ಅಸ್ಸಾಂನ ಜೋರ್ಹತ್ ಜಿಲ್ಲೆಯ ‘ಹೊಲ್ಲೊಂಗಪರ್ ಗಿಬ್ಬನ್ ವನ್ಯಜೀವಿ ಅಭಯಾರಣ್ಯ’ದ ಪರಿಸರ ಸೂಕ್ಷ್ಮ ವಲಯದಲ್ಲಿ ವೇದಾಂತ ಗ್ರೂಪ್‌ನ ಕೈರ್ನ್ ತೈಲ ಮತ್ತು ಅನಿಲ ಪರಿಶೋಧನಾ ಕೊರೆಯುವಿಕೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಅನುಮೋದನೆ ನೀಡಿದೆ ಎಂದು ಈಸ್ಟ್‌ಮೋಜೊ ಭಾನುವಾರ (ಜ.12) ವರದಿ ಮಾಡಿದೆ.
ಡಿಸೆಂಬರ್ 21ರಂದು ನಡೆದ ಮಂಡಳಿಯ ಸಭೆಯಲ್ಲಿ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅಧ್ಯಕ್ಷತೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
“ರಾಷ್ಟ್ರೀಯ ಹಿತಾಸಕ್ತಿ”ಯ ಆಧಾರದ ಮೇಲೆ ಅಸ್ಸಾಂನ ಅರಣ್ಯ ಇಲಾಖೆಯು ಆಗಸ್ಟ್ 2023 ರಲ್ಲಿ ಯೋಜನೆಗೆ ನಿರಾಪೇಕ್ಷಣ ನೀಡಿತ್ತು ಎಂದು ಪಿಟಿಐ ವರದಿ ಮಾಡಿದೆ.
ಮಾನವ ವಾಸಸ್ಥಳದ ಪ್ರದೇಶಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿ ಅಭಯಾರಣ್ಯಗಳಂತಹ ಸಂರಕ್ಷಿತ ಪ್ರದೇಶಗಳ ನಡುವಿನ ಬಫರ್ ವಲಯಗಳು ಅಥವಾ “ಶಾಕ್ ಅಬ್ಸರ್‌ವರ್ಸ್’ಗಳನ್ನು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಪರಿಸರ-ಸೂಕ್ಷ್ಮ ವಲಯಗಳು ಎಂದು ಘೋಷಿಸಲಾಗಿದೆ.
ಹೊಲ್ಲೊಂಗಪರ್ ಅಭಯಾರಣ್ಯವು 21 ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿದ್ದು, ಅದರ ಪರಿಸರ ಸೂಕ್ಷ್ಮ ವಲಯವು 264.9 ಚದರ ಕಿ.ಮೀ.ಗಿಂತಲೂ ಹೆಚ್ಚು ವಿಸ್ತರಿಸಿದೆ. ಡಿಸೋಯ್ ಕಣಿವೆಯ ಮೀಸಲು ಅರಣ್ಯ ಮತ್ತು ನಾಗಾಲ್ಯಾಂಡ್‌ನ ಅರಣ್ಯ ಪ್ರದೇಶಗಳೊಂದಿಗೆ ಇದು ಸಂಪರ್ಕ ಹೊಂದಿದೆ. ಈ ಪ್ರದೇಶವು ಏಳು ಪ್ರೈಮೇಟ್ ಪ್ರಭೇದಗಳಿಗೆ ನೆಲೆಯಾಗಿದೆ, ಇದರಲ್ಲಿ ಭಾರತದ ಏಕೈಕ ಮಂಗವಾದ ಅಳಿವಿನಂಚಿನಲ್ಲಿರುವ ‘ಹೂಲಾಕ್ ಗಿಬ್ಬನ್’ ಸೇರಿದೆ.
