ಬಿಜೆಪಿ ಎಂಎಲ್‌ಸಿ ಧನಂಜಯ್ ಸರ್ಜಿ ಹೆಸರಿನಲ್ಲಿ ಮೂವರಿಗೆ ಹೊಸ ವರ್ಷದ ಉಡುಗೊರೆಯಾಗಿ ‘ಕಲುಷಿತ’ ಸಿಹಿತಿಂಡಿಗಳನ್ನು ಕಳುಹಿಸಿದ್ದ ಆರೋಪದ ಮೇಲೆ ಶಿವಮೊಗ್ಗದ 26 ವರ್ಷದ ವಕೀಲರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆರೋಪಿಯನ್ನು ಶಿವಮೊಗ್ಗ ನಿವಾಸಿ ಸೌಹರ್ದ್ ಪಟೇಲ್ ಎಂದು ಪೊಲೀಸರು ಗುರುತಿಸಿದ್ದಾರೆ.
ತನ್ನ ಓದಿನ ಸಮಯದಲ್ಲಿ ಸಹ ವಿದ್ಯಾರ್ಥಿಯೊಂದಿಗಿನ ಸಂಬಂಧವನ್ನು ಕೊನೆಗೊಳಿಸಿ, ಖಿನ್ನತೆಗೆ ಚಿಕಿತ್ಸೆ ನೀಡಿದ್ದಕ್ಕಾಗಿ ಸೇಡು ತೀರಿಸಿಕೊಳ್ಳಲು, ನ್ಯಾಷನಲ್ ಎಜುಕೇಶನ್ ಸೊಸೈಟಿ (ಎನ್‌ಇಎಸ್)ಯ ಕಾರ್ಯದರ್ಶಿ ಎಸ್.ಎನ್. ನಾಗರಾಜ್ ಮತ್ತು ಇಬ್ಬರು ವೈದ್ಯರಿಗೆ ಕಲಬೆರಕೆ ಸಿಹಿತಿಂಡಿಗಳನ್ನು ಆರೋಪಿ ಕಳುಹಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬಿಜೆಪಿ ಎಂಎಲ್‌ಸಿ ಸರ್ಜಿ ಅವರ ಹೆಸರಿನಲ್ಲಿ ಹೊಸ ವರ್ಷದ ಶುಭಾಶಯ ಪತ್ರದೊಂದಿಗೆ ಸಿಹಿತಿಂಡಿಗಳನ್ನು ಜನವರಿ 1 ರಂದು ಡಿಟಿಡಿಸಿ ಕೊರಿಯರ್‌ನಲ್ಲಿ ಕಳುಹಿಸಲಾಗಿದೆ ಎಂದು ವೆರದಿಯಾಗಿದೆ. ನಾಗರಾಜ್ ಅವರು ಪಡೆದ ಸಿಹಿತಿಂಡಿಯಲ್ಲಿ ತೀವ್ರ ಕಹಿ ಕಂಡುಬಂದಿದ್ದು, ಕಲಬೆರಕೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಈ ವೇಳೆ ಗಾಬರಿಗೊಂಡ ಅವರು ಸರ್ಜಿ ಅವರನ್ನು ಸಂಪರ್ಕಿಸಿದ್ದರು. ಆಗ ಸರ್ಜಿ ಅವರು ಸಿಹಿ ತಿಂಡಿ ಪ್ಯಾಕೇಜ್ ಕಳುಹಿಸಿದ್ದನ್ನು ನಿರಾಕರಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಇದರ ನಂತರ ಸರ್ಜಿ ಅವರ ಆಪ್ತ ಕಾರ್ಯದರ್ಶಿ ಸಚಿನ್ ರಾಜ್ ಅವರು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೇ ರೀತಿಯ ಪೆಟ್ಟಿಗೆಗಳನ್ನು ಭದ್ರಾವತಿಯ ಇಬ್ಬರು ವೈದ್ಯರಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಕಂಡುಹಿಡಿದಿದ್ದರು. ಇಬ್ಬರು ವೈದ್ಯರಾದ ಅರವಿಂದ್ ಮತ್ತು ಕೆ.ಎಸ್. ಪವಿತ್ರಾ ಆರೋಪಿ ಪಟೇಲ್‌ನ ಖಿನ್ನತೆಗೆ ಚಿಕಿತ್ಸೆ ನೀಡಿದ್ದರು.
