ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಬುಧವಾರ (ಜ.8) ಮುಖ್ಯವಾಹಿನಿಗೆ ಬಂದ ಆರು ಮಂದಿ ನಕ್ಸಲರನ್ನು ಎನ್‌ಐಎ ವಿಶೇಷ ನ್ಯಾಯಾಲಯ ಜನವರಿ 30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಗುರುವಾರ (ಜ.9) ಆದೇಶಿಸಿದೆ.
ಮುಖ್ಯವಾಹಿನಿಗೆ ಬಂದಿರುವ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ಕೆ ವಸಂತ ಮತ್ತು ಜಿಷಾ ಅವರನ್ನು ಎಸಿಪಿ ಬಾಲಾಜಿ ಸಿಂಗ್ ಅವರು ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ಎಂ ಗಂಗಾಧರ್ ಅವರ ಮುಂದೆ ಹಾಜರುಪಡಿಸಿದ್ದರು.
ಆರೋಪಿಗಳಿಂದ ಮಾಹಿತಿ ಪಡೆದ ನ್ಯಾಯಾಧೀಶರು ಎಲ್ಲರನ್ನೂ ಜನವರಿ 30ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಈ ಹಿನ್ನೆಲೆ ಪೊಲೀಸರು ಆರೋಪಿಗಳನ್ನು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಿದ್ದಾರೆ.
ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಆರು ಮಂದಿಯನ್ನೂ ಮಡಿವಾಳದ ತಾಂತ್ರಿಕ ಕೇಂದ್ರದಲ್ಲಿರಿಸಿ ಡಿವೈಎಸ್ಪಿ ಬಾಲಾಜಿ ಸಿಂಗ್ ನೇತೃತ್ವದ ತಂಡ ವಿಚಾರಣೆ ನಡೆಸಿದೆ. ಈ ವೇಳೆ ಚಿಕ್ಕಮಗಳೂರು ಪೊಲೀಸರ ಜೊತೆಗೆ ನಕ್ಸಲ್ ನಿಗ್ರಹ ಪಡೆ ಹಾಗೂ ರಾಜ್ಯ ಗುಪ್ತಚರ ಅಧಿಕಾರಿಗಳು ನಕ್ಸಲೀಯರಿಂದ ಪ್ರಾಥಮಿಕ ಮಾಹಿತಿ ಪಡೆದುಕೊಂಡರು.
ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಎನ್‍ಐಎ ವಿಶೇಷ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದರು.
ಮುಖ್ಯವಾಹಿನಿಗೆ ಬಂದಿರುವ 6 ಮಂದಿಯ ವಿರುದ್ದ ಕರ್ನಾಟಕ, ಕೇರಳ ಮತ್ತು ಮತ್ತಿತರ ಕಡೆ ಹಲವು ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ : ಬಂದೂಕು ತರಬೇತಿ ಪ್ರಕರಣ : ಶ್ರೀರಾಮ ಸೇನೆಯ 27 ಸದಸ್ಯರ ವಿರುದ್ಧ ಎಫ್ಐಆರ್