ಹೊಲ್ಲೊಂಗಪರ್ ಅಭಯಾರಣ್ಯ ಹೊರಗೆ ತೈಲ ಮತ್ತು ಅನಿಲ ಪರಿಶೋಧನೆಗೆ 4.5 ಹೆಕ್ಟೇರ್ ಭೂಮಿ ಬೇಕಾಗುತ್ತದೆ. ಇದರಲ್ಲಿ 1.4 ಹೆಕ್ಟೇರ್ ಬಾವಿ ಮತ್ತು 3 ಹೆಕ್ಟೇರ್ ಪ್ರವೇಶ ರಸ್ತೆ ಸೇರಿವೆ. ಇವು ಸಂರಕ್ಷಿತ ಪ್ರದೇಶದಿಂದ 13 ಕಿ.ಮೀ ದೂರದಲ್ಲಿವೆ.
ನವೆಂಬರ್ 15ರಂದು ಸ್ಥಳ ಪರಿಶೀಲನೆ ನಡೆಸಿದ ನಂತರ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಭಾರತೀಯ ವನ್ಯಜೀವಿ ಸಂಸ್ಥೆ ಮತ್ತು ಅಸ್ಸಾಂನ ಅರಣ್ಯ ಇಲಾಖೆಯ ಅಧಿಕಾರಿಗಳು ಹೀಗೆ ತೀರ್ಮಾನಿಸಿದರು : “ಈ ಅಭಯಾರಣ್ಯವು ಹೂಲಾಕ್ ಗಿಬ್ಬನ್‌ನ ಪ್ರಮುಖ ಆವಾಸಸ್ಥಾನವಾಗಿದೆ. ಪರಿಶೋಧನಾ ಕೊರೆಯುವಿಕೆಯು ಹೆಚ್ಚಿನ ಹಾನಿಯನ್ನುಂಟುಮಾಡದಿರಬಹುದು, ಆದರೆ ವಾಣಿಜ್ಯ ಕೊರೆಯುವಿಕೆಯನ್ನು ಅನುಮತಿಸಲಾಗುವುದಿಲ್ಲ.”
ಈ ಯೋಜನೆಯು ಕಟ್ಟುನಿಟ್ಟಾಗಿ ಪರಿಶೋಧನಾತ್ಮಕವಾಗಿದ್ದು, ಹೈಡ್ರೋಕಾರ್ಬನ್ ನಿಕ್ಷೇಪಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ ಎಂದು ವೇದಾಂತ ಗ್ರೂಪ್ ಅಧಿಕಾರಿಗಳಿಗೆ ಭರವಸೆ ನೀಡಿದೆ. ಪರಿಸರ ಸೂಕ್ಷ್ಮ ವಲಯದ ಹೊರಗೆ ಯಾವುದೇ ನಿಕ್ಷೇಪಗಳು ಪತ್ತೆಯಾದರೆ, ಮಾತ್ರ ಹೊರತೆಗೆಯುವಿಕೆಯನ್ನು ಕೈಗೊಳ್ಳಲು ಕಂಪನಿಯು ಬದ್ಧವಾಗಿದೆ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಈ ಅಭಯಾರಣ್ಯವು ಮಾನವ ಚಟುವಟಿಕೆಗಳಿಂದ ಹೆಚ್ಚುವರಿ ಒತ್ತಡಗಳನ್ನು ಎದುರಿಸುತ್ತಿದೆ, ಅದರಲ್ಲಿ ಅದರ ಮೂಲಕ ಹಾದುಹೋಗುವ ರೈಲು ಮಾರ್ಗವೂ ಸೇರಿದೆ. ಈ ಮಾರ್ಗವನ್ನು ವಿದ್ಯುದ್ದೀಕರಿಸುವ ಯೋಜನೆಗಳನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಸಹ ಶಿಫಾರಸು ಮಾಡಿದೆ.
‘ಹೊಸ ಕೃಷಿ ಮಾರುಕಟ್ಟೆ ನೀತಿ’ಗೆ ವಿರೋಧ; ಕರಡಿನ ಪ್ರತಿ ಸುಟ್ಟು ಪಂಜಾಬ್ ರೈತರಿಂದ ಪ್ರತಿಭಟನೆ


