ಬಿಹಾರ ಲೋಕಸೇವಾ ಆಯೋಗ (ಬಿಪಿಎಸ್‌ಸಿ) ಡಿಸೆಂಬರ್ 13ರಂದು ನಡೆಸಿದ್ದ ಪರೀಕ್ಷೆಯನ್ನು ರದ್ದುಪಡಿಸಲು ಒತ್ತಾಯಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ‘ಜನ ಸೂರಜ್’ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ ಅವರನ್ನು ಇಂದು (ಜ.6) ಮುಂಜಾನೆ ಪೊಲೀಸರು ಬಂಧಿಸಿದ್ದಾರೆ.
ವರದಿಗಳ ಪ್ರಕಾರ, ಪೊಲೀಸರು ಪ್ರಶಾಂತ್ ಅವರನ್ನು ಬಂಧಿಸಿ ಕರೆದೊಯ್ದ ಬಳಿಕ, ಅವರ ಬೆಂಬಲಿಗರನ್ನು ಪ್ರತಿಭಟನಾ ಸ್ಥಳದಿಂದ ಹೊರ ಕಳಿಸಿದ್ದಾರೆ. ಪ್ರಶಾಂತ್ ಅವರನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗಾಗಿ ಪಾಟ್ನಾ ಏಮ್ಸ್‌ಗೆ ಕರೆದೊಯ್ದಿದ್ದಾರೆ ಎಂದು ಅವರ ಬೆಂಬಲಿಗರು ಹೇಳಿದ್ದಾರೆ.
#WATCH | BPSC protest | Bihar: Patna Police detains Jan Suraaj chief Prashant Kishor who was sitting on an indefinite hunger strike at Gandhi Maidan pic.twitter.com/cOnoM7EGW1
— ANI (@ANI) January 5, 2025
ಪಿಟಿಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ಪಾಟ್ನಾ, ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಚಂದ್ರಶೇಖರ್ ಸಿಂಗ್ ಅವರು, “ಹೌದು, ಗಾಂಧಿ ಮೈದಾನದಲ್ಲಿ ಧರಣಿ ಕುಳಿತಿದ್ದ ಪ್ರಶಾಂತ್ ಕಿಶೋರ್ ಮತ್ತು ಅವರ ಬೆಂಬಲಿಗರನ್ನು ಸೋಮವಾರ ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ” ಎಂದು ತಿಳಿಸಿದ್ದಾರೆ.
“ಪ್ರಶಾಂತ್ ಕಿಶೋರ್ ಮತ್ತು ಬೆಂಬಲಿಗರು ನಿರ್ಬಂಧಿತ ಜಾಗದಲ್ಲಿ ಧರಣಿ ನಡೆಸುತ್ತಿದ್ದರು. ಈ ಕಾರಣಕ್ಕೆ ಬಂಧಿಸಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು” ಎಂದು ಡಿಎಂ ಮಾಹಿತಿ ನೀಡಿದ್ದಾರೆ.
ಗಾಂಧಿ ಮೈದಾನದ ಮಹಾತ್ಮ ಗಾಂಧಿ ಪುತ್ಥಳಿ ಬಳಿಯ ನಿರ್ಬಂಧಿತ ಜಾಗದಲ್ಲಿ ಪ್ರಶಾಂತ್ ಕಿಶೋರ್ ಮತ್ತು ಬೆಂಬಲಿಗರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದ್ದಕ್ಕಾಗಿ ಪಾಟ್ನಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಡಿಸೆಂಬರ್ 13ರಂದು ನಡೆದಿದ್ದ ಬಿಪಿಎಸ್‌ಸಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಪ್ರತಿಭಟನೆ ನಡೆಸುತ್ತಿದ್ದ ನಾಗರಿಕ ಸೇವಾ ಆಕಾಂಕ್ಷಿಗಳಿಗೆ ಬೆಂಬಲ ವ್ಯಕ್ತಪಡಿಸಿ ಜನವರಿ 2ರಿಂದ ಪ್ರಶಾಂತ್ ಕಿಶೋರ್ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.
ಆದರೆ, ಡಿಸೆಂಬರ್ 13ರಂದು ನಡೆದ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದ ಆರೋಪ ಕೇಳಿ ಬಂದಿದ್ದ ಹಿನ್ನೆಲೆ, ಆಯ್ದ ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸುವಂತೆ ಬಿಪಿಎಸ್‌ಸಿ ಆದೇಶಿಸಿತ್ತು.
ಅದರಂತೆ, ಜನವರಿ 4ರಂದು ರಾಜ್ಯದ 22 ಕೇಂದ್ರಗಳಲ್ಲಿ ಮರುಪರೀಕ್ಷೆ ನಡೆದಿದೆ. ಒಟ್ಟು 12,012 ಅಭ್ಯರ್ಥಿಗಳಲ್ಲಿ, ಸುಮಾರು 8,111 ಮಂದಿ ಮರು ಪರೀಕ್ಷೆಗಾಗಿ ತಮ್ಮ ಪ್ರವೇಶ ಕಾರ್ಡ್‌ಗಳನ್ನು (ಹಾಲ್ ಟಿಕೆಟ್) ಡೌನ್‌ಲೋಡ್ ಮಾಡಿಕೊಂಡಿದ್ದರು. ಆದರೆ, ಮರುಪರೀಕ್ಷೆಗೆ 5,943 ಅಭ್ಯರ್ಥಿಗಳು ಮಾತ್ರ ಹಾಜರಾಗಿದ್ದರು.
ಯಾವುದೇ ಸಮಸ್ಯೆಗಳಿಲ್ಲದೆ ಎಲ್ಲಾ ಕೇಂದ್ರಗಳಲ್ಲಿ ಬಹಳ ಯಶಸ್ವಿಯಾಗಿ ಮರು ಪರೀಕ್ಷೆ ನಡೆಸಲಾಗಿದೆ ಎಂದು ಬಿಪಿಎಸ್‌ಸಿ ಹೇಳಿದೆ.
ಇದನ್ನೂ ಓದಿ : ಒಡಿಶಾ | ಮೇಕೆ ಕಳವು ಆರೋಪ; ದಲಿತ ಯುವಕರ ಮೇಲೆ ಹಲ್ಲೆ, ಚಪ್ಪಲಿ ಹಾರ!


