‘ಜನ್ಮದತ್ತ ಪೌರತ್ವ ಹಕ್ಕು’ ರದ್ದುಗೊಳಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಯಕಾರಿ ಆದೇಶಕ್ಕೆ ಅಮೆರಿಕದ ಫೆಡರಲ್ ನ್ಯಾಯಾಧೀಶರು ಗುರುವಾರ (23) ತಾತ್ಕಾಲಿಕ ತಡೆ ನೀಡಿದ್ದಾರೆ ಎಂದು ವರದಿಯಾಗಿದೆ.
ಟ್ರಂಪ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಮೊದಲ ವಿಚಾರಣೆ ನಡೆಸಿದ ಅಮೆರಿಕದ ಫೆಡರಲ್ ನ್ಯಾಯಾಧೀಶ ಜಾನ್ ಕಫ್ನೌರ್ ಅವರು, ಈ ಆದೇಶ “ಸ್ಪಷ್ಟವಾಗಿ ಅಸಂವಿಧಾನಿಕ” ಎಂದಿದ್ದಾಗಿ ವರದಿಗಳು ತಿಳಿಸಿವೆ.
ವಿಚಾರಣೆ ಸಂದರ್ಭ ನ್ಯಾಯಾಂಗ ಇಲಾಖೆಯ ಪರ ವಕೀಲ ಬ್ರೆಟ್ ಶುಮಾಟೆ ವಾದ ಮಂಡಿಸುವಾಗ ಮಧ್ಯಪ್ರವೇಶಿಸಿದ ನ್ಯಾಯಾಧೀಶ ಕಫ್ನೌರ್, “ಟ್ರಂಪ್ ಆದೇಶ ಸಾಂವಿಧಾನಿಕ ಎಂದು ಪರಿಗಣಿಸಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಆದೇಶದ ಕುರಿತು ವಿವರಿಸಲು ಸಮಯವಕಾಶ ನೀಡುವಂತೆ ವಕೀಲರು ಮನವಿ ಮಾಡಿದ್ದಾರೆ.
ಅಮೆರಿಕದ ಅರಿಝೋನಾ, ಇಲಿನಾಯ್ಸ್, ಒರೆಗಾನ್ ಮತ್ತು ವಾಷಿಂಗ್ಟನ್ ರಾಜ್ಯಗಳು ಟ್ರಂಪ್ ಆದೇಶದ ವಿರುದ್ದ ನ್ಯಾಯಾಲದ ಮೊರೆ ಹೋಗಿವೆ. ಈ ಅರ್ಜಿಗಳ ಮೊದಲ ವಿಚಾರಣೆ ನಡೆಸಿದ ನ್ಯಾಯಾಧೀಶರು ಟ್ರಂಪ್ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ. ತಡೆಯಾಜ್ಞೆ ಇಡೀ ದೇಶಕ್ಕೆ ಅನ್ವಯಿಸುತ್ತದೆ.
ಟ್ರಂಪ್ ಆದೇಶದ ವಿರುದ್ದ ದೇಶದ 22 ರಾಜ್ಯಗಳು, ವಲಸಿಗರ ಹಕ್ಕುಗಳ ಗುಂಪುಗಳು ಮತ್ತು ವೈಯಕ್ತಿಕ ಅರ್ಜಿಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿವೆ. ಈ ಪೈಕಿ ಜನ್ಮದತ್ತ ಯುಎಸ್ ಪೌರತ್ವ ಪಡೆದ ಅಟಾರ್ನಿ ಜನರಲ್‌ಗಳು, ತಮ್ಮ ಮಗು ಅಮೆರಿಕದ ನಾಗರಿಕತ್ವ ಪಡೆಯದಿರಬಹುದು ಎಂದು ಆಂತಕದಲ್ಲಿರುವ ಗರ್ಭಿಣಿಯರೂ ಸೇರಿದ್ದಾರೆ.
ವಿಚಾರಣೆ ಪ್ರಾರಂಭಿಸಿರುವ ನ್ಯಾಯಾಧೀಶ ಕಫ್ನೌರ್ ಅವರು, ಸರ್ಕಾರದ ಪರ ವಕೀಲರನ್ನು ಉದ್ದೇಶಿಸಿ “ಈ ಆದೇಶವು ಮನಸ್ಸನ್ನು ಗೊಂದಲಕ್ಕೆ ತಳ್ಳಿದೆ” ಎಂದು ಹೇಳಿದ್ದಾಗಿ ವರದಿಗಳು ತಿಳಿಸಿವೆ.
ನ್ಯಾಯಾಧೀಶರ ತಡೆಯಾಜ್ಞೆ ಆದೇಶಕ್ಕೆ ಪ್ರತಿಕ್ರಿಯಿಸಿರುವ ಸರ್ಕಾರದ ಪರ ವಕೀಲ ಶುಮಾಟೆ ಅವರು 14 ದಿನಗಳ ತಡೆಯಾಜ್ಞೆ ಬದಲು, ಆದೇಶವನ್ನು ವಿವರಿಸಲು ಸಮಯವಕಾಶ ನೀಡುವಂತೆ ಕೋರಿದ್ದಾರೆ.
ಜನ್ಮದತ್ತ ಪೌರತ್ವ ರದ್ದು ಸೇರಿದಂತೆ ಟ್ರಂಪ್ ಅವರು ಪದಗ್ರಹಣ ದಿನದಂದು ಸಹಿ ಮಾಡಿರುವ ಕಾರ್ಯಕಾರಿ ಆದೇಶಗಳು ಫೆಬ್ರವರಿ 19ರಿಂದ ಜಾರಿಗೆ ಬರಲಿವೆ. ಇದು ಅಮೆರಿಕದಲ್ಲಿ ಜನಿಸಿದ ಭಾರತೀಯರು ಸೇರಿದಂತೆ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ.
‘ಜನ್ಮಸಿದ್ದ ಪೌರತ್ವ’ ಹಕ್ಕು ರದ್ದುಗೊಳಿಸಿದ ಟ್ರಂಪ್ : ಆತಂಕದಲ್ಲಿ ಲಕ್ಷಾಂತರ ಭಾರತೀಯರು


