ಸರ್ಕಾರ ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವವರೆಗೂ ಉಪವಾಸ ಮುಂದುವರಿಸುವುದಾಗಿ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಪುನರುಚ್ಚರಿಸಿದ್ದಾರೆ. ತಮ್ಮ ಆಮರಣಾಂತ ಉಪವಾಸ ಸತ್ಯಾಗ್ರಹದ 64ನೇ ದಿನವಾದ ಇಂದು (ಜ.28) ಅವರು ಈ ಹೇಳಿಕೆ ನೀಡಿದ್ದಾರೆ.
ಫೆಬ್ರವರಿ 12ರಂದು ರೈತರ ಪ್ರತಿಭಟನೆ 2.0ದ ಮೊದಲ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದ್ದು, ದೇಶದ ವಿವಿಧ ಭಾಗಗಳಿಂದ ರೈತರು ಖಾನೌರಿ ಗಡಿಗೆ (ಪಂಜಾಬ್ ಮತ್ತು ಹರಿಯಾಣ ಗಡಿ) ಬರುವಂತೆ ದಲ್ಲೆವಾಲ್ ಆಹ್ವಾನಿಸಿದ್ದಾರೆ.
ಜನವರಿ 4ರಂದು ನಡೆದ ಕಿಸಾನ್ ಮಹಾಪಂಚಾಯತ್ ನಂತರ ಮೊದಲ ಬಾರಿಗೆ ಇಂದು ಖಾನೌರಿ ಗಡಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ದಲ್ಲೆವಾಲ್, “ನಮ್ಮ ಪ್ರತಿಭಟನೆಯ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಫೆಬ್ರವರಿ 12ರಂದು ದೇಶದ ವಿವಿಧ ಭಾಗಗಳಿಂದ ರೈತ ಸಮುದಾಯವು ಖಾನೌರಿ ಗಡಿಗೆ ಆಗಮಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಈ ಬೃಹತ್ ಸಭೆಯು ನನಗೆ ಪುನರುಜ್ಜೀವನ ನೀಡಲಿದೆ ಮತ್ತು ಮಾತುಕತೆಗಾಗಿ ಕೇಂದ್ರ ಸರ್ಕಾರದ ನಿಯೋಗದೊಂದಿಗೆ ಸಭೆಯಲ್ಲಿ ಭೌತಿಕವಾಗಿ ಉಪಸ್ಥಿತರಿರುವಂತೆ ನನಗೆ ಶಕ್ತಿಯನ್ನು ನೀಡಲಿದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ಫೆಬ್ರವರಿ 14ರಂದು ಸರ್ಕಾರ ಮಾತುಕತೆಗೆ ಮುಂದಾದ ನಂತರ ವೈದ್ಯಕೀಯ ನೆರವು ಪಡೆಯಲು ಮಾತ್ರ ಒಪ್ಪಿಕೊಂಡಿದ್ದೇನೆ ಎಂದು ದಲ್ಲೆವಾಲ್ ಹೇಳಿದ್ದಾರೆ.
“ಪ್ರಸ್ತುತ ನನ್ನ ಆರೋಗ್ಯ ಸ್ಥಿತಿಯಿಂದಾಗಿ ಚಂಡೀಗಢಕ್ಕೆ ಭೇಟಿ ನೀಡಿ ಮಾತುಕತೆ ನಡೆಸಲು ಸಾಧ್ಯವಾಗುತ್ತಿಲ್ಲ. ನಾನು ಸಾಕಷ್ಟು ಫಿಟ್ ಆಗಿದ್ದರೆ, ಚಂಡೀಗಢದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸುತ್ತೇನೆ. ಇಲ್ಲದಿದ್ದರೆ, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಮಿತಿಯ ಮುಂದೆ ಹಾಜರಾಗುತ್ತೇನೆ” ಎಂದಿದ್ದಾರೆ.
ಮೋಗಾದಲ್ಲಿ ನಡೆದ ರೈತ ಮಹಾಪಂಚಾಯತ್ ನಂತರ ಎಸ್‌ಕೆಎಂ ನಾಯಕರು ಒಗ್ಗಟ್ಟಿನ ನಿರ್ಣಯದೊಂದಿಗೆ ಖಾನೌರಿಗೆ ಬಂದಿದ್ದಾರೆ ಎಂದು ದಲ್ಲೆವಾಲ್ ಹೇಳಿದ್ದಾರೆ.
“ಐಕ್ಯರಂಗ ರಚನೆಗೆ ಇಷ್ಟು ಸಮಯ ಏಕೆ ತೆಗೆದುಕೊಳ್ಳುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಹಲವಾರು ಸುತ್ತಿನ ಸಭೆಗಳು ನಡೆಯುತ್ತಿವೆ. ನಾನು ಸಭೆಗಳಿಗೆ ಹೋಗಿಲ್ಲ, ಆದ್ದರಿಂದ ಏನು ನಡೆಯುತ್ತಿದೆ ಎಂದು ನನಗೆ ತಿಳಿದಿಲ್ಲ. ಸರ್ಕಾರದ ನಿಯೋಗವು ಎಸ್‌ಕೆಎಂ ನಾಯಕರೊಂದಿಗೆ ಮಾತುಕತೆ ನಡೆಸಿದೆ. ಆದರೆ, ಅಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಹೇಳಲಿಲ್ಲ. ಈ ಬಹು ಸಭೆಗಳು ಒಳ್ಳೆಯದಲ್ಲ. ನಾವು ಒಟ್ಟಾಗಿ ಹೋರಾಡಬೇಕು ಎಂಬುವುದು ಸಾರ್ವಜನಿಕರ ಭಾವನೆಯಾಗಿದೆ” ಎಂದು ಇದೇ ವೇಳೆ ರೈತ ನಾಯಕರಿಗೆ ದಲ್ಲೆವಾಲ್ ಕಿವಿಮಾತು ಹೇಳಿದ್ದಾರೆ.
ಇಲ್ಲಿಯವರೆಗೆ ಜನವರಿ 13 ಮತ್ತು ಜನವರಿ 18 ರಂದು ಎಸ್‌ಕೆಎಂ ಮತ್ತು ಎಸ್‌ಕೆಎಂ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ನಡುವೆ ಎರಡು ಸುತ್ತಿನ ಸಭೆಗಳು ನಡೆದಿವೆ. ಇದರಲ್ಲಿ ಎಸ್‌ಕೆಎಂ ನಾಯಕರಾದ ಜೋಗಿಂದರ್ ಸಿಂಗ್ ಉಗ್ರನ್, ಬಲ್ಬೀರ್ ಸಿಂಗ್ ರಾಜೇವಾಲ್ ಮತ್ತು ಡಾ. ದರ್ಶನ್ ಪಾಲ್ ಮತ್ತು ಎಸ್‌ಕೆಎಂ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ನಾಯಕರಾದ ಸರ್ವಾನ್ ಸಿಂಗ್ ಪಂಧೇರ್, ಮಂಜಿತ್ ರೈ, ಕಾಕಾ ಸಿಂಗ್ ಕೊಟ್ರಾ ಮತ್ತು ಅಭಿಮನ್ಯು ಕೊಹರ್ ಭಾಗವಹಿಸಿದ್ದರು.
ಪತ್ರಕರ್ತೆ ರಾಣಾ ಅಯ್ಯೂಬ್ ವಿರುದ್ಧ ಎಫ್‌ಐಆರ್ ದಾಖಲಿಸಲು ದೆಹಲಿ ನ್ಯಾಯಾಲಯ ನಿರ್ದೇಶನ


