ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಪ್ರಮುಖ ಘೋಷಣೆ ಮಾಡಿದ ಡೊನಾಲ್ಡ್ ಟ್ರಂಪ್, ಪುರುಷ ಮತ್ತು ಮಹಿಳೆ ಎಂಬ ಎರಡು ಲಿಂಗಗಳನ್ನು ಮಾತ್ರ ಗುರುತಿಸುವುದು ಅಮೆರಿಕದ ಅಧಿಕೃತ ನೀತಿಯಾಗಲಿದೆ ಎಂದು ಘೋಷಿಸಿದರು. ನಮ್ಮ ಆಡಳಿತವು ‘ಅರ್ಹತೆ ಆಧಾರಿತ’ ಮತ್ತು ‘ವರ್ಣರಹಿತ ಸಮಾಜ’ವನ್ನು ನಿರ್ಮಿಸಲು ಕೆಲಸ ಮಾಡಲಿದೆ ಎಂದು ಹೇಳಿದರು.
ಈ ಘೋಷಣೆಯು, ವಿಶೇಷವಾಗಿ ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆ (ಡಿಇಐ) ಕಾರ್ಯಕ್ರಮಗಳನ್ನು ಗುರಿಯಾಗಿರಿಸಿಕೊಂಡು, ಅಮೆರಿಕ ಸರ್ಕಾರದ ಲಿಂಗ ಮತ್ತು ವೈವಿಧ್ಯತೆಯ ನೀತಿಗಳನ್ನು ಬದಲಾಯಿಸುವ ಟ್ರಂಪ್ ಅವರ ಯೋಜನೆಗಳ ಭಾಗವಾಗಿದೆ.
ಕಳೆದ ನವೆಂಬರ್‌ನಲ್ಲಿ ಟ್ರಂಪ್ ಆಯ್ಕೆಯಾದಾಗಿನಿಂದ ಮೆಕ್‌ಡೊನಾಲ್ಡ್ಸ್, ವಾಲ್‌ಮಾರ್ಟ್ ಮತ್ತು ಫೇಸ್‌ಬುಕ್ ಮಾತೃ ಕಂಪನಿ ಮೆಟಾ ಸೇರಿದಂತೆ ಹಲವಾರು ಯುಎಸ್ ಕಂಪನಿಗಳು ತಮ್ಮ ಡಿಇಐ ಕಾರ್ಯಕ್ರಮಗಳನ್ನು ಕೊನೆಗೊಳಿಸಿವೆ ಅಥವಾ ಕಡಿಮೆ ಮಾಡಿವೆ.
“There are only two genders.”
Trump announces that from today, it will be official US policy that there are only two genders: male and female.#Trump2025 pic.twitter.com/rIGl0mHrbB
— NTV Kenya (@ntvkenya) January 20, 2025
ಇತ್ತೀಚಿನ ವರ್ಷಗಳಲ್ಲಿ ಅಮೆರಿಕದಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರ ಹಕ್ಕುಗಳು ರಾಜಕೀಯ ವಿಷಯವಾಗಿದೆ. ಕಳೆದ ಚುನಾವಣಾ ಪ್ರಚಾರದಲ್ಲಿ ಅನೇಕ ರಿಪಬ್ಲಿಕನ್ನರು ಲಿಂಗತ್ವ ಅಲ್ಪ ಸಂಖ್ಯಾತರಿಗೆ ಸಂಬಂಧಿಸಿದ ಕಾನೂನುಗಳನ್ನು ರದ್ದುಗೊಳಿಸುವ ಬಗ್ಗೆ ಮಾತನಾಡಿದ್ದರು. ಕ್ರೀಡೆಗಳಲ್ಲಿ ಲಿಂಗತ್ವ ಅಲ್ಪ ಸಂಖ್ಯಾತ ಮಹಿಳೆಯರು ಭಾಗವಹಿಸುವುದಕ್ಕೆ ವಿರೋಧಿಸಿದ್ದರು.
ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಒಂದು ದಿನದ ಮೊದಲು ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ಎಲ್ಲಾ ಪುರುಷರನ್ನು ಮಹಿಳಾ ಕ್ರೀಡೆಗಳಿಂದ ದೂರವಿಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿದ್ದ ತಮ್ಮ ಮೊದಲ ಅವಧಿಯಲ್ಲಿ ಮಿಲಿಟರಿಯಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರಿಗೆ ಅವಕಾಶ ನಿರಾಕರಿಸಿದ್ದರು.
ಡೊನಾಲ್ಡ್ ಟ್ರಂಪ್ ಅವರು ವಾಷಿಂಗ್ಟನ್, ಡಿಸಿಯಲ್ಲಿರುವ ಯುಎಸ್ ಕ್ಯಾಪಿಟಲ್‌ನಲ್ಲಿ ಅಮೆರಿಕದ 47ನೇ ಅಧ್ಯಕ್ಷರಾಗಿ ಸೋಮವಾರ (ಜ.20) ಪ್ರಮಾಣ ವಚನ ಸ್ವೀಕರಿಸಿದರು. ಅಮೆರಿಕದ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು ಟ್ರಂಪ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಟ್ರಂಪ್ ಪ್ರಮಾಣ ವಚನ ಸ್ವೀಕರಿಸುವ ಮೊದಲು, ಜೆಡಿ ವ್ಯಾನ್ಸ್ ಅವರು ಅಮೆರಿಕದ 50ನೇ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಉದ್ಘಾಟನಾ ಭಾಷಣ ಮಾಡಿದ ಟ್ರಂಪ್, ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಕೆಲಸ ಪ್ರಾರಂಭಿಸಿದರು. ಅಮೆರಿಕದ ದಕ್ಷಿಣ ಗಡಿಯಲ್ಲಿ “ರಾಷ್ಟ್ರೀಯ ತುರ್ತುಸ್ಥಿತಿ”ಯನ್ನು ಘೋಷಿಸುವುದಾಗಿ ಮತ್ತು ದೇಶದ “ವಿನಾಶಕಾರಿ ಆಕ್ರಮಣ”ವನ್ನು ತಡೆಯಲು ಸೈನ್ಯವನ್ನು ಕಳುಹಿಸುವುದಾಗಿ ಘೋಷಿಸಿದರು.
ಅಮೆರಿಕವು “ಲಕ್ಷಾಂತರ ಕ್ರಿಮಿನಲ್ ವಿದೇಶಿಯರನ್ನು” ಗಡೀಪಾರು ಮಾಡಲಿದೆ ಮತ್ತು ಕಾರ್ಟೆಲ್‌ಗಳನ್ನು ವಿದೇಶಿ ಭಯೋತ್ಪಾದಕ ಸಂಘಟನೆಗಳೆಂದು ಹೆಸರಿಸಲಿದೆ ಎಂದು ಟ್ರಂಪ್ ಒತ್ತಿ ಹೇಳಿದರು.
“ಮೊದಲು ನಾನು ದಕ್ಷಿಣ ಗಡಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸುತ್ತೇನೆ. ಎಲ್ಲಾ ಅಕ್ರಮ ಪ್ರವೇಶವನ್ನು ತಕ್ಷಣವೇ ನಿಲ್ಲಿಸಲಾಗುವುದು ಮತ್ತು ಲಕ್ಷಾಂತರ ಕ್ರಿಮಿನಲ್ ವಿದೇಶಿಯರನ್ನು ಅವರು ಬಂದ ಸ್ಥಳಕ್ಕೆ ಹಿಂದಿರುಗಿಸುವ ಪ್ರಕ್ರಿಯೆಯನ್ನು ನಾವು ಪ್ರಾರಂಭಿಸುತ್ತೇವೆ. ನಾವು ನನ್ನ ‘ಮೆಕ್ಸಿಕೊದಲ್ಲಿ ಉಳಿಯಿರಿ’ ನೀತಿಯನ್ನು ಪುನಃಸ್ಥಾಪಿಸುತ್ತೇವೆ” ಎಂದು ಟ್ರಂಪ್ ತಿಳಿಸಿದರು.
