Homeಕರ್ನಾಟಕಪತ್ರಕರ್ತ ಯತಿರಾಜ್ ವಿರುದ್ಧ ಎಫ್‌ಐಆರ್‌; ಮಾದರ ಚನ್ನಯ್ಯ ಸ್ವಾಮೀಜಿ ನಡೆಗೆ ಮಾದಿಗ ಸಮುದಾಯದಿಂದಲೇ ವಿರೋಧ

ಪತ್ರಕರ್ತ ಯತಿರಾಜ್ ವಿರುದ್ಧ ಎಫ್‌ಐಆರ್‌; ಮಾದರ ಚನ್ನಯ್ಯ ಸ್ವಾಮೀಜಿ ನಡೆಗೆ ಮಾದಿಗ ಸಮುದಾಯದಿಂದಲೇ ವಿರೋಧ

- Advertisement -
- Advertisement -

ಸದಾ ಬಿಜೆಪಿ ನಾಯಕರ ಸಖ್ಯದಲ್ಲೆ ಇದ್ದುಕೊಂಡು, ಸಂಘಪರಿವಾರ ವೇದಿಕೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಶಿವಶರಣ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ತಮ್ನನ್ನು ಪ್ರಶ್ನೆ ಮಾಡಿದ ದಲಿತ ಸಮುದಾಯದ ಯುವ ಪತ್ರಕರ್ತ ಯತಿರಾಜ್ ಬ್ಯಾಲಹಳ್ಳಿ ವಿರುದ್ಧ ತಮ್ಮ ಬೆಂಬಲಿಗರ ಮೂಲಕ ದೂರು ದಾಖಲಿಸಿರುವುದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.

ಸದಾಕಾಲ ಸಂಘಪರಿವಾರ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವ ‘ಮಾದಾರ ಚೆನ್ನಯ್ಯ ಸ್ವಾಮೀಜಿ ಪೀಠ ತೊರೆಯಲಿ’ ಎಂದು ಆಗ್ರಹಿಸಿದ್ದ ಮಾದಿಗ ಸಮುದಾಯದ ಚಿಂತಕರು ಬಹಿರಂಗ ಪತ್ರ ಬರೆದಿದ್ದರು. ಈ ಪತ್ರಕ್ಕೆ
ಪ್ರಗತಿಪರ ಚಿಂತಕರು, ಸಮುದಾಯದ ಹಿರಿಯ ನಾಯಕರಾದ ಪ್ರೊ.ಸಿ.ಕೆ.ಮಹೇಶ್, ವಡ್ಡಗೆರೆ ನಾಗರಾಜಯ್ಯ, ವಕೀಳರಾದ ಪ್ರೊ.ಹರಿರಾಮ್, ಹೋರಾಟಗಾರ ಭಾಸ್ಕರ್ ಪ್ರಸಾದ್, ಹಿರಿಯ ಪತ್ರಕರ್ತ ರವಿಕುಮಾರ್ ಟೆಲೆಕ್ಸ್, ವಕೀಲರಾದ ಹನುಮೇಶ್ ಗುಂಡೂರು, ಬರಹಗಾರ ಯತಿರಾಜ್ ಬ್ಯಾಲಹಳ್ಳಿ ಸಹಿ ಮಾಡಿದ್ದಾರೆ.

ಇದೇ ಪತ್ರವನ್ನು ಯತಿರಾಜ್ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದರು. ಈ ಪೋಸ್ಟ್‌ನಿಂದ ಮಾದಿಗ ಸಮುದಾಯಕ್ಕೆ ಹಾಗೂ ಶಿವಶರಣ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಅವರಿಗೆ ಅವಮಾನ ಆಗಿದೆ ಎಂದು ಆರೋಪಿಸಿರುವ ಶ್ರೀನಿವಾಸ್ ಎಚ್‌ ಎಂಬುವವರು ವಿಜಯನಗರ ಜಿಲ್ಲೆಯ ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಯತಿರಾಜ್ ವಿರುದ್ಧ ದೂರು ದಾಖಲಾಗುತ್ತಿದ್ದಂತೆಯೇ ಮಾದಿಗ ಸಮುದಾಯದ ವಿದ್ಯಾವಂತರು ಹಾಗೂ ಚಿಂತಕರು  ಮಾದರ ಚನ್ನಯ್ಯ ಸ್ವಾಮೀಜಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ದಲಿತ ಸಮುದಾಯದ ಹಲವು ಮುಖಂಡರು ಯತಿರಾಜ್ ಬೆಂಬಲಕ್ಕೆ ನಿಂತಿದ್ದು, ಹಲವರು ಸ್ವಾಮೀಜಿ ನಡೆಯನ್ನು ಬಹಿರಂಗವಾಗಿ ವಿರೋಧಿಸಿದ್ದಾರೆ.