ಪೊಲೀಸರು ಡಿಟಿಡಿಸಿ ಪ್ಯಾಕೇಜ್‌ಗಳನ್ನು ಟ್ರ್ಯಾಕ್ ಮಾಡಿದ್ದು, ಅವುಗಳನ್ನು ಕಳುಹಿಸಿದ್ದು ಪಟೇಲ್ ಎಂದು ಪತ್ತೆ ಮಾಡಿದ್ದರು. ಇದರ ನಂತರ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದು, ಈ ವೇಳೆ ಆರೋಪಿ ತಾನು ಸಿಹಿತಿಂಡಿಗಳನ್ನು ಕಳುಹಿಸಿರುವುದಾಗಿ ಅವರು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
“ವಿಚಾರಣೆ ವೇಳೆ ಆರೋಪಿ ಪಟೇಲ್, ತಮ್ಮ ಗೆಳತಿಯೊಂದಿಗೆ ಸಂಬಂಧ ಮುರಿದುಬಿದ್ದ ನಂತರ ಡಾ.ಪವಿತ್ರರಿಂದ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದಾಗಿ ಹೇಳಿದ್ದಾರೆ. ಅವರು ಉಲ್ಲೇಖಿಸಿರುವ ಪ್ರೇಮಕಥೆ ಎರಡು ವರ್ಷಗಳಷ್ಟು ಹಳೆಯದಾಗಿರುವ ಕಾರಣ ನಾವು ಅವರ ಪ್ರತಿಪಾದನೆಗಳನ್ನು ಪರಿಶೀಲಿಸುತ್ತಿದ್ದೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಪಟೇಲ್ ಓದುತ್ತಿದ್ದಾಗ ವೈದ್ಯರೊಬ್ಬರ ಮಗಳೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ಈ ವೇಳೆ ವಿಷಯ ತಿಳಿದ ನಾಗರಾಜ್ ದೂರ ಇರುವಂತೆ ತಾಕೀತು ಮಾಡಿದ್ದರು. ಇದರ ನಂತರ ಅವರ ನಡುವಿನ ಸಂಬಂಧ ಮುರಿದುಬಿದ್ದಿತ್ತು. ಈ ವೇಳೆ ಪಟೇಲ್ ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದರು ಮತ್ತು ಡಾ.ಪವಿತ್ರ ಅವರಿಗೆ ಕೆಲವು ಮಾತ್ರೆಗಳನ್ನು ನೀಡಿ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಪಟೇಲ್‌ಗೆ ತನ್ನನ್ನು ರೋಗಿಯೆಂದು ಪರಿಗಣಿಸಲಾಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದ್ದಾರೆ”ಎಂದು ಅಧಿಕಾರಿ ಹೇಳಿದ್ದಾರೆ.
“ಕಾರ್ಯಕ್ರಮವೊಂದರಲ್ಲಿ ಸರ್ಜಿ ಮತ್ತು ನಾಗರಾಜ್ ಅವರನ್ನು ಒಟ್ಟಿಗೆ ನೋಡಿದ ನಂತರ ಅವರು ಒಂದು ಯೋಜನೆಯನ್ನು ರೂಪಿಸಿದ್ದರು. ಅವರು ಕೆಲವು ಔಷಧಿಗಳನ್ನು ಬಳಸಿಕೊಂಡು ಸಿಹಿತಿಂಡಿಗಳನ್ನು ಹಾಳುಮಾಡಿ, ಮೂವರಿಗೆ ಕೊರಿಯರ್ ಮೂಲಕ ಅವುಗಳನ್ನು ಕಳುಹಿಸಿದ್ದಾರೆ” ಎಂದು ಅಧಿಕಾರಿ ಹೇಳಿದ್ದಾರೆ. ಕೋಟೆ ಪೊಲೀಸರು ಪಟೇಲ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರಸ್ ವರದಿ ಮಾಡಿದೆ.
ಇದನ್ನೂಓದಿ: ಬಿಜೆಪಿ ನಾಯಕ ರಮೇಶ್ ಬಿಧುರಿ ಮನೆ ಮುಂದೆ ‘ಮಹಿಳಾ ವಿರೋಧಿ’ ಎಂದು ಬರೆದ ಕಾಂಗ್ರೆಸ್ ಕಾರ್ಯಕರ್ತರು
ಬಿಜೆಪಿ ನಾಯಕ ರಮೇಶ್ ಬಿಧುರಿ ಮನೆ ಮುಂದೆ ‘ಮಹಿಳಾ ವಿರೋಧಿ’ ಎಂದು ಬರೆದ ಕಾಂಗ್ರೆಸ್ ಕಾರ್ಯಕರ್ತರು


