ಡೇರಾ ಸಚ್ಚಾ ಸೌದಾ ಮುಖ್ಯಸ್ಥ, ಅತ್ಯಾಚಾರ ಅಪರಾಧಿ ಗುರ್ಮೀತ್ ರಾಮ್ ರಹೀಮ್‌ಗೆ ಪದೇ ಪದೇ ಪೆರೋಲ್ ನೀಡುತ್ತಿರುವ ಹರಿಯಾಣ ಸರ್ಕಾರದ ಕ್ರಮವನ್ನು ಅಕಲ್ ತಖ್ತ್ ಜಥೇದಾರ್ ಗಿಯಾನಿ ರಘುಬೀರ್ ಸಿಂಗ್ ತೀವ್ರವಾಗಿ ಟೀಕಿಸಿದರು, “ಇದು ಸಿಖ್ಖರಿಗೆ ಮಾಡಿದ ಅವಮಾನ ಹಾಗೂ ನ್ಯಾಯಕ್ಕೆ ಬೆದರಿಕೆ” ಎಂದು ಕರೆದಿದ್ದಾರೆ.
ಶಿಕ್ಷೆಗೊಳಗಾದ ಅಪರಾಧಿಗೆ ಪೆರೋಲ್ ನೀಡುವ ಮೂಲಕ ಸರ್ಕಾರ ಸಿಖ್ಖರನ್ನು ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುತ್ತಿದೆ. ಸಿಖ್ ಕೈದಿಗಳನ್ನು ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸಿದ್ದರೂ ದಶಕಗಳ ಕಾಲ ಜೈಲಿನಲ್ಲಿ ಇರಿಸಿದೆ ಎಂದು ಆರೋಪಿಸಿದರು.
“ರಾಜಕೀಯ ಕಾರಣಗಳಿಗಾಗಿ ಸರ್ಕಾರ ಡೇರಾ ಮುಖ್ಯಸ್ಥರನ್ನು ಪದೇಪದೆ ಬಿಡುಗಡೆ ಮಾಡುತ್ತಿರುವುದು ಕಾನೂನಿನ ಮೇಲಿನ ನಂಬಿಕೆಯನ್ನು ನಾಶಪಡಿಸುತ್ತಿದೆ. ಸಿಖ್ ಕೈದಿಗಳು ಜೈಲಿನಲ್ಲಿದ್ದರೂ, ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಗೆ ಹಲವು ಬಾರಿ ಪೆರೋಲ್ ನೀಡಲಾಗುತ್ತಿದೆ” ಎಂದರು.
ಈ ರೀತಿಯ ವರ್ತನೆ ಸಿಖ್ಖರನ್ನು ತಮ್ಮದೇ ದೇಶದಲ್ಲಿ ಪ್ರತ್ಯೇಕಿಸುತ್ತಿದೆ, ಇದು ಭಾರತದ ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡಿನ ಸಂಗತಿ. ಸಿಖ್ಖರು ಭಾರತದ ಸ್ವಾತಂತ್ರ್ಯಕ್ಕಾಗಿ ಗಮನಾರ್ಹ ತ್ಯಾಗಗಳನ್ನು ಮಾಡಿದ್ದಾರೆ, ಅವರನ್ನು ಅನ್ಯಾಯವಾಗಿ ನಡೆಸಿಕೊಳ್ಳಬಾರದು ಎಂದು ಅವರು ನೆನಪಿಸಿದರು.
ಎರಡು ಅತ್ಯಾಚಾರ ಪ್ರಕರಣಗಳಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ರಾಮ್ ರಹೀಮ್‌ಗೆ ಮಂಗಳವಾರ ಒಂದು ತಿಂಗಳ ಕಾಲ ಪೆರೋಲ್ ನೀಡಲಾಗಿದೆ. ಫೆಬ್ರವರಿ 5 ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಈ ಪೆರೋಲ್ ಬಂದಿದೆ.
ಇದನ್ನೂ ಓದಿ; ಭಗವಂತ್ ಮಾನ್ ನಿವಾಸದ ಮೇಲೆ ದೆಹಲಿ ಪೊಲೀಸರಿಂದ ದಾಳಿ: ಎಎಪಿ ಆರೋಪ


