ಮಂಗಳವಾರ ಮುಂಜಾನೆ ಒಂದು ಗಂಟೆ ಸಮಾರಿಗೆ ಟಿಬೆಟ್‌ನಲ್ಲಿ ಸಂಭವಿಸಿದ ಭೂ ಕಂಪನ ರಿಕ್ಟರ್ ಮಾಪಕದಲ್ಲಿ 7.1 ತೀವ್ರೆ ದಾಖಲಾಗಿದೆ. ಪ್ರಬಲವಾದ ಆರು ಭೂಕಂಪಗಳಿಂದ ಕನಿಷ್ಠ 95 ಜನರು ಸಾವನ್ನಪ್ಪಿದ್ದಾರೆ. 130 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭೂಕಂಪನದಿಂದ ಭಾರತ, ನೇಪಾಳ ಮತ್ತು ಭೂತಾನ್‌ನ ಹಲವು ಪ್ರದೇಶಗಳಲ್ಲಿ ಕಟ್ಟಡಗಳು ನಡುಗಿವೆ.
ಆರಂಭದಲ್ಲಿ 35 ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಟಿಬೆಟಿಯನ್ ಪ್ರದೇಶದಲ್ಲಿ ಕನಿಷ್ಠ 95 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 130ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮ ತಿಳಿಸಿದೆ.
ಚೀನಾದ ಮಾಧ್ಯಮಗಳ ಪ್ರಕಾರ, ಭೂಕಂಪದ ಕೇಂದ್ರದ ಬಳಿ ಹಲವಾರು ಕಟ್ಟಡಗಳು ಕುಸಿದಿವೆ. “ಡಿಂಗ್ರಿ ಕೌಂಟಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಬಲವಾದ ಕಂಪನಗಳನ್ನು ಅನುಭವಿಸಿದವು ಮತ್ತು ಭೂಕಂಪನದ ಸಮೀಪವಿರುವ ಅನೇಕ ಕಟ್ಟಡಗಳು ಕುಸಿದಿವೆ” ಎಂದು ಚೀನಾದ ರಾಜ್ಯ ಪ್ರಸಾರಕ ಸಿಸಿಟಿವಿ ಹೇಳಿದೆ.
ಭಾರತ, ಭೂತಾನ್, ನೇಪಾಳದಲ್ಲೂ ಕಂಪನ
ದೆಹಲಿ-ಎನ್‌ಸಿಆರ್ ಮತ್ತು ಬಿಹಾರದ ರಾಜಧಾನಿ ಪಾಟ್ನಾ ಸೇರಿದಂತೆ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಬಲವಾದ ಕಂಪನಗಳು ಸಂಭವಿಸಿವೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲೂ ಭೂಕಂಪದ ಅನುಭವವಾಗಿದೆ.
ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ, ಬಲವಾದ ಕಂಪನದ ನಂತರ ನಿವಾಸಿಗಳು ತಮ್ಮ ಮನೆಗಳಿಂದ ಹೊರಗೆ ಓಡಿಹೋದರು ಎಂದು ವರದಿಯಾಗಿದೆ. ಟಿಬೆಟ್‌ನ ಗಡಿಯಲ್ಲಿರುವ ಏಳು ಗುಡ್ಡಗಾಡು ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿದೆ ಎಂದು ದೇಶದ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಇದನ್ನೂ ಓದಿ; ಚೀನಾ, ಟಿಬೆಟ್‌ನಲ್ಲಿ ಪ್ರಬಲ ಭೂಕಂಪನ; 30ಕ್ಕೂ ಹೆಚ್ಚು ಜನರು ಬಲಿ


