ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶೀಘ್ರದಲ್ಲೇ 5,000 ರೂಪಾಯಿ ಮುಖಬೆಲೆಯ ಕರೆನ್ಸಿ ನೋಟನ್ನು ಬಿಡುಗಡೆ ಮಾಡಲಿದೆ ಎಂದು ಫೋಟೋವೊಂದು ವೈರಲ್ ಆಗಿದೆ.

ಫೇಸ್‌ಬುಕ್ ಮತ್ತು ಥ್ರೆಡ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ಫೋಟೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅವುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್ : ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಭಾರತದಲ್ಲಿ ಕರೆನ್ಸಿ ನೋಟುಗಳ ಮುದ್ರಣ ಮತ್ತು ಪ್ರಸಾರದ ಅಧಿಕಾರ ಹೊಂದಿದೆ. ಯಾವುದೇ ಹೊಸ ಕರೆನ್ಸಿ ನೋಟು ಮುದ್ರಿಸಿ ಮಾರುಕಟ್ಟೆಗೆ ಬಿಡುವುದಾದರೆ, ಅಥವಾ ಚಾಲ್ತಿಯಲ್ಲಿರುವ ನೋಟು ಹಿಂಪಡೆಯುವುದಾದರೆ ಅದಕ್ಕೂ ಮುನ್ನ ಆರ್‌ಬಿಐ ಗವರ್ನರ್ ಸುದ್ದಿಗೋಷ್ಠಿ ಕರೆದು ಜನರಿಗೆ ಮಾಹಿತಿ ನೀಡುತ್ತಾರೆ.
ನಮಗೆ ಲಭ್ಯವಾದ ಮಾಹಿತಿ ಪ್ರಕಾರ, ಆರ್‌ಬಿಐ 5,000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡುತ್ತಿರುವ ಬಗ್ಗೆ ಯಾವುದೇ ಮಾಹಿತಿಯನ್ನು ಇದುವರೆಗೆ ನೀಡಿಲ್ಲ.
ಆರ್‌ಬಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಕುರಿತು ಯಾವುದೇ ಪತ್ರಿಕಾ ಪ್ರಕಟಣೆ ಕಂಡು ಬಂದಿಲ್ಲ.

ಜನವರಿ 1ರಂದು ಆರ್‌ಬಿಐ ಹೊರಡಿಸಿದ ಪತ್ರಿಕಾ ಪ್ರಕಟನೆಯೊಂದರಲ್ಲಿ ರೂ. 2000 ಮುಖ ಬೆಲೆಯ ಕರೆನ್ಸಿ ನೋಟುಗಳ ಹಿಂಪಡೆಯುವಿಕೆಯ ಸ್ಥಿತಿಯ ಕುರಿತು ಮಾಹಿತಿ ನೀಡಿದೆ.
ಮೇ 19, 2023ರಂತೆ ಚಲಾವಣೆಯಲ್ಲಿರುವ ಸುಮಾರು 98.12 ಶೇಖಡ 2000 ಮುಖಬೆಲೆಯ ಕರೆನ್ಸಿ ನೋಟುಗಳನ್ನು ವಾಪಸ್ ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ವೆಬ್‌ಸೈಟ್‌ನಲ್ಲಿ ಪದೇ ಪದೇ ಕೇಳಲಾಗುವ ಪ್ರಶ್ನೆ (FAQ)ವಿಭಾಗದಲ್ಲಿ ಪ್ರಸ್ತುತ ರೂ. 10, ರೂ. 20, ರೂ. 50, ರೂ. 100, ರೂ. 200, ರೂ. 500 ಮತ್ತು ರೂ. 2000 ಮುಖಬೆಲೆಯ ನೋಟುಗಳನ್ನು ಚಾಲ್ತಿಯಲ್ಲಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ಆರ್‌ಬಿಐ ವೆಬ್‌ಸೈಟ್‌ನಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಕರೆನ್ಸಿ ನೋಟುಗಳ ಚಿತ್ರವನ್ನು ಪ್ರಕಟಿಸಲಾಗಿದೆ. ಅದರಲ್ಲೂ 5 ಸಾವಿರ ಮುಖಬೆಲೆಯ ನೋಟಿನ ಚಿತ್ರ ಕಂಡು ಬಂದಿಲ್ಲ.

ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧೀನಲ್ಲಿ ಕಾರ್ಯಾಚರಿಸುವ ಪ್ರೆಸ್ ಇನ್ಫರ್ಮೇಶನ್ ಬ್ಯೂರೋ (ಪಿಐಬಿ) ಕೂಡ ಜನವರಿ 4ರಂದು ತನ್ನ ಎಕ್ಸ್ ಖಾತೆಯಲ್ಲಿ ಈ ಸಂಬಂಧ ಸ್ಪಷ್ಟನೆ ಕೊಟ್ಟಿದ್ದು, “ಆರ್‌ಬಿಐ 5 ಸಾವಿರ ಮುಖಬೆಲೆಯ ಕರೆನ್ಸಿ ನೋಟು ಬಿಡುಗಡೆ ಮಾಡುತ್ತಿದೆ” ಎಂಬ ಸುದ್ದಿ ಸುಳ್ಳು ಎಂದಿದೆ.
सतर्क रहें ⚠️
सोशल मीडिया पर दावा किया जा रहा है कि भारतीय रिजर्व बैंक द्वारा ₹5000 के नए नोट जारी किए जाएंगे#PIBFactCheck
✅ यह दावा फर्जी है
✅ @RBI द्वारा ऐसा कोई निर्णय नहीं लिया गया है
✅ आधिकारिक वित्तीय जानकारी हेतु वेबसाइट https://t.co/WejSLtVo5O पर विजिट करें pic.twitter.com/CWTBocG62m
— PIB Fact Check (@PIBFactCheck) January 4, 2025
ಯಾವುದೇ ಮುಖ್ಯವಾಹಿನಿ ಮಾಧ್ಯಮಗಳು ಕೂಡ 5 ಸಾವಿರ ಮುಖ ಬೆಲೆಯ ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡುವ ಕುರಿತು ವರದಿ ಮಾಡಿಲ್ಲ.
ನಾವು ನಡೆಸಿದ ಪರಿಶೀಲನೆಯಲ್ಲಿ ಶೀಘ್ರದಲ್ಲೇ ರೂ. 5 ಸಾವಿರ ಮುಖಬೆಲೆಯ ಕರೆನ್ಸಿ ನೋಟುಗಳು ಬಿಡುಗಡೆಯಾಗಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ತಿಳಿದು ಬಂದಿದೆ.
FACT CHECK : ಅಜ್ಮೀರ್ ದರ್ಗಾ ವಿರುದ್ಧ ಪಂಜಿನ ಮೆರವಣಿಗೆ ವೇಳೆ ಬೆಂಕಿ ಅವಘಡ..ವೈರಲ್ ವಿಡಿಯೋದ ಅಸಲಿಯತ್ತೇನು?


