ಕಾಂಗ್ರೆಸ್ ಚುನಾವಣಾ ಭರವಸೆಯನ್ನು ಒಂದು ವರ್ಷದೊಳಗೆ ಈಡೇರಿಸಲಾಗಿದೆ ಎಂದು ಪ್ರತಿಪಾದಿಸಿರುವ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ಜಾತಿ ಸಮೀಕ್ಷೆಯನ್ನು ಮಂಡಿಸಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅವರು, ಐತಿಹಾಸಿಕವಾಗಿ ತಳಮಟ್ಟದಲ್ಲಿರುವ ಹಿಂದುಳಿದ ವರ್ಗಗಳಿಂದ “ಅವರನ್ನು ಎಣಿಕೆ ಮಾಡಬೇಕು” ಎಂಬ ಬೇಡಿಕೆ ಇದೆ ಎಂದು ಹೇಳಿದ್ದಾರೆ.
“ಯಾವುದೇ ನೀತಿ ಜಾರಿಗೆ ಬರಲು, ಅದನ್ನು ಬೆಂಬಲಿಸಲು ದತ್ತಾಂಶ ಇರಬೇಕು. ಜಾತಿ ಸಮೀಕ್ಷೆಯ ಅಂಕಿ-ಅಂಶವನ್ನು ರಾಜ್ಯದಲ್ಲಿ ಸಾಮಾಜಿಕ-ರಾಜಕೀಯ ಬದಲಾವಣೆಗಳನ್ನು ತರಲು ಬಳಸಲಾಗುತ್ತದೆ. ಇದು ತೆಲಂಗಾಣದ ಒಂದು ಐತಿಹಾಸಿಕ ಕ್ಷಣ.” ಎಂದು ಸಿಎಂ ರೆಡ್ಡಿ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಭಾರತದಾದ್ಯಂತ ಕೊನೆಯ ಜಾತಿ ಜನಗಣತಿಯನ್ನು 1931 ರಲ್ಲಿ ನಡೆಸಲಾಯಿತು ಎಂದು ಅವರು ಹೇಳಿದ್ದಾರೆ. “ಭಾರತದ ಸ್ವಾತಂತ್ರ್ಯದ 75 ವರ್ಷಗಳ ನಂತರ, ಯಾರೂ ಹಿಂದುಳಿದ ವರ್ಗಗಳನ್ನು ಎಣಿಸಲು ಪ್ರಯತ್ನಿಸಲಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ವಿವಿಧ ಜಾತಿಗಳನ್ನು ಎಣಿಸುವುದಾಗಿ ಭರವಸೆ ನೀಡಿದರು. ನಾವು ಆ ಭರವಸೆಯನ್ನು ಈಡೇರಿಸಿದ್ದೇವೆ.” ಎಂದು ಅವರು ಹೇಳಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪೊನ್ನಂ ಪ್ರಭಾಕರ್ ಈ ಸಮೀಕ್ಷೆಯು “ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮಾರ್ಗಸೂಚಿಯಾಗಿ” ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ. ರಾಜ್ಯದ ಸಾಮಾಜಿಕ-ಆರ್ಥಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಮತ್ತು ಜಾತಿ ಸಮೀಕ್ಷೆಯ ವರದಿಯ ಮಾಹಿತಿಯ ಪ್ರಕಾರ, ತೆಲಂಗಾಣದ ಜನಸಂಖ್ಯೆಯಲ್ಲಿ ಹಿಂದುಳಿದ ವರ್ಗಗಳು ಶೇ. 56.33 ರಷ್ಟಿದ್ದಾರೆ ಎಂದು ರೆಡ್ಡಿ ಹೇಳಿದ್ದಾರೆ. ತೆಲಂಗಾಣ
