ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದ ಯುವ ಪತ್ರಕರ್ತ ಮುಕೇಶ್ ಚಂದ್ರಕರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುರೇಶ್ ಚಂದ್ರಕರ್ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕಾರಿಗಳು ಹೈದರಾಬಾದ್‌ನಲ್ಲಿ ಇಂದು (ಜ.6) ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಗುತ್ತಿಗೆದಾರನಾಗಿರುವ ಆರೋಪಿ ಸುರೇಶ್ ಚಂದ್ರಕರ್, ಜನವರಿ 3ರಂದು ಪತ್ರಕರ್ತ ಮುಕೇಶ್ ಚಂದ್ರಕರ್ ಶವ ಪತ್ತೆಯಾದ ಬಳಿಕ ನಾಪತ್ತೆಯಾಗಿದ್ದರು.
ಪತ್ರಕರ್ತನ ಸಾವು ದೇಶದಾದ್ಯಂತ ಸುದ್ದಿಯಾದ ಬಳಿಕ ಛತ್ತೀಸ್‌ಗಢ ಸರ್ಕಾರ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿತ್ತು. ತನಿಖಾ ಅಧಿಕಾರಿಗಳು ತಲೆಮರೆಸಿಕೊಂಡಿದ್ದ ಆರೋಪಿ ಸುರೇಶ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಭಾನುವಾರ (ಜ.5) ರಾತ್ರಿ ಹೈದರಾಬಾದ್‌ನಲ್ಲಿ ಸೆರೆ ಹಿಡಿದಿದ್ದಾರೆ ಎಂದು ವರದಿಗಳು ಹೇಳಿವೆ.
ಪ್ರಕರಣದ ಇತರ ಆರೋಪಿಗಳಾದ ಸುರೇಶ್ ಚಂದ್ರಕರ್‌ನ ಸಹೋದರರು ರಿತೇಶ್ ಚಂದ್ರಕರ್ ಮತ್ತು ದಿನೇಶ್ ಚಂದ್ರಕರ್ ಹಾಗೂ ಇನ್ನೋರ್ವ ಮಹೇಂದ್ರ ರಾಮಟೆಕೆ ಅವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ರಸ್ತೆ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿರುವ ಕುರಿತು ವರದಿ ಮಾಡಿದ ಬಳಿಕ, ಜನವರಿ 1ರಿಂದ ಸ್ವತಂತ್ರ ಪತ್ರಕರ್ತ ಮುಕೇಶ್ ಚಂದ್ರಕರ್ ಅವರು ನಾಪತ್ತೆಯಾಗಿದ್ದರು. ಜನವರಿ 3ರಂದು ಬಿಜಾಪುರ ಜಿಲ್ಲೆಯ ಚಟ್ಟಂಪಾರ ಬಸ್ತಿಯ ಆರೋಪಿ ಗುತ್ತಿಗೆದಾರ ಸುರೇಶ್ ಚಂದ್ರಕರ್ ಅವರ ಜಮೀನಿನ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಮುಕೇಶ್ ಅವರ ಶವ ಪತ್ತೆಯಾಗಿತ್ತು.
ಆರೋಪಿ ಸುರೇಶ್ ಚಂದ್ರಕರ್ ಗುತ್ತಿಗೆ ಪಡೆದಿದ್ದ ರಸ್ತೆ ಕಾಮಗಾರಿಯಲ್ಲಿ ನಡೆದ ಭ್ರಷ್ಟಾಚಾರದ ಕುರಿತು ವರದಿ ಮಾಡಿದ್ದಕ್ಕೆ ಪತ್ರಕರ್ತ ಮುಕೇಶ್ ಅವರನ್ನು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮೃತನ ಸಹೋದರ ಟಿವಿ ಪತ್ರಕರ್ತ ಯುಕೇಶ್ ಚಂದ್ರಕರ್ ನೀಡಿದ ದೂರು ಆಧರಿಸಿ ಸುರೇಶ್ ಚಂದ್ರಕರ್ ಹಾಗೂ ಇತರರ ವಿರುದ್ದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ.
ಪತ್ರಿಕಾ ಸಂಸ್ಥೆಗಳಿಂದ ಖಂಡನೆ
ಪತ್ರಕರ್ತ ಮುಕೇಶ್ ಚಂದ್ರಕರ್ ಕೊಲೆಯನ್ನು ಡಿಜಿಟಲ್ ಸುದ್ದಿ ಸಂಸ್ಥೆಗಳ ಸಂಘ ‘DIGIPUB’ ಸೇರಿದಂತೆ ಹಲವು ಸುದ್ದಿ ಸಂಸ್ಥೆಗಳು ಖಂಡಿಸಿದ್ದು, ಅಪರಾಧಿಗಳ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿವೆ.
ಇದನ್ನೂ ಓದಿ : ಛತ್ತೀಸ್‌ಗಢದಲ್ಲಿ ಪತ್ರಕರ್ತ ಮುಕೇಶ್ ಚಂದ್ರಾಕರ್ ಹತ್ಯೆ: ಯಾರಿ ಪತ್ರಕರ್ತ, ಏನಿದು ಪ್ರಕರಣ