ಪತ್ರಕರ್ತ ಯತಿರಾಜ್

ಬಹಿರಂಗ ಪತ್ರದಲ್ಲಿ ಏನಿದೆ?

‘ಮಾದಾರ ಚೆನ್ನಯ್ಯ ಸ್ವಾಮೀಜಿ ಪೀಠ ತೊರೆಯಲಿ’ ಎಂಬ ಬೇಡಿಕೆಯೊಂದಿಗೆ ಮಾದಿಗ ಸಮುದಾಯದ ಹಲವರು ಬಹಿರಂಗ ಪತ್ರ  ಬರೆದಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

“ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನ ಗೆದ್ದರೆ ಸಂವಿಧಾನ ಬದಲಿಸುವ ಮುಕ್ತ ಅಜೆಂಡಾ ಹೊಂದಿದ್ದ ಬಿಜೆಪಿ, ಸಂಘಪರಿವಾರವನ್ನು ಈ ದೇಶದ ಸಮಸ್ತ ದಲಿತ ಸಮುದಾಯ ಬಲವಾಗಿ ವಿರೋಧಿಸಿದ ಕಾರಣ, ಬಿಜೆಪಿ ಬಹುಮತ ಕಳೆದುಕೊಂಡಿತು. ಆನಂತರ ಗಾಬರಿಗೊಂಡಿರುವ ಸಂಘಪರಿವಾರವು ಹಿಂಬಾಗಿನಿಂದ ಬಂದು ದಲಿತ ಸಮುದಾಯವನ್ನು ಒಡೆದು ಆಳುವ ಕಾರ್ಯಸೂಚಿಯನ್ನು ಜಾರಿಗೆ ತರಲು ಮುಂದಾಗಿದೆ. ಅದರ ಭಾಗವಾಗಿ ‘ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್’ ಎಂಬ ವೇದಿಕೆ ರೂಪಿಸಿಕೊಂಡು ‘ಸಂವಿಧಾನ ಸನ್ಮಾನ’ ಎಂಬ ಹೆಸರಿನ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತು ಅರ್ಧಸತ್ಯಗಳನ್ನು, ಹಸಿಹಸಿ ಸುಳ್ಳುಗಳ ಕಥೆ ಕಟ್ಟಿ ಅಪಪ್ರಚಾರ ಮಾಡುವ ಕಾರ್ಯಕ್ರಮಗಳನ್ನು ಆರ್.ಎಸ್.ಎಸ್. ರೂಪಿಸುತ್ತಿದೆ. ಇದಕ್ಕೆ ಮಾದಿಗ ಸಮುದಾಯದ ಮಾದಾರ ಚನ್ನಯ್ಯ ಸ್ವಾಮೀಜಿಯನ್ನು ಮುಂದೆ ಬಿಟ್ಟು, ಮಾದಿಗ ಸಮುದಾಯ ಇಂತಹ ಪಿತೂರಿ ಕೃತ್ಯದ ಭಾಗವೆಂಬಂತೆ ಚಿತ್ರಿಸಲಾಗುತ್ತಿದೆ” ಎಂದು ಸಮುದಾಯದ ಹಿತಚಿಂತಕರು ಆತಂಕ ವ್ಯಕ್ತಪಡಿಸಿದ್ದಾರೆ.

“ಮೊದನಿಂದಲೂ ಬುದ್ಧ, ಬಸವ ಮಾರ್ಗಕ್ಕೆ, ಬಾಬಾ ಸಾಹೇಬರ ಚಿಂತನೆಗಳಿಗೆ ವಿರೋಧವಾಗಿಯೂ, ಸಂಘಪರಿವಾರದ ಬಾಲಂಗೋಚಿಯಾಗಿಯೂ ನಡೆದುಕೊಂಡಿರುವ ಸ್ವಾಮೀಜಿ, ಸಮುದಾಯದ ಪ್ರತಿನಿಧಿಯೂ ಅಲ್ಲ, ಸಮುದಾಯದ ನೋವು-ನಲಿವು, ಒಲವು- ನಿಲುವುಗಳೂ ಅವರಿಗೆ ತಿಳಿದಿಲ್ಲ. ಮಾದಾರ ಚನ್ನಯ್ಯನವರ ಪೀಠದಲ್ಲಿ ಕೂತ ಮಾತ್ರಕ್ಕೆ ಅವರು ಸಮುದಾಯದ ಸಾಕ್ಷಿಪ್ರಜ್ಞೆಯಾಗುವುದಿಲ್ಲ. ಬಿಜೆಪಿ, ಸಂಘಪರಿವಾರ ಹೇಳಿದಂತೆ ಕುಣಿಯುತ್ತಿರುವ ಸ್ವಾಮೀಜಿಯವರು ಕಾವಿ ಕಳಚಿ, ಬಿಜೆಪಿಯನ್ನೋ, ಆರ್.ಎಸ್.ಎಸ್ ಸಂಸ್ಥೆಯನ್ನೋ ಸೇರಿಕೊಂಡು ಅವರು ಕೊಟ್ಟ ಜವಾಬ್ದಾರಿಗಳನ್ನು ನಿಭಾಯಿಸಿದರೆ ನಮ್ಮದೇನೂ ತಕರಾರು ಇಲ್ಲ” ಎಂದು ಆಗ್ರಹಿಸಿದ್ದರು.

