ಹೊಸದಿಲ್ಲಿ: 2023-24ರಲ್ಲಿ ಭಾರತದ್ಯಂತ ಒಟ್ಟು ಶಾಲಾ ಶಿಕ್ಷಕರಲ್ಲಿ ಮಹಿಳಾ ಶಿಕ್ಷಕರು 53.3% ರಷ್ಟಿದ್ದಾರೆ. ಇದು ಇಲ್ಲಿಯವರೆಗಿನ ಶಿಕ್ಷಕಿಯರು ಅತ್ಯಧಿಕವಾಗಿ ದಾಖಲಾದ ಅನುಪಾತವಾಗಿದೆ. ಕಳೆದ ಕೆಲವು ವರ್ಷಗಳಿಂದ ಹೆಚ್ಚಿನ ಲಿಂಗ ವೈವಿಧ್ಯತೆಯಲ್ಲಿ ಬೋಧನಾ ಕ್ಷೇತ್ರವು ಶೀಘ್ರವಾದ ಬದಲಾವಣೆ ಕಾಣುತ್ತಿದೆ ಎಂದು ಇತ್ತೀಚಿನ ಸರ್ಕಾರಿ ಅಂಕಿ-ಅಂಶಗಳು ಹೇಳಿವೆ.
2018-19ರಲ್ಲಿ 50% ರಷ್ಟು ಪುರುಷ ಶಾಲಾ ಶಿಕ್ಷಕರು ಇದ್ದರು. 2018-19ರಲ್ಲಿ 94.3 ಲಕ್ಷ ಒಟ್ಟು ಶಾಲಾ ಶಿಕ್ಷಕರಲ್ಲಿ 47.16 ಲಕ್ಷ (50.01%) ಪುರುಷರು ಮತ್ತು 47.14 ಲಕ್ಷ (49.98%) ಮಹಿಳಾ ಶಿಕ್ಷಕರಿದ್ದರು. 2023-24ರಲ್ಲಿ ಮಹಿಳಾ ಶಿಕ್ಷಕರ ಸಂಖ್ಯೆ 52 ಲಕ್ಷಕ್ಕೆ ಏರಿದೆ, ಪುರುಷ ಶಿಕ್ಷಕರ ಸಂಖ್ಯೆ ಸರಿಸುಮಾರು 45 ಲಕ್ಷಕ್ಕೆ ಇಳಿದಿದೆ.
ಬೇರೆ ರೀತಿಯಲ್ಲಿ ಹೇಳುವುದಾದರೆ, 2018-19 ಮತ್ತು 2023-24ರ ನಡುವೆ, ಶಾಲಾ ಶಿಕ್ಷಕರ ಮಹಿಳಾ ಪ್ರಾತಿನಿಧ್ಯವು ಶೇ.3.3 ಪಾಯಿಂಟ್‌ಗಳಿಂದ 53.3% ಕ್ಕೆ ಜಿಗಿದಿದೆ ಮತ್ತು ಪುರುಷ ಪ್ರಾತಿನಿಧ್ಯವು 46.6% ಕ್ಕೆ ಇಳಿದಿದೆ. ಶಿಕ್ಷಣ ಸಚಿವಾಲಯದಿಂದ ಸಂಕಲಿಸಲ್ಪಟ್ಟ UDISE+ನ ಅಂಕಿ-ಅಂಶವು ಇದನ್ನು ಹೇಳುತ್ತದೆ. UDISE+ ಎನ್ನುವುದು ಶಾಲಾ ಶಿಕ್ಷಣದ ಕುರಿತು ಭಾರತದಲ್ಲೆಡೆಯ ವ್ಯಾಪಕವಾದ ಅಂಕಿಅಂಶವಾಗಿದೆ ಮತ್ತು ರಾಜ್ಯಗಳು ನೇರವಾಗಿ ಸಲ್ಲಿಸಲಾದ ದತ್ತಾಂಶವನ್ನು ಇದು ಒಳಗೊಂಡಿದೆ. ಸಚಿವಾಲಯವು ಇತ್ತೀಚೆಗೆ 2022-23 ಮತ್ತು 2023-24 ವರ್ಷಗಳ UDISE+ ವರದಿಗಳನ್ನು ಒಟ್ಟಿಗೆ ಬಿಡುಗಡೆ ಮಾಡಿದೆ.
ಮಹಿಳಾ ಶಿಕ್ಷಕಿಯರು 2019-20ರಲ್ಲಿ ಈ ಮೊದಲಿನ 50% ದಾಖಲೆಯನ್ನು ಮುರಿದು 50.7%ಕ್ಕೆ ಏರಿದನ್ನು ಈ ವರದಿ ತೋರಿಸುತ್ತದೆ. ಅಂದಿನಿಂದ, 2022-23 ಮತ್ತು 2023-24ರಲ್ಲಿ ಅವರ ಪ್ರಾತಿನಿಧ್ಯವು ಕ್ರಮವಾಗಿ 51.3% ರಿಂದ 52.3% ಮತ್ತು ನಂತರ 53.3% ಕ್ಕೆ ಏರಿಕೆಯಾಗಿ ಅವರ ಪಾಲು ಸ್ಥಿರವಾಗಿ ಹೆಚ್ಚುತ್ತಲೇ ಇದೆ.
ಉನ್ನತ ಶಿಕ್ಷಣದಲ್ಲಿ ಇದು ವ್ಯತಿರಿಕ್ತವಾಗಿದೆ. ಅಲ್ಲಿ ಬೋಧನೆಯು ಪುರುಷ ಪ್ರಧಾನ ವೃತ್ತಿಯಾಗಿ ಉಳಿದಿದೆ ಅಖಿಲ ಭಾರತ ಸಮೀಕ್ಷೆಯ ಉನ್ನತ ಶಿಕ್ಷಣದ (AISHE) ದತ್ತಾಂಶದ ಪ್ರಕಾರ 2021-22ರಲ್ಲಿ 57% ಪುರುಷ ಬೋಧಕರಿಗೆ ಹೋಲಿಸಿದರೆ ಮಹಿಳಾ ಬೋಧಕಿಯರು 43%ರಷ್ಟು ಇದ್ದರು. 2018-19ರಲ್ಲಿ ಮಹಿಳೆಯರು 42% ಮತ್ತು ಪುರುಷರು 58% ರಷ್ಟು ಇದ್ದರು.
ಆದಾಗ್ಯೂ, UDISE+ ದತ್ತಾಂಶವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಖಾಸಗಿ ಶಾಲೆಗಳಲ್ಲಿ ಮಹಿಳಾ ಶಿಕ್ಷಕರ ಹೆಚ್ಚಳವು ಹೆಚ್ಚು ತೀಕ್ಷ್ಣವಾಗಿದೆ. ವಾಸ್ತವವಾಗಿ ಸರ್ಕಾರಿ ಶಾಲೆಗಳಲ್ಲಿ ಬೋಧನಾ ವರ್ಗವು ಪುರುಷರ ಪ್ರಾಬಲ್ಯವನ್ನು ಮುಂದುವರೆಸಿದೆ.
ಇದು 2018-19 ರಿಂದ 2023-24 ರವರೆಗೆ ಪ್ರತಿ ವರ್ಷವೂ ಹಾಗೆಯೇ ಉಳಿದಿದೆ. 2018-19ರಲ್ಲಿ 49.47 ಲಕ್ಷ ಸರ್ಕಾರಿ ಶಾಲಾ ಶಿಕ್ಷಕರಲ್ಲಿ 28.18 ಲಕ್ಷ (57%) ಪುರುಷರು ಮತ್ತು 21.29 ಲಕ್ಷ (43%) ಮಹಿಳೆಯರಿದ್ದಾರೆ. 2023-24ರಲ್ಲಿ ಮಹಿಳೆಯರ ಸಂಖ್ಯೆಯು ಸುಮಾರು 6%ರಷ್ಟು ಏರಿಕೆ ಕಂಡಿದೆ. 22.65 ಲಕ್ಷ ಮಹಿಳೆಯರು ಸರ್ಕಾರಿ ಶಾಲೆಗಳಲ್ಲಿ ಬೋಧಿಸುತ್ತಿದ್ದರೆ, 27.72 ಲಕ್ಷ ಪುರುಷರಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ, ಖಾಸಗಿ ಶಾಲೆಗಳಲ್ಲಿ ಬೋಧನೆ ಮಾಡುವ ಮಹಿಳೆಯರ ಸಂಖ್ಯೆಯಲ್ಲಿ ಸುಮಾರು 20% ರಷ್ಟು ಹೆಚ್ಚಿನ ಏರಿಕೆ ಕಂಡಿದೆ. 2018-19ರಿಂದ 2023-24ರವರೆಗಿನ ಎಲ್ಲಾ ವರ್ಷಗಳಲ್ಲಿ ಖಾಸಗಿ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಶಿಕ್ಷಕರನ್ನು ಹೊಂದಿವೆ. 2018-19ರಲ್ಲಿ ಒಟ್ಟು 33.04 ಲಕ್ಷ ಖಾಸಗಿ ಶಾಲಾ ಶಿಕ್ಷಕರಲ್ಲಿ 20.63 ಲಕ್ಷ ಮಹಿಳೆಯರಿದ್ದರು. 2023-24ರಲ್ಲಿ 37.30 ಲಕ್ಷ ಖಾಸಗಿ ಶಾಲಾ ಶಿಕ್ಷಕರಲ್ಲಿ 24.76 (66%) ಮಹಿಳೆಯರಿದ್ದರು.
ಕೆಲವು ರಾಜ್ಯಗಳು ಸರ್ಕಾರಿ ಶಾಲೆಗಳಲ್ಲಿ ಮೇಲಿನ ದತ್ತಾಂಶಗಳಿಗೆ ವ್ಯತಿರಿಕ್ತವಾಗಿವೆ. ಉದಾಹರಣೆಗೆ ಕೇರಳದಲ್ಲಿ 78% ಸರ್ಕಾರಿ ಶಾಲಾ ಶಿಕ್ಷಕರು ಮಹಿಳೆಯರಾಗಿದ್ದರೆ, ತಮಿಳುನಾಡಿನಲ್ಲಿ 67% ಮತ್ತು ಪಂಜಾಬ್‌ನಲ್ಲಿ 64%, ದೆಹಲಿಯಲ್ಲಿ 61%ರಷ್ಟು ಶಿಕ್ಷಕಿಯರಿದ್ದಾರೆ.