“ಸೆರೆ ಹಿಡಿದು ಬಿಡುಗಡೆ ಮಾಡುವ ಅಭ್ಯಾಸವನ್ನು ನಾನು ತ್ಯಜಿಸುತ್ತೇನೆ. ನಮ್ಮ ದೇಶದ ಮೇಲಿನ ವಿನಾಶಕಾರಿ ಆಕ್ರಮಣವನ್ನು ಹಿಮ್ಮೆಟ್ಟಿಸಲು ನಾನು ದಕ್ಷಿಣ ಗಡಿಗೆ ಸೈನ್ಯವನ್ನು ಕಳುಹಿಸುತ್ತೇನೆ. ನಾನು ಇಂದು ಸಹಿ ಮಾಡಿದ ಆದೇಶಗಳ ಅಡಿಯಲ್ಲಿ, ನಾವು ಕಾರ್ಟೆಲ್‌ಗಳನ್ನು ವಿದೇಶಿ ಭಯೋತ್ಪಾದಕ ಸಂಘಟನೆಗಳೆಂದು ಗುರುತಿಸುತ್ತೇವೆ” ಎಂದು ಟ್ರಂಪ್ ಹೇಳಿದರು.
ಪ್ರಮಾಣ ವಚನ ಸ್ವೀಕರಿಸಿದ ನಂತರ, ಟ್ರಂಪ್ ಅಮೆರಿಕದ “ಸುವರ್ಣಯುಗ” ಪ್ರಾರಂಭವಾಗಿದೆ ಎಂದು ಘೋಷಿಸಿದರು ಮತ್ತು ಇಂದು ದೇಶಕ್ಕೆ ‘ವಿಮೋಚನಾ ದಿನ’ವಾಗಿದೆ ಎಂದರು.
“ದೇಶದಲ್ಲಿನ ಹಣದುಬ್ಬರದ ಕುರಿತು ಮಾತನಾಡಿದ ಟ್ರಂಪ್, ತೈಲಕ್ಕಾಗಿ ಕೊರೆಯುವ ಅವರ ಭರವಸೆಯನ್ನು ಉಲ್ಲೇಖಿಸುವ ‘ಡ್ರಿಲ್ ಬೇಬಿ ಡ್ರಿಲ್’ ಎಂಬ ತಮ್ಮ ಹಿಂದಿನ ಘೋಷಣೆಯನ್ನು ಪುನರುಚ್ಚರಿಸಿದರು.” “ಹಣದುಬ್ಬರ ಬಿಕ್ಕಟ್ಟು ಮಿತಿಮೀರಿದ ಖರ್ಚು ಮತ್ತು ಹೆಚ್ಚುತ್ತಿರುವ ಇಂಧನ ಬೆಲೆಗಳಿಂದ ಉಂಟಾಗಿದೆ. ಈ ಸಮಸ್ಯೆ ಪರಿಹರಿಸಲು ಇಂದು ನಾನು ರಾಷ್ಟ್ರೀಯ ಇಂಧನ ತುರ್ತುಸ್ಥಿತಿಯನ್ನು ಘೋಷಿಸುತ್ತೇನೆ. ನಾವು ಡ್ರಿಲ್ ಮಾಡುತ್ತೇವೆ, ಬೇಬಿ, ಡ್ರಿಲ್ ಮಾಡುತ್ತೇವೆ” ಎಂದು ಟ್ರಂಪ್ ಹೇಳಿದರು.
ಲಾಸ್ ಏಂಜಲೀಸ್‌ನಲ್ಲಿನ ಕಾಡ್ಗಿಚ್ಚನ್ನು ಉಲ್ಲೇಖಿಸಿದ ಟ್ರಂಪ್, ಬೈಡನ್ ಆಡಳಿತ ಪರಿಸ್ಥಿತಿ ನಿಯಂತ್ರಿಸಲು ವಿಫಲವಾಗಿತ್ತು ಎಂದು ಟೀಕಿಸಿದರು. ಇನ್ನೊಮ್ಮೆ ಆ ರೀತಿಯಾಗಲು ಬಿಡುವುದಿಲ್ಲ ಎಂದರು.