“ಸ್ವಾಮೀಜಿಯವರು ಮೊದಲಿನಿಂದಲೂ ಆರ್.ಎಸ್.ಎಸ್. ಮತ್ತು ಬಿಜೆಪಿ ಪಕ್ಷ ಕಟ್ಟುವಲ್ಲಿ ಮುಂಚೂಣಿಯಲ್ಲಿರುವ ಕಾರಣ, ಅವರು ಪೀಠ ತೊರೆದು ತಾವು ಬಿಜೆಪಿಯ ಬಾಲಂಗೋಚಿ ಎಂಬುದನ್ನು ಅವರು ಸಾಬೀತು ಮಾಡಬೇಕು. ಆರ್‌.ಎಸ್.ಎಸ್.ನ ಸರಸಂಘಚಾಲಕ ಹುದ್ದೆಯನ್ನೋ, ಬಿಜೆಪಿಯ ರಾಜ್ಯಾಧ್ಯಕ್ಷವನ್ನೋ ಕೊಟ್ಟರೆ ನಿಭಾಯಿಸಲು ಸ್ವಾಮೀಜಿ ಯೋಗ್ಯವಾಗಿದ್ದಾರೆ. ಒಟ್ಟಾರೆ ಸ್ವಾಮೀಜಿ ಪೀಠ ತೊರೆಯುವವರೆಗೂ ಸಮುದಾಯ ಹೋರಾಟ ನಡೆಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದರು.

“ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಇದೇ ಕೆಲಸವನ್ನು ಸ್ವಾಮೀಜಿ ನಡೆಸಿದ್ದರು.‌ ‘ಸಂವಿಧಾನದಲ್ಲಿ ಮನುಸ್ಮೃತಿ ಇಲ್ಲ’, ‘ಅಂಬೇಡ್ಕರ್ ಮತ್ತು ದಲಿತ ಸಮುದಾಯಕ್ಕೆ ಸಹಕರಿಸುವುದೆಂದರೆ ಹಾವಿಗೆ ಹಾಲೆರೆದಂತೆ’ ಎಂದಿದ್ದ ಆರ್.ಎಸ್.ಎಸ್. ಕೂಟವು ಈ ಹಿಂದೆ ‘ಮಾದಿಗ ಮುನ್ನಡೆ’ ಎಂಬ ಕಾರ್ಯಕ್ರಮ ನಡೆಸಿತ್ತು. ಆ ಮೂಲಕ ‘ಮನುವಾದ ಮುನ್ನಡೆ’ ಮಾಡುವ ಪಿತೂರಿ ನಡೆದಿತ್ತು.‌ ಅದಕ್ಕೂ ಈ ಮಾದಾರ ಚನ್ನಯ್ಯ ಸ್ವಾಮೀಜಿಯವರನ್ನು ಮುಂದೆ ಬಿಡಲಾಗಿತ್ತು. ಸಮುದಾಯ ಎಚ್ಚೆತ್ತುಕೊಂಡು ಪ್ರಶ್ನೆ ಮಾಡಿದಾಗ ತಣ್ಣಗಾಗಿದ್ದರು. ಮಾದಿಗರನ್ನು ಒಂದು ಪಕ್ಷದ, ಮತೀಯವಾದಿ ಸಿದ್ಧಾಂತ ಹೊಂದಿರುವ ಸಂಘಪರಿವಾರದ ಅಡಿಯಾಳುಗಳನ್ನಾಗಿ ಮಾಡುವ ದುಷ್ಕೃತ್ಯಗಳಿಗೆ ಸ್ವಾಮೀಜಿ ಮುಂದಾಗಿದ್ದಾರೆ. ಸ್ವಾಮೀಜಿಯವರು ಪೀಠವನ್ನು ತೊರೆದು ತಾವು ಬಿಜೆಪಿ ಹೇಳಿದಂತೆ ಕುಣಿಯುವ ರಾಜಕಾರಣಿ ಎಂದು ಸಾಬೀತು ಮಾಡಲಿ. ಸಮುದಾಯವನ್ನು ದಿಕ್ಕು ತಪ್ಪಿಸುವ ಈ ಪ್ರವೃತ್ತಿ ಮುಂದುವರಿದರೆ ಸಮುದಾಯ ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆಯನ್ನು ಈ ಮೂಲಕ ನೀಡುತ್ತಿದ್ದೇವೆ” ಎಂದು ಸಹಿ ಮಾಡಿದ್ದರು.

