ಇಂದು (ಜ.7) ಬೆಳಿಗ್ಗೆ 6.50ರ ಸುಮಾರಿಗೆ ನೇಪಾಳದ ಕಠ್ಮಂಡುವಿನಲ್ಲಿ 7.1ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭಾರತದ ಬಿಹಾರ, ದೆಹಲಿ-ಎನ್ಸಿಆರ್ ಪ್ರದೇಶಗಳಲ್ಲೂ ಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ.
ಭೂಕಂಪದ ಕೇಂದ್ರ ಬಿಂದು ನೇಪಾಳದ ಲೋಬುಚೆ ಪ್ರದೇಶದಿಂದ 93 ಕಿಲೋ ಮೀಟರ್ ದೂರದ ಚೀನಾ-ಟಿಬೆಟ್ ಗಡಿ ಪ್ರದೇಶ ಡಿಂಗ್ಗಿಯಲ್ಲಿ ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಹೇಳಿದೆ.
ಭೂಕಂಪದ ವೇಳೆ ಕಠ್ಮಂಡುವಿನಲ್ಲಿ ಜನರು ಭಯಭೀತರಾಗಿ ತಮ್ಮ ಮನೆಗಳಿಂದ ಹೊರ ಬಂದಿದ್ದಾರೆ. ಕಠ್ಮಂಡುವಿನ ನೆರೆಯ ಕಾವ್ರೆಪಲಾಂಚ್‌ವೋಕ್ ಮತ್ತು ಧಾಡಿಂಗ್ ಜಿಲ್ಲೆಗಳಲ್ಲಿಯೂ ಕಂಪನದ ಅನುಭವವಾಗಿದೆ ಎಂದು ವರದಿಗಳು ಹೇಳಿವೆ.
ಈ ಸುದ್ದಿ ಬರೆಯುವ ಹೊತ್ತಿಗೆ (ಬೆಳಿಗ್ಗೆ 9 ಗಂಟೆ) ಭೂಕಂಪದಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿರಲಿಲ್ಲ.
“ಇಲ್ಲಿ ಜೋರಾಗಿ ಭೂಮಿ ಕಂಪಿಸಿದ ಅನುಭವಾಗಿದೆ. ಎಲ್ಲರೂ ಬಹಳ ಎಚ್ಚರದಿಂದ ಇದ್ದಾರೆ. ಯಾವುದೇ ಹಾನಿ ಸಂಭವಿಸಿದ ಬಗ್ಗೆ ನಮಗೆ ಇನ್ನೂ ಮಾಹಿತಿ ಬಂದಿಲ್ಲ” ಎಂದು ನೇಪಾಳದ ನಾಮ್ಚೆ ಪ್ರದೇಶದ ಸರ್ಕಾರಿ ಅಧಿಕಾರಿ ಜಗತ್ ಪ್ರಸಾದ್ ಭೂಸಲ್ ಹೇಳಿದ್ದಾಗಿ ದಿ ಹಿಂದೂ ವರದಿ ಮಾಡಿದೆ. ನಾಮ್ಚೆ ಪ್ರದೇಶ ಎವರೆಸ್ಟ್ ಪರ್ವತದ ಹತ್ತಿರದಲ್ಲಿದೆ.
ಚೀನಾ ನಿಯಂತ್ರಣದ ಟಿಬೆಟ್‌ನ ಪವಿತ್ರ ನಗರದಲ್ಲಿ ಭೂಕಂಪ
ಇಂದು (ಜ.7) ಬೆಳಿಗ್ಗೆ ಚೀನಾದ ನಿಯಂತ್ರಣದಲ್ಲಿರುವ ಟಿಬೆಟ್‌ನ ಪವಿತ್ರ ನಗರ ಶಿಗಾಟ್ಸೆಯಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಚೀನಾದ ಭೂಕಂಪ ನೆಟ್‌ವರ್ಕ್ ಕೇಂದ್ರವು ತಿಳಿಸಿದೆ. ಘಟನೆಯಲ್ಲಿ ಕಟ್ಟಡಗಳಿಗೆ ಹಾನಿಯಾಗಿದೆ. ನೇಪಾಳ ಮತ್ತು ಭಾರತದಲ್ಲಿ ಕೂಡ ಭೂಕಂಪನ ಸಂಭವಿಸಿದ್ದು, ಜನರು ಮನೆಗಳಿಂದ ಹೊರ ಬಂದಿದ್ದಾರೆ ಎಂದಿದೆ.
ಇದನ್ನೂ ಓದಿ : ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ರಾಜೀನಾಮೆ


