ಅನ್ಯ ಜಾತಿಯ ಬಾಲಕಿಯನ್ನು ಪ್ರೀತಿಸುತ್ತಿದ್ದ ದಲಿತ ಯುವಕನಿಗೆ ಹಲ್ಲೆ ನಡೆಸಿದ್ದರಿಂದ, ಆತ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಕುಶನೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ಕುಶನೂರ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಬಾಲಕಿಯ ತಂದೆ ಹಾಗೂ ಸಹೋದರನ ವಿರುದ್ದ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಕಮಲನಗರ ತಾಲೂಕಿನ ಬೆಡಕುಂದಾ ಗ್ರಾಮದ ಸುಮಿತ್ (19) ಮೃತ ಯುವಕ. ಬಿಎಸ್ಸಿ ಪ್ರಥಮ ವರ್ಷದಲ್ಲಿ ಓದುತ್ತಿದ್ದ ಸುಮಿತ್, ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಗೌಳಿ ಸಮುದಾಯಕ್ಕೆ ಸೇರಿದ ಬಾಲಕಿಯನ್ನು ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ.
ವರದಿಗಳ ಪ್ರಕಾರ, ಸುಮಿತ್ ಭಾನುವಾರ (ಜ.5) ಬಾಲಕಿಯೊಂದಿಗೆ ಆಕೆಯ ಮನೆಯಲ್ಲಿ ಏಕಾಂತದಲ್ಲಿದ್ದರುವ ವಿಷಯ ತಿಳಿದು, ಬಾಲಕಿಯ ಪೋಷಕರು, ಆತನನ್ನು ಹಿಡಿದು ಬಡಿಗೆ ಸೇರಿದಂತೆ ಇತರೆ ವಸ್ತುಗಳಿಂದ ಮನಬಂದಂತೆ ಥಳಿಸಿದ್ದಾರೆ. ಬಳಿಕ ಆತನ ಕುಟುಂಬದವರಿಗೆ ವಿಷಯ ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕನಿಗೆ ಮಹಾರಾಷ್ಟ್ರದ ಉದಗೀರ್ ಮತ್ತು ಲಾತೂರ್‌ನಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಮಂಗಳವಾರ (ಜ.7) ರಾತ್ರಿ ಮೃತಪಟ್ಟಿದ್ದಾರೆ. ನಗರದ ಬ್ರಿಮ್ಸ್‌ನಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬದವರಿಗೆ ಒಪ್ಪಿಸಲಾಗಿದೆ.
ಆಸ್ಪತ್ರೆ ಎದುರು ಪ್ರತಿಭಟನೆ : ಲಾತೂರ್ ಆಸ್ಪತ್ರೆಯಿಂದ ಯುವಕನ ಮೃತದೇಹವನ್ನು ತಂದ ಪೋಷಕರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಬೀದರ್ ಬ್ರಿಮ್ಸ್ ಆಸ್ಪತ್ರೆ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಎಸ್ಪಿ ಪ್ರದೀಪ್ ಗುಂಟಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿಂಧು ಹೆಚ್.ಎಸ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ.
ಇದನ್ನೂ ಓದಿ | ಸರ್ಕಾರದ ಸಂಧಾನ ವಿಫಲ : ಮುಂದುವರಿದ ‘ಆಶಾ’ ಕಾರ್ಯಕರ್ತೆಯರ ಮುಷ್ಕರ