ಎಲ್ಲಿಗೆ ನಾಟಬೇಕಿತ್ತೋ ಅಲ್ಲಿಗೆ ನಾಟಿದೆ: ಯತಿರಾಜ್

ತಮ್ಮ ವಿರುದ್ಧ ದಾಖಲಾಗಿರುವ ದೂರಿನ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಪತ್ರಕರ್ತ ಯತಿರಾಜ್, “ನಮ್ಮ ವಿಷಯ ಎಲ್ಲಿಗೆ ನಾಟಬೇಕಿತ್ತೋ ಅಲ್ಲಿಗೆ ನಾಟಿದೆ ಎಂಬುದು ನಮಗೆ ಮೂಲಗಳಿಂದ ಖಚಿತವಾಗಿದೆ” ಎಂದು ಹೇಳಿದ್ದಾರೆ.

“ನಾನು ಅಪ್ಪಟ ಮಾದಿಗ ಸಮುದಾಯದವನು. ನನ್ನನ್ನು ಸೇರಿದಂತೆ ಇತರರ ಮೇಲೆ ಪ್ರಕರಣ ದಾಖಲಿಸಿದ್ದಾರೆಂದು ಸುದ್ದಿ ಓದಿ ಆಘಾತವೇನೂ ಆಗಲಿಲ್ಲ. ಸಾರ್ವಜನಿಕ, ಸಾಮಾಜಿಕ ಬದುಕಿನಲ್ಲಿ ಇರುವ ನನ್ನಂಥವರಿಗೆ ಇದೆಲ್ಲ ಸಾಮಾನ್ಯ. ಇಂತಹ ಪಿತೂರಿಗಳನ್ನು ಮಾಡುತ್ತಾರೆಂದು ಗೊತ್ತಿದ್ದೇ ಹೋರಾಟಕ್ಕೆ ಇಳಿದಿರುತ್ತೇವೆ ಎಂಬುದು ಬಹುಶಃ ಪ್ರಕರಣ ದಾಖಲಿಸಿದವರಿಗೆ ಗೊತ್ತಿರಲಿಕ್ಕೆ ಇಲ್ಲ. ಬಾಯಿ ಮುಚ್ಚಿಸಲು ಇಂತಹ ತಂತ್ರ ಬಳಸಬಹುದೆಂದು ಅಂದುಕೊಂಡಿದ್ದರೆ ಅದು ನಿಮ್ಮ ಭ್ರಮೆಯಷ್ಟೆ” ಎಂದಿದ್ದಾರೆ.

“ಮಾದಾರ ಚನ್ನಯ್ಯ ಸ್ವಾಮೀಜಿ ಸಮುದಾಯಕ್ಕೆ ಮಾಡುತ್ತಿರುವ ದ್ರೋಹದ ಕುರಿತು ನಾನು ಮತ್ತು ನನ್ನ ಸಮುದಾಯದ ಹಿರಿಯರಾದ ಪ್ರೊ.ಸಿ.ಕೆ.ಮಹೇಶ್, ಡಾ.ವಡ್ಡಗೆರೆ ನಾಗರಾಜಯ್ಯ, ಬಿ.ಆರ್.ಭಾಸ್ಕರ್ ಪ್ರಸಾದ್, ಪ್ರೊ.ಹರಿರಾಮ್, ಹನುಮೇಶ್ ಗುಂಡೂರು ಸೇರಿ ಚರ್ಚೆ ಮಾಡಿಕೊಂಡು, ಒಂದು ಬಹಿರಂಗ ಪತ್ರವನ್ನು ಬರೆದಿದ್ದೆವು. ಅದನ್ನು ನಾನು ಎಫ್.ಬಿ.ಯಲ್ಲಿ ಪೋಸ್ಟ್ ಮಾಡಿರುತ್ತೇನೆ. ಅದು ಎಲ್ಲಿಗೆ ನಾಟಬೇಕಿತ್ತೋ ಅಲ್ಲಿಗೆ ನಾಟಿದೆ ಎಂಬುದು ನಮಗೆ ಮೂಲಗಳಿಂದ ಖಚಿತವಾಗಿದೆ” ಎಂದು ಬರೆದಿದ್ದಾರೆ.

