ಮಂಗಳೂರು ನಗರದ ಸಲೂನ್ ಒಂದಕ್ಕೆ ನುಗ್ಗಿದ ಹಿಂದುತ್ವ ಸಂಘಟನೆ ಕಾರ್ಯಕರ್ತರು ಪೀಠೋಪಕರಣಗಳನ್ನು ಪುಡಿಗೈದು ದಾಂಧಲೆ ನಡೆಸಿರುವ ಬಗ್ಗೆ ಗುರುವಾರ (ಜ.23) ವರದಿಯಾಗಿದೆ.
ಪ್ರಸಾದ್ ಅತ್ತಾವರ ನೇತೃತ್ವದ ರಾಮಸೇನಾ ಸಂಘಟನೆಯ ದುಷ್ಕರ್ಮಿಗಳು ಬಿಜೈ ಕೆಎಸ್ಆರ್‌ಟಿಸಿ ಬಳಿಯ ಕಲರ್ಸ್ ಸಲೂನ್‌ಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅಲ್ಲದೆ, ಸಲೂನ್‌ನ ಪುರುಷ ಸಿಬ್ಬಂದಿಗೆ ಹಲ್ಲೆ ನಡೆಸಿ, ಮಹಿಳಾ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ. ಈ ಕುರಿತ ವಿಡಿಯೋವೊಂದು ವೈರಲ್ ಆಗಿದೆ.
ವಿಡಿಯೋದಲ್ಲಿ ಐದಾರು ಮಂದಿ ಯುವಕರ ತಂಡ ಏಕಾಏಕಿ ಸಲೂನ್ ಒಳಗೆ ನುಗ್ಗಿ ಪೀಠೋಪಕರಣ, ಗಾಜು, ಕಂಪ್ಯೂಟರ್ ಸೆಟ್ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ಪುಡಿಗೈದಿರುವುದು ಮತ್ತು ವೇಶ್ಯಾವಟಿಕೆ ನಡೆಸುತ್ತಿದ್ದೀರಾ ಎಂದು ಪ್ರಶ್ನಿಸಿ ಮಹಿಳೆಯರಿಗೆ ಆವಾಜ್ ಹಾಕಿರುವ ದೃಶ್ಯಗಳಿವೆ.
ಮಹಿಳೆಯರು ಕೈ ಮುಗಿದು ಹಲ್ಲೆ ಮಾಡಬೇಡಿ ಎಂದು ಬೇಡಿಕೊಂಡಿರುವುದನ್ನೂ ವಿಡಿಯೋದಲ್ಲಿ ನೋಡಬಹುದು. ಅಲ್ಲದೆ, ದಾಂಧಲೆ ನಡೆಸಿದ ದುಷ್ಕರ್ಮಿಗಳು ಕಾಂಡೋಮ್ ಪ್ಯಾಕೆಟ್‌ಗಳನ್ನ ತೋರಿಸಿ, ಅದರೆ ಬಗ್ಗೆ ಪ್ರಶ್ನಿಸುವ ದೃಶ್ಯವಿದೆ. ಈ ವೇಳೆ ಸಲೂನ್‌ನ ಮಹಿಳಾ ಸಿಬ್ಬಂದಿ “ಅದು ಯಾರು ಇಟ್ಟಿದ್ದು?” ಎಂದು ಮರು ಪ್ರಶ್ನಿಸುವುದು ಕೇಳಿಸುತ್ತದೆ.
ಕಾನೂನು ಕೈಗೆತ್ತಿಕೊಂಡು ಅನೈತಿಕ ಪೊಲೀಸ್‌ಗಿರಿ ಮಾಡಿದ ದುಷ್ಕರ್ಮಿಗಳ ವಿರುದ್ದ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ದುಷ್ಕರ್ಮಿಗಳ ಬಂಧನಕ್ಕೆ ಸೂಚಿಸಿದ್ದೇನೆ : ಗೃಹ ಸಚಿವ ಪರಮೇಶ್ವರ್
ಸಲೂನ್‌ಗೆ ನುಗ್ಗಿ ದಾಂಧಲೆ ನಡೆಸಿದವರನ್ನು ತಕ್ಷಣ ಬಂಧಿಸಿ, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ಕೊಟ್ಟಿದ್ದೇನೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಉಡುಪಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವ ಉದ್ದೇಶಕ್ಕೆ ಸಲೂನ್ ಮೇಲೆ ದಾಳಿಯಾಗಿದೆ ಎಂಬುವುದು ಗೊತ್ತಿಲ್ಲ. ಇಂತಹ ಕೃತ್ಯಗಳು ನಡೆಯಬಾರದು. ಯಾರಿಗೂ ವ್ಯಾಪಾರ ಮಾಡಿಕೊಳ್ಳುವುದ್ದಕ್ಕೆ ಅಡ್ಡಿಪಡಿಸಬಾರದು. ಪ್ರತಿಯೊಬ್ಬರಿಗೂ ಕೆಲಸ ಮಾಡಿಕೊಳ್ಳುವ ಹಕ್ಕಿದೆ. ಯಾರು ಕೂಡ ಕಾನೂನು ಕೈಗೆ ಎತ್ತಿಕೊಳ್ಳಬಾರದು ಎಂದಿದ್ದಾರೆ.
ಕೊನೆಗೂ ‘ಪಾಶ್ ಸಮಿತಿ’ ರಚಿಸಿದ ಕರ್ನಾಟಕ ಫಿಲಂ ಚೇಂಬರ್ : ಆದರೆ ಬಹುಪಾಲು ಸದಸ್ಯರು ಪುರುಷರು!


