ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಸಂದರ್ಭದಲ್ಲಿ ಮಾತನಾಡಿದ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಮತ್ತು ಸಂಸದ ಅಖಿಲೇಶ್ ಯಾದವ್, “ಮಹಾಕುಂಭ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಬಗ್ಗೆ ‘ಸರಿಯಾದ’ ಡೇಟಾವನ್ನು ಬಿಡುಗಡೆ ಮಾಡಬೇಕು. ಸರ್ಕಾರ ‘ಸರಿಯಾದ’ ಸಾವಿನ ಸಂಖ್ಯೆಯನ್ನು ಏಕೆ ಮರೆಮಾಡುತ್ತಿದೆ” ಎಂದು ಪ್ರಶ್ನಿಸಿದರು.
ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ವ್ಯವಸ್ಥೆಗಳನ್ನು ಮಾಡುವ ಬದಲು, ಆಡಳಿತವು ಕಾರ್ಯಕ್ರಮದ ಜಾಹೀರಾತು ಮಾಡುವಲ್ಲಿ ನಿರತವಾಗಿದೆ. 100 ಕೋಟಿ ಭಕ್ತರಿಗೆ ಅನುಕೂಲ ಮಾಡಿಕೊಡುವ ವ್ಯವಸ್ಥೆಗಳ ಬಗ್ಗೆ ಹೇಳಿಕೊಳ್ಳಲಾಗುತ್ತಿದೆ. ಆದರೆ, ಬಿಜೆಪಿ ಸರ್ಕಾರವು ಸಮಯಕ್ಕೆ ಸರಿಯಾಗಿ ‘ಅಮೃತ ಸ್ನಾನ’ ನಡೆಸುವಲ್ಲಿ ವಿಫಲವಾಗಿದೆ. ಮೊದಲ ಬಾರಿಗೆ, ‘ಅಮೃತ ಸ್ನಾನ’ದ ಸಂಪ್ರದಾಯವನ್ನು ಮುರಿಯಲಾಗಿದೆ” ಎಂದು ಯಾದವ್ ಹೇಳಿದರು.
ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಎರಡು ನಿಮಿಷಗಳ ಮೌನ ಆಚರಿಸಲು ಯಾದವ್ ಒತ್ತಾಯಿಸಿದರು. ಕಾಲ್ತುಳಿತದ ಬಗ್ಗೆ ಸರ್ವಪಕ್ಷ ಸಭೆಯನ್ನು ಸಹ ಅವರು ಒತ್ತಾಯಿಸಿದರು. ಸರ್ಕಾರವು ಸಾವಿನ ಸಂಖ್ಯೆಯನ್ನು ಮರೆಮಾಡುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
“ಸರ್ಕಾರವು ಸಾಕ್ಷ್ಯಗಳನ್ನು ನಾಶಮಾಡಲು ಜೆಸಿಬಿಗಳನ್ನು ಬಳಸಿದೆ. ಜನರು ಮಹಾಕುಂಭಕ್ಕೆ ತೀರ್ಥಯಾತ್ರೆಗಾಗಿ ಬಂದರು. ಆದರೆ, ತಮ್ಮ ಪ್ರೀತಿಪಾತ್ರರ ಶವಗಳೊಂದಿಗೆ ಹಿಂತಿರುಗಿದರು” ಎಂದು ಅವರು ಹೇಳಿದರು.
ಭದ್ರತೆಯನ್ನು ಸೇನೆಗೆ ಹಸ್ತಾಂತರಿಸಿ
ಲೋಕಸಭೆಯಲ್ಲಿ ಮಾತನಾಡುತ್ತಾ, ಮಹಾಕುಂಭ ಭದ್ರತೆಯನ್ನು ಸೇನೆಗೆ ಹಸ್ತಾಂತರಿಸುವಂತೆ ಅವರು ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು. ‘ಡಬಲ್ ಎಂಜಿನ್‌ಗಳು’ (ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು) ಪರಸ್ಪರ ಡಿಕ್ಕಿ ಹೊಡೆಯುತ್ತಿವೆ ಎಂದರು.
ಇದೇ ಸಂದರ್ಭದಲ್ಲಿ ಚೀನಾದ ಭೂ ಅತಿಕ್ರಮಣ ಸಮಸ್ಯೆಯನ್ನು ಕೆದಕಿದ ಅಖಿಲೇಶ್ ಯಾದವ್, “ಚೀನಾ ಭಾರತದ ಭೂಮಿಯನ್ನು ಅತಿಕ್ರಮಿಸಿದೆ. ಇದು ಎಲ್ಲರಿಗೂ ತಿಳಿದಿದೆ. ನಾವು ನಮ್ಮ ಭೂಮಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಚೀನಾ ನಮ್ಮ ಭೂಮಿ ಮತ್ತು ನಮ್ಮ ಮಾರುಕಟ್ಟೆ ಎರಡನ್ನೂ ಕಸಿದುಕೊಳ್ಳುತ್ತಿದೆ” ಎಂದರು.
ಇದನ್ನೂ ಓದಿ; ನ್ಯಾಕ್ ವರದಿಗಾಗಿ ₹1.8 ಕೋಟಿ ಬೇಡಿಕೆ ಆರೋಪ; ಜೆಎನ್‌ಯು ಪ್ರಾಧ್ಯಾಪಕ ಅಮಾನತು