“ನಮ್ಮ ಪತ್ರವನ್ನು ಮಾಧ್ಯಮಗಳು ವರದಿ ಮಾಡಿದ್ದವು. ಸಮುದಾಯದಕ್ಕೆ ನಮ್ಮಂಥ ಅಂಬೇಡ್ಕರ್ ಅನುಯಾಯಿಗಳ ಆತಂಕಗಳು ತಿಳಿಯಬೇಕು, ಚರ್ಚೆಯಾಗಬೇಕು ಎಂಬ ನಮ್ಮ ಆಶಯ ಒಂದು ಮಟ್ಟಿಗೆ ಮೇಲುಗೈ ಸಾಧಿಸಿದೆ. ನಮ್ಮ‌ ಪತ್ರದಿಂದಾಗಿ ಸಂಘಪರಿವಾರದ ಗುಲಾಮಗಿರಿ ಮಾಡುವವರ ಮತ್ತು ಸಮುದಾಯವನ್ನು ಸಾಂಸ್ಕೃತಿಕವಾಗಿ ದಿವಾಳಿ ಮಾಡಲು ಯತ್ನಿಸಿದವರ ಮರೆಮೋಸಗಳು ಬಯಲಾಗಿವೆ. ಸಂಘಪರಿವಾರ ಎಂದಿಗೂ ನೇರವಾಗಿ ಯುದ್ಧ ಮಾಡುವುದಿಲ್ಲ. ಸಮುದಾಯದ ಒಳಗೆ ಒಡಕುಗಳನ್ನು ಮೂಡಿಸಿ, ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿರುತ್ತದೆ. ನಮ್ಮವರ ಹೆಗಲ ಮೇಲೆ ಬಂದೂಕು ಇಟ್ಟು ನಮ್ಮವರಿಗೆಯೇ ಹೊಡೆಸುತ್ತದೆ ಎಂಬ ಎಚ್ಚರಿಕೆ ಸಮುದಾಯದ ಜನರಿಗೆ ಮನವರಿಕೆ ಮಾಡಿಸಲು ಇದು ಸುಸಮಯ ಎಂದು ಭಾವಿಸುತ್ತೇವೆ” ಎಂದು ಹೇಳಿದ್ದಾರೆ.

“ಮಾದಿಗ ಸಮುದಾಯವನ್ನು ಸಂಘಪರಿವಾರದ ಚಾಕರಿಗೆ ದೂಡಲು ಯತ್ನಿಸುತ್ತಿರುವ ಮಾದಾರ ಚೆನ್ನಯ್ಯ ಸ್ವಾಮೀಜಿ ಪೀಠ ತೊರೆದು, ಬಿಜೆಪಿ ಪಕ್ಷವನ್ನು ಸೇರಿಕೊಳ್ಳಲಿ ಎಂಬುದು ನಮ್ಮ ಒತ್ತಾಯವಾಗಿತ್ತು. ಈ ಆಗ್ರಹವನ್ನು ಇನ್ನು ಮುಂದೆಯೂ ಮಾಡುತ್ತೇವೆ, ಅದಕ್ಕಾಗಿ ತೀವ್ರ ಹೋರಾಟ ಮಾಡಲೂ ಸಜ್ಜಾಗಿದ್ದೇವೆ.
ಬಾಬಾ ಸಾಹೇಬರು ಬರೆದ ಸಂವಿಧಾನದ ಕುರಿತು ಆರ್.ಎಸ್.ಎಸ್ ವಿಷಕಾರಿಕೊಂಡಿತ್ತು. ‘ಈ ಸಂವಿಧಾನದಲ್ಲಿ ಮನುಸ್ಮೃತಿ ಒಳಗೊಂಡಿಲ್ಲ, ಇದರಲ್ಲಿ ಭಾರತೀಯತೆ ಇಲ್ಲ’ ಎಂದು ಆರ್.ಎಸ್.ಎಸ್ ಮುಖವಾಣಿ ಆರ್ಗನೈಸರ್ ಬರೆದಿತ್ತು. ಆರ್.ಎಸ್.ಎಸ್ ಪ್ರಮುಖರಲ್ಲಿ ಒಬ್ಬನಾದ ಮೂಂಜೆ, ‘ದಲಿತರಿಗೆ ಮತ್ತು ಅಂಬೇಡ್ಕರ್ ಅವರಿಗೆ ಸಹಕರಿಸುವುದೆಂದರೆ ಹಾವಿಗೆ ಹಾಲೆರೆದಂತೆ’ ಎಂದು ಬರೆದದ್ದನ್ನು ನಾವು ಮರೆಯುವುದಿಲ್ಲ.
ಮಾದಾರ ಚೆನ್ನಯ್ಯ ಸ್ವಾಮೀಜಿಯವರು ಸಮುದಾಯಕ್ಕೆ ಮಾಡುತ್ತಿರುವ ದ್ರೋಹವನ್ನು ಮುಂದೆಯೂ ಬಯಲಿಗೆಳೆಯುವ ಕೆಲಸವನ್ನು ಮಾಡುತ್ತಲೇ ಇರುತ್ತೇವೆ” ಎಂದು ಘೋಷಿಸಿದ್ದಾರೆ.