ಸಮೀಕ್ಷೆಯ ಪ್ರಕಾರ, ಪರಿಶಿಷ್ಟ ಜಾತಿಗಳು (SC) ಜನಸಂಖ್ಯೆಯಲ್ಲಿ ಶೇ. 17.43 ರಷ್ಟಿದ್ದರೆ, ಪರಿಶಿಷ್ಟ ಪಂಗಡಗಳು (ST) ಶೇ. 10.45 ರಷ್ಟಿದ್ದಾರೆ. ಇತರ ಜಾತಿಗಳು (OC) ಜನಸಂಖ್ಯೆಯ ಶೇ. 15.79 ರಷ್ಟಿವೆ. ಸಂಪೂರ್ಣ ಸಂಖ್ಯೆಯಲ್ಲಿ, ರಾಜ್ಯದಲ್ಲಿ ಹಿಂದುಳಿದ ವರ್ಗಗಳ (BC) ಜನಸಂಖ್ಯೆಯು 1,99,85,767 ಆಗಿದ್ದು, ಇದರಲ್ಲಿ 35,76,588 BC ಮುಸ್ಲಿಮರು ಸೇರಿದ್ದಾರೆ. ಎಸ್‌ಸಿ ಜನಸಂಖ್ಯೆ 61,84,319 ಮತ್ತು ಎಸ್‌ಟಿ ಜನಸಂಖ್ಯೆ 37,05,929. ಹಾಗೂ ಇತರ ಜಾತಿಗಳ ಜನಸಂಖ್ಯೆ 44,21,115 ಇವೆ.
ಜಾತಿ ಸಮೀಕ್ಷೆ ವರದಿ ಹೊರಬಂದಾಗಿನಿಂದ ತೆಲಂಗಾಣದ ವಿರೋಧ ಪಕ್ಷಗಳಾದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮತ್ತು ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದ್ದು, ಹಿಂದುಳಿದ ವರ್ಗದ ಜನಸಂಖ್ಯೆಯನ್ನು “ಕಡಿಮೆ ಎಣಿಕೆ” ಮಾಡಲಾಗಿದೆ ಎಂದು ಹೇಳಿದೆ. ರಾಜ್ಯದಲ್ಲಿ ಹಿಂದುಳಿದ ವರ್ಗ ಮುಸ್ಲಿಂ ಸೇರಿದಂತೆ ಹಿಂದುಳಿದ ಜಾತಿಗಳ ಜನಸಂಖ್ಯೆಯು 60% ಕ್ಕಿಂತ ಹೆಚ್ಚಿರಬೇಕಿತ್ತು ಎಂದು ಎರಡೂ ಪಕ್ಷಗಳು ಹೇಳಿಕೊಳ್ಳುತ್ತಿವೆ.
ವಿಧಾನಸಭೆಯಲ್ಲಿ ಮಾತನಾಡಿದ ಬಿಆರ್‌ಎಸ್ ನಾಯಕ ತಲಾಸಾನಿ ಶ್ರೀನಿವಾಸ್ ಯಾದವ್, “2011 ರ ಜನಗಣತಿಯ ತುಲನಾತ್ಮಕ ಅಂಕಿಅಂಶಗಳನ್ನು ನೋಡಿದರೆ ಹಿಂದುಳಿದ ವರ್ಗಗಳ ಕಡಿಮೆ ಎಣಿಕೆ ಮಾಡಲಾಗಿದೆ” ಎಂದು ಹೇಳಿದ್ದಾರೆ.
ಇದನ್ನೂಓದಿ: ‘ಕುಂಭಮೇಳದ ಕಾಲ್ತುಳಿತ ಅಷ್ಟು ದೊಡ್ಡದಲ್ಲ..’; ಅಖಿಲೇಶ್ ಯಾದವ್ ಆರೋಪಕ್ಕೆ ಹೇಮಾ ಮಾಲಿನಿ ಪ್ರತಿಕ್ರಿಯೆ
‘ಕುಂಭಮೇಳದ ಕಾಲ್ತುಳಿತ ಅಷ್ಟು ದೊಡ್ಡದಲ್ಲ..’; ಅಖಿಲೇಶ್ ಯಾದವ್ ಆರೋಪಕ್ಕೆ ಹೇಮಾ ಮಾಲಿನಿ ಪ್ರತಿಕ್ರಿಯೆ


