ಛತ್ತೀಸ್‌ಗಢದ ಬಿಜಾಪುರದಲ್ಲಿ ರಸ್ತೆ ಕಾಮಗಾರಿಯ ಕುರಿತ ವರದಿ ಮಾಡಿದ್ದ ಕಾರಣಕ್ಕಾಗಿ 28ರ ಹರೆಯದ ಮುಕೇಶ್ ಚಂದ್ರಾಕರ್ ಎಂಬ ಪತ್ರಕರ್ತ ಹತ್ಯೆಯಾಗಿದ್ದಾರೆ. ಜನವರಿ 1ರಿಂದ ಕಾಣೆಯಾಗಿದ್ದ ಚಂದ್ರಾಕರ್ ಅವರ ಶವವು ಜನವರಿ 3ರಂದು ಗುತ್ತಿಗೆದಾರರೊಬ್ಬರ ಸೈಟ್‌ನಲ್ಲಿದ್ದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಪತ್ತೆಯಾಗಿತ್ತು.
ಇದೊಂದು ವ್ಯವಸ್ಥಿತ ಹತ್ಯೆ ಪ್ರಕರಣವಾಗಿದ್ದು ಇಲ್ಲಿಯವರೆಗೆ ಮೂವರು ಶಂಕಿತರನ್ನು ಬಂಧಿಸಲಾಗಿದೆ. ಪತ್ರಕರ್ತನ ಹತ್ಯೆ ರಾಷ್ಟ್ರದೆಲ್ಲೆಡೆ ಭಾರೀ ಚರ್ಚೆಯ ವಿಷಯವಾಗಿದೆ.
ಪತ್ರಕರ್ತನ ಮೃತದೇಹದ ಮೇಲೆ ಶಸ್ತ್ರಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ ಗುರುತುಗಳಿದ್ದವು. ಈ ಪ್ರಕರಣದಲ್ಲಿ ದುಷ್ಕರ್ಮಿಗಳು ಅನುಮಾನಬಾರಬಾರದೆಂದು ಟ್ಯಾಂಕ್‌ನ ಮೇಲೆ 4 ಇಂಚು ಸಿಮೆಂಟ್ ಸ್ಲ್ಯಾಬ್ ಇಟ್ಟು ಬಂದ್ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಛತ್ತೀಸಗಡದ ಬಿಜಾಪುರದ ಮುಕೇಶ್ ಬಾಲ್ಯದಲ್ಲೇ ತನ್ನ ಹೆತ್ತವರನ್ನು ಕಳೆದುಕೊಂಡಿದ್ದು, ಸಹೋದರ ಯುಕೇಶ್ ಚಂದ್ರಾಕರ್ ಜತೆಗೆ ಬೆಳೆದು ಪತ್ರಕರ್ತನಾದವನು. 2021ರಲ್ಲಿ ಮಾವೋವಾದಿಗಳು ಅಪಹರಿಸಿದ್ದ ಸಿಆರ್‌ಪಿಎಫ್ ಕಮಾಂಡೋ ರಾಕೇಶ್ವರ್ ಸಿಂಗ್ ಮನ್ಹಾಸ್ ಬಿಡುಗಡೆಯಲ್ಲಿ ಮುಕೇಶ್ ಚಂದ್ರಾಕರ್ ಪ್ರಮುಖ ಪಾತ್ರವಹಿಸಿದ್ದರು.
ಪ್ರಮುಖ ಸುದ್ದಿ ಚಾನೆಲ್‌ಗೆ ಸುದ್ದಿಗಾರನಾಗಿದ್ದ ಮುಕೇಶ್ ಚಂದ್ರಾಕರ್, ಸ್ಥಳೀಯವಾಗಿ ಬಸ್ತರ್ ಜಂಕ್ಷನ್ ಎಂಬ ಯೂಟ್ಯೂಬ್ ಚಾನೆಲ್ ಅನ್ನೂ ಹೊಂದಿದ್ದರು. ಅದು ಒಂದೂವರೆ ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿತ್ತು. ಅವರ ಯೂಟ್ಯೂಬ್ ಚಾನೆಲ್ ಬಸ್ತರ್ ಜಂಕ್ಷನ್‌ನಲ್ಲಿ 486 ವಿಡಿಯೋಗಳಿದ್ದು, 1.61 ಲಕ್ಷಕ್ಕೂ ಹೆಚ್ಚು ಚಂದಾದಾರರಿದ್ದಾರೆ. ಇದರಲ್ಲಿರುವ ಹೆಚ್ಚಿನ ವಿಡಿಯೋಗಳು ಸರ್ಕಾರ ಮತ್ತು ಮಾವೋವಾದಿ ಸಂಘರ್ಷಕ್ಕೆ ಸಂಬಂಧಿಸಿವೆ.
ಪತ್ರಕರ್ತನಾಗಿರುವ ಸಹೋದರ ಯುಕೇಶ್ ಚಂದ್ರಾಕರ್ ಅವರು ಸಲ್ಲಿಸಿದ ದೂರಿನ ಆಧಾರದಲ್ಲಿ ಪೊಲೀಸರು ಮುಕೇಶ್ ಚಂದ್ರಾಕರ್ ಮೊಬೈಲ್ ಟ್ರಾಕ್ ಮಾಡಿ ಬಸ್ತಿಯಲ್ಲಿ ಶವ ಪತ್ತೆ ಹಚ್ಚಿದ್ದಾರೆ. ಸುರೇಶ್ ಚಂದ್ರಾಕರ್ ಅವರ ಜಾಗದಲ್ಲಿ ಮೃತದೇಹ ಪತ್ತೆಯಾಗಿದೆ. ಸುರೇಶ್ ಚಂದ್ರಾಕರ್ ಅವರು ಗುತ್ತಿಗೆದಾರರಾಗಿದ್ದು, ಅವರ ಹೆಸರನ್ನೂ ಯುಕೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮುಕೇಶ್ ಚಂದ್ರಾಕರ್ ಕೆಲವು ದಿನಗಳ ಹಿಂದೆ ಗಂಗಾಳೂರಿನಿಂದ ನೆಲಸನಾರ್ ಗ್ರಾಮದ ರಸ್ತೆ ನಿರ್ಮಾಣದಲ್ಲಿ ಗೋಲ್‌ಮಾಲ್ ಆಗಿರುವುದಾಗಿ ವರದಿ ಮಾಡಿದ್ದರು. ಇದಾದ ಬಳಿಕ ಅವರಿಗೆ ಕೆಲವರಿಂದ ಬೆದರಿಕೆ ಕರೆಗಳು ಹೋಗಿದ್ದವು. ಬೆದರಿಕೆ ಕರೆ ಮಾಡಿದವರ ಪೈಕಿ ಸುರೇಸ್ ಚಂದ್ರಾಕರ್ ಕೂಡ ಇದ್ದರು.
ಮಾವೋವಾದಿಗಳ ವಿರುದ್ಧ ಛತ್ತೀಸಗಢ ಸರ್ಕಾರ ಪೊಲೀಸರ ರಕ್ಷಣೆಯಲ್ಲಿ ಸಂಘಟಿಸಿದ್ದ ‘ಸಲ್ವಾ ಜುಡೂಮ್’ ಎಂಬ ಅರೆಶಸ್ತ್ರ ಪಡೆಯಲ್ಲಿದ್ದ ಸುರೇಶ್ ಚಂದ್ರಾಕರ್ ಹಿನ್ನೆಲೆ ತೀರಾ ಬಡತನದ್ದು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಾವೋವಾದಿ ಪ್ರಭಾವದ ಸೀಮೆಯಲ್ಲಿ ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಹಿಡಿದು ಬಸ್ತರ್ ನ ದೊಡ್ಡ ಗುತ್ತಿಗೆದಾರ ಕುಳ ಎನಿಸಿದ್ದ. 2021ರಲ್ಲಿ ಈತನ ಮದುವೆ ಭಾರೀ ಅದ್ದೂರಿಯಿಂದ ಜರುಗಿತ್ತು. ಮಾವನ ಮನೆಗೆ ಹೆಲಿಕಾಪ್ಟರಿನಲ್ಲಿ ಬಂದಿಳಿದಿದ್ದ. ಮದುವೆಯ ನೃತ್ಯಕ್ಕಾಗಿ ರಷ್ಯಾದಿಂದ ನರ್ತಕಿಯರ ತಂಡವನ್ನು ಕರೆಯಿಸಿದ್ದ. ಮದುವೆ ಔತಣಕೂಟವನ್ನು ಬೀಜಾಪುರದ ಸ್ಟೇಡಿಯಂ ನಲ್ಲಿ ಏರ್ಪಡಿಸಿದ್ದ. ಬಸ್ತರ್ ಹಿಂದೆಂದೂ ಕಂಡು ಕೇಳಿ ಅರಿಯದ ಮದುವೆಯಿದು ಎನ್ನಲಾಗಿದೆ.
ಜಾಗತಿಕವಾಗಿ ಪತ್ರಕರ್ತರ ಹತ್ಯೆ ಪ್ರಮಾಣದಲ್ಲಿ ಇಂದು ಬಾರೀ ಏರಿಕೆಯಾಗಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಈ ವರ್ಷ ಒಟ್ಟು 18 ದೇಶದಲ್ಲಿ 44 ಪತ್ರಕರ್ತರು ಹತ್ಯೆಯಾಗಿದ್ದಾರೆ. ಕಳೆದ ವರ್ಷಾವಧಿಗೆ ಹೋಲಿಸಿದರೆ 2018ರ ಮೊದಲ ನಾಲ್ಕು ತಿಂಗಳಲ್ಲಿ 28ರಷ್ಟು ಹೆಚ್ಚು ಪತ್ರಕರ್ತರ ಹತ್ಯೆಯಾಗಿದ್ದಾರೆ ಎಂದು ಜಿನೀವಾ ಮೂಲದ ಪ್ರೆಸ್ ಎಂಬ್ಲಮ್ ಕ್ಯಾಂಪೇನ್ (ಪಿಇಸಿ) ವರದಿ ಮಾಡಿದೆ.
ಭಾರತದಲ್ಲಿ 1992ರ ನಂತರ ಸುಮಾರು 70ಕ್ಕೂ ಹೆಚ್ಚು ಪತ್ರಕರ್ತರನ್ನು ವಿವಿಧ ಕಾರಣಗಳಿಗಾಗಿ ಹತ್ಯೆ ಮಾಡಲಾಗಿದೆ ಎಂದು ವರದಿಯೊಂದು ಹೇಳಿದೆ.
ಉತ್ತರ ಪ್ರದೇಶ 2027ರ ಚುನಾವಣೆಗೆ ಚಟುವಟಿಕೆ ಪ್ರಾರಂಭಿಸಿದ ಸಮಾಜವಾದಿ ಪಕ್ಷ!