“ಒಂದು ಸಣ್ಣ ಪ್ರತಿರೋಧ ಎದುರಿಸಲಾಗದಷ್ಟು ದುರ್ಬಲರು ಈ ಮಾದಾರ ಚೆನ್ನಯ್ಯ ಸ್ವಾಮೀಜಿಯ ‘ಪಾದಸೇವಕರು’ ಎಂಬುದು ಅರ್ಥವಾಗಿದೆ. ನಮಗೆ ಬುದ್ಧ, ಬಸವ, ಅಂಬೇಡ್ಕರ್ ಹಾಕಿಕೊಟ್ಟ ಹೋರಾಟದ ಹಾದಿಯೇ ಸರ್ವಶ್ರೇಷ್ಠ. ಅಂತಹ ದಾರಿಗೆ ಅಡ್ಡಲಾಗಿರುವ ಮುಳ್ಳು, ಗಿಡಗಂಟಿಗಳನ್ನು ಬುಲ್ಡೋಜ್ ಮಾಡುತ್ತಾ ಮುನ್ನುಗ್ಗೋಣ” ಎಂದು ಹೇಳಿದ್ದಾರೆ.

ದೂರು ದಾಖಲಾದ ಬಳಿಕ ಮತ್ತೊಂದು ಬಹಿರಂಗ ಪತ್ರ ಬರೆದ ಭಾಸ್ಕರ್ ಪ್ರಸಾದ್

ಸಮುದಾಯದ ಯುವ ಪತ್ರಕರ್ತ ಯತಿರಾಜ್ ಬ್ಯಾಲಹಳ್ಳಿ ವಿರುದ್ಧ ಎಫ್‌ಐಆರ್‌ ದಾಖಲಾದ ನಂತರ, ಹೋರಾಟಗಾರ ಬಿ.ಆರ್‌. ಭಾಸ್ಕರ್ ಪ್ರಸಾದ್ ಅವರು ಮಾದಾರ ಪೀಠದ ಸ್ವಾಮೀಜಿಗೆ ಮತ್ತೊಂದು ಬಹಿರಂಗ ಪತ್ರ ಬರೆದಿದ್ದಾರೆ. “ಸಮುದಾಯದ ಹಿರಿಯರು ಮಾರ್ಗದರ್ಶಕರೂ ಆಗಿ ತಾವು ಅವರ ಆತಂಕವನ್ನು ಅರ್ಥ ಮಾಡಿಕೊಂಡು ಅವರ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ಮುಕ್ತ ಮಾತುಕತೆಗೆ ಮುಂದಾಗಬೇಕು” ಎಂದು ಆಗ್ರಹಿಸಿದ್ದಾರೆ.

ಪತ್ರದಲ್ಲಿ ಏನಿದೆ?

ಗೌರವಾನ್ವಿತ ಶಿವಶರಣ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿಗಳೇ, ಸಮುದಾಯದ ಕಾಳಜಿ ಇರುವ ಯಾರೇ ಆದರೂ ನಿಮ್ಮ ಮೇಲೆ ಕೆಲವು ಆರೋಪ ಮಾಡುವ ಮೂಲಕ ಸಮುದಾಯ ಪರವಾದ ಆತಂಕವನ್ನು ವ್ಯಕ್ತಪಡಿಸಿದಾಗ, ಸಮುದಾಯದ ಹಿರಿಯರು ಮಾರ್ಗದರ್ಶಕರೂ ಆಗಿ ತಾವು ಅವರ ಆತಂಕವನ್ನು ಅರ್ಥ ಮಾಡಿಕೊಂಡು ಅವರ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ಮುಕ್ತ ಮಾತುಕತೆಗೆ ಮುಂದಾಗಬೇಕು. ಒಕ್ಕಲಿಗ ಸಮುದಾಯದ ಕೆಲವು ಪ್ರಗತಿಪರ ಚಿಂತಕರು ಕೆಲವು ಸಾರಿ ಯಾವುದೋ ಕಾರಣಕ್ಕಾಗಿ ಪೂಜ್ಯ ನಿರ್ಮಲಾನಂದ ಸ್ವಾಮೀಜಿಗಳ ಮೇಲೆ ಮುನಿಸುಕೊಂಡಾಗ, ಲಿಂಗಾಯತ ಅಥವಾ ಪಂಚಮಸಾಲಿಗಳು ತಮ್ಮ ಗುರುಗಳ ವಿರುದ್ಧ ಕೋಪ ಮಾಡಿಕೊಂಡು ಹೇಳಿಕೆಗಳನ್ನು ಕೊಟ್ಟಾಗ, ಆಯಾ ಸಮುದಾಯದ ಗೌರವಾನ್ವಿತ ಸ್ವಾಮೀಜಿಗಳು ಅವರನ್ನು ಕರೆದು ಮಾತಾಡಿ ಅವರುಗಳ ಆತಂಕವೇನೆಂದು ಕೇಳಿ ತಿಳಿದುಕೊಂಡು, ಅವರ ಆತಂಕದ ಕಾರಣವನ್ನು ಅರ್ಥ ಮಾಡಿಕೊಂಡು ಸಮಾಲೋಚಿಸಿ ಸಮಾಜವನ್ನು ಮುಂದೆ ಕೊಂಡೊಯ್ಯುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಾರಲ್ಲ.. ಹಾಗೆಯೇ ತಾವು ಮಾಡಬೇಕಿರುವುದು.

ಆದರೆ ತಾವು, ತಮ್ಮ ಮೇಲಿನ ಆರೋಪದ ಹಿಂದಿನ ಸಕಾರಣವನ್ನು, ಸಮುದಾಯ ಪರವಾದ ಆತಂಕದ ಹಿಂದಿನ ಕಾರಣವನ್ನು ಅರ್ಥ ಮಾಡಿಕೊಳ್ಳುವಲ್ಲಿ ಅಥವಾ ಆ ಬಗ್ಗೆ ಪರಸ್ಪರ ಸಮಾಲೋಚಿಸುವಲ್ಲಿ ಸೋತಿದ್ದೀರಿ. ಬದಲಾಗಿ ತಾವೇ ಮುಂದಾಗಿ ಯುದ್ಧ ಘೋಷಿಸುವ ಉತ್ಸಾಹ ತೋರಿದಂತೆ ಕಾಣುತಿದ್ದೀರಿ.

ಮಗುವನ್ನು ನಾಡಿನ ಸತ್ಪ್ರಜೆಯಾಗಿ ಬೆಳೆಸುವಲ್ಲಿ ಗುರು ಮತ್ತು ತಂದೆಯ ಜವಾಬ್ದಾರಿ ಬೇರೆ ಬೇರೆ ಅಲ್ಲ ಎಂದು ನಾನು ಭಾವಿಸಿರುತ್ತೇನೆ. ಇಲ್ಲಿ ಮಗು, ಗೊತ್ತಿದ್ದೂ ಗೊತ್ತಿಲ್ಲದೆಯೋ ತಪ್ಪು ಮಾಡಬಹುದು. ಕಾರಣ ಅದಿನ್ನೂ ಬೆಳೆಯುವ ಪೈರು. ಆದರೆ ತಾವು ಗುರುಗಳಾಗಿ ಗೊತ್ತಿದ್ದು ತಪ್ಪು ಮಾಡಬಾರದು. ತಮ್ಮ ಯಾವುದೇ ಒಂದು ನಡೆ ತಪ್ಪಾಗಿದೆ ಎಂದು ಸಮುದಾಯದ ಯಾರಿಗಾದರೂ ಅನ್ನಿಸಿ ಅದನ್ನು ವ್ಯಕ್ತಪಡಿಸಿದಾಗ ತಂದೆ ಸಮಾನರಾದ ತಾವುಗಳು ಅದನ್ನು ಗುರುವಿನ ಅಂತಃಕರಣದ ಹೃದಯದಿಂದ ನೋಡಬೇಕು. ಆದರೆ ತಾವು ಸಂಘಪರಿವಾರದ ಕನ್ನಡಕದಿಂದ ನೋಡಿದ್ದು ನಮ್ಮಲ್ಲಿ ಅತೀವವಾದ ನೋವನ್ನುಂಟು ಮಾಡಿದೆ. ಇದರ ಅರ್ಥ, ತಮ್ಮ ಮೇಲೆ ಆರೋಪ ಮಾಡಿದವರ ಮೇಲೆ ತಾವು ಪೊಲೀಸ್ ದೂರು ನೀಡಿದ ಮಾತ್ರಕ್ಕೆ, ಯಾರಾದರೂ ತಮ್ಮ ಮೇಲೀನ ಆರೋಪದಿಂದ ಹಿಂದೆ ಸರಿಯುತ್ತಾರೆ, ಹೆದರುತ್ತಾರೆ ಅಥವಾ ಹೋರಾಟವನ್ನು ಕೈ ಬಿಟ್ಟು ಬಿಡುತ್ತಾರೆ ಎಂದಲ್ಲ.

ಅವರು ಹಾಗೆ ಹಿಂದೆ ಸರಿಯುವಂತೆ ನಾವು ಅವರನ್ನು ಅಷ್ಟು ಸುಲಭಕ್ಕೆ ಬಿಟ್ಟು ಕೊಡುವವರು ಅಲ್ಲ. ನಮ್ಮ ದುಃಖ ಏನೆಂದರೆ, ಸಮುದಾಯದ ಗುರುಗಳೇ ಹೀಗೆ ಅಧೀರರಾದರೆ, ಸಮುದಾಯದ ಮಾರ್ಗದರ್ಶಕರೇ ಹೀಗೆ ವಿವೇಚನೆ ಕಳೆದುಕೊಂಡರೆ, ಕೈ ಹಿಡಿದು ನಡೆಸಬೇಕಾದವರೇ ಹೀಗೆ ದಾರಿ ತಪ್ಪಿದರೆ, ಕಾಯುವವನೇ ಕೊಲ್ಲಲು ನಿಂತನೇ! ಎನ್ನುವಂತೆ ತಂದೆಯೇ ಹೀಗೆ ಕ್ರೂರನು ಅಸಹಾಯಕನು ಆಗಿಹೋದರೆ, ಗುರುವನ್ನೂ ತಂದೆಯಂತೆಯೇ ಕಾಣುವ ಸಮುದಾಯವಾದರೂ ಯಾರನ್ನು ನಂಬಬೇಕು, ಯಾರನ್ನು ಪೊರೆಯಬೇಕು. ಸರ್ವರಿಂದಲೂ ಒಂದೊಂದು ಕಲಿತು ಸರ್ವಜ್ಞ ತಾನಾದನೆಂಬಂತೆ, ಮಾದರ ಚನ್ನಯ್ಯ ಗುರು ಮಠವು ಸಮುದಾಯದ ಜನರಿಂದ ಆಗಿದ್ದೇ ಹೊರತು, ಮಠದಿಂದ ಜನರ ಸೃಷ್ಟಿ ಆಗಲಿಲ್ಲ ಎಂಬುದನ್ನು ಸಮುದಾಯದ ಗುರುಗಳಾಗಿ ತಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಇಂತಹ ಸೂಕ್ಷ್ಮಗಳನ್ನು ನಾನು ತಮಗೆ ಅರ್ಥ ಮಾಡಿಸುವ ಸಂದರ್ಭ ಬಂದಿದುಕ್ಕಾಗಿ ನನಗೆ ಅತೀವ ನೋವಾಗಿದೆ.

ಮಾದಿಗ ಸಮುದಾಯದವರೇ ಆದ ಯತಿರಾಜ್ ಬ್ಯಾಲನಹಳ್ಳಿ ಅವರು ಬರೆದಿರುವ ಬಹಿರಂಗ ಪತ್ರವು ಕೇವಲ ಅವರ ವೈಯುಕ್ತಿಕ ಪತ್ರವಾಗಿರುವುದಿಲ್ಲ. ಆ ಪತ್ರ ಮತ್ತು ಅದರಲ್ಲಿ ನಾವು ತಮ್ಮ ಮೇಲೆ ಮಾಡಿರುವ ಆರೋಪ ಹಾಗೂ ಹಕ್ಕೊತ್ತಾಯವು ಸಮುದಾಯ ಪರವಾಗಿ ಚಿಂತಿಸುವ ನಮ್ಮೆಲ್ಲರ ಒಪ್ಪಿಗೆಯಿಂದಲೇ ಬರೆದಿರುವ ಪತ್ರವಾಗಿರುತ್ತದೆ. ಸಂಬಂಧಿಸಿದಂತೆ ತಾವುಗಳು ಯಾವಾಗಲಾದರೂ ಸರಿ, ನಾವು ತಮ್ಮೊಡನೆ ಮಾತುಕತೆಗೆ ಸಿದ್ಧರಾಗಿದ್ದೇವೆ. ತಾವುಗಳು ದಯಮಾಡಿ ನಮ್ಮ ಆತಂಕ ಮತ್ತು ಕಾಳಜಿಯನ್ನು ಅರ್ಥ ಮಾಡಿಕೊಂಡು ಕೂಡಲೇ ಮಾತುಕತೆಗೆ ಮುಂದಾಗಬೇಕು ಮತ್ತು ಸಮುದಾಯವನ್ನು ಅಭಿವೃದಿಯೆಡೆಗೆ ಒಟ್ಟಿಗೆ ಕೊಂಡೊಯ್ಯುವ ಮನಸ್ಸು ಮಾಡಬೇಕು ಎಂದು ವಿನಂತಿಸುತ್ತೇನೆ.

ತಾವು ನಮ್ಮ ಮನವಿಗೆ ಸ್ಪಂದಿಸದೆ, ಸಂಘರ್ಷಕ್ಕೇ ಇಳಿಯುತ್ತೇವೆ ಎನ್ನುವುದಾದರೆ, ಇಂತಹದ್ದೇ ನಮ್ಮ ಹಕ್ಕೊತ್ತಾಯದ ಪತ್ರಗಳು, ಹೋರಾಟಗಳು, ಘೇರಾವುಗಳು ಹಾಗೂ ಇನ್ನಿತರೆ ಕಠಿಣ ಮಾದರಿಯ ನಮ್ಮ ಹೋರಾಟದ ಕಾರಣಗಳಿಂದಾಗಿ ತಾವು ನಮ್ಮ ಮೇಲೆ ಮತ್ತಷ್ಟು ಎಫ್‌ಐಆರ್‌ಗಳನ್ನು ಹಾಕಿಸಲು ಸಿದ್ದರಾಗಿರಿ ಎಂದು ತಮ್ಮಲ್ಲಿ ಅಷ್ಟೇ ಗೌರವದಿಂದ ವಿನಂತಿಸುತ್ತಿದ್ದೇವೆ.

ಇದನ್ನೂ ಓದಿ; ತುಮಕೂರು | ‘ಜೈ ಭೀಮ್’ ಹಾಡು ಹಾಕಿದ್ದಕ್ಕೆ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...