬಂಧನ ಪ್ರಯತ್ನ ವಿಫಲವಾದ ಬಳಿಕ ಮಾತನಾಡಿದ ಸಿಐಒ ಅಧಿಕಾರಿಗಳು ಮುಂದಿನ ಕ್ರಮದ ಬಗೆ ಯೋಚಿಸುತ್ತೇವೆ ಎಂದಿದ್ದಾರೆ. ಯೂನ್ ವಿರುದ್ದ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಹೇಳಿದ್ದಾರೆ.
ಯೂನ್ ಸುಕ್ ಯೋಲ್ ಅವರು ಡಿಸೆಂಬರ್ 3, 2024ರಂದು ರಾತ್ರಿ ದೇಶದಲ್ಲಿ ತುರ್ತು ಮಿಲಿಟರಿ ಆಡಳಿತ ಜಾರಿಗೊಳಿಸಿದ್ದರು. ಸ್ವಪಕ್ಷದವರು ಸೇರಿದಂತೆ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಮರುದಿನ ಅದನ್ನು ವಾಪಸ್ ಪಡೆದಿದ್ದರು.
ಯೂನ್ ಸುಕ್ ಯೋಲ್ ಸ್ವಹಿತಾಸಕ್ತಿಗಾಗಿ ದೇಶದಲ್ಲಿ ಮಿಲಿಟರಿ ಆಡಳಿತ ಹೇರಿದ ಆರೋಪದ ಮೇಲೆ ಅವರನ್ನು ಸಂಸತ್ ವಾಗ್ದದಂಡನೆ ಮೂಲಕ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಿದೆ. ಆದರೆ, ಅವರ ವಿರುದ್ದ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದೆ.
ತುರ್ತು ಮಿಲಿಟರಿ ಆಡಳಿತ ಹೇರಿದ ಸಂಬಂಧ ತನಿಖಾ ತಂಡ ಯೂನ್ ಸುಕ್ ಯೋಲ್ ಅವರನ್ನು ಮೂರು ಬಾರಿ ವಿಚಾರಣೆಗೆ ಕರೆದರೂ ಅವರು ಹಾಜರಾಗಲು ವಿಫಲರಾಗಿದ್ದಾರೆ. ಈ ಹಿನ್ನೆಲೆ ಅವರ ಬಂಧನಕ್ಕೆ ಡಿಸೆಂಬರ್ 31ರಂದು ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದೆ.
ಇದನ್ನೂ ಓದಿ : ಬಿಡೆನ್ ಪತ್ನಿಗೆ ₹17 ಲಕ್ಷ ಮೌಲ್ಯದ ವಜ್ರದ ಉಡುಗೊರೆ ನೀಡಿದ ನರೇಂದ್ರ ಮೋದಿ


