ಕೇಂದ್ರ ಬಜೆಟ್ ಅಧಿವೇಶನದ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಸಂದರ್ಭದಲ್ಲಿ ರಾಜ್ಯಸಭೆ ಬಿಸಿಬಿಸಿ ಕ್ಷಣಗಳಿಗೆ ಸಾಕ್ಷಿಯಾಯಿತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಭಾಷಣದ ಸಮಯದಲ್ಲಿ ಅಡ್ಡಿಪಡಿಸಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ನೀರಜ್ ಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸರ್ಕಾರವು ವಿವಿಧ ವಿಷಯಗಳನ್ನು ನಿರ್ವಹಿಸುವ ರೀತಿಯನ್ನು ಟೀಕಿಸುತ್ತಾ, ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ಡಾಲರ್ ₹87 ದಾಟಿದ ನಂತರ ಹಣದುಬ್ಬರದ ದರವನ್ನು ಪ್ರಸ್ತಾಪಿಸಿದಾಗ ವಾಗ್ವಾದ ಪ್ರಾರಂಭವಾಯಿತು.
“2013 ರಲ್ಲಿ, ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು, ಡಾಲರ್‌ಗೆ ₹60 ಇದ್ದಾಗ ರೂಪಾಯಿ ಐಸಿಯು (ತೀವ್ರ ನಿಗಾ ಘಟಕ)ದಲ್ಲಿದೆ ಎಂದು ಹೇಳಿದ್ದರು. ಈಗ, ಡಾಲರ್ ₹87 ದಾಟಿದೆ” ಎಂದು ಅವರು ಹೇಳಿದರು.
ಖರ್ಗೆ ಮಾತನಾಡುತ್ತಿರುವಾಗ, ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರ ನೀರಜ್ ಶೇಖರ್ ಅಡ್ಡಿಪಡಿಸಿದರು. ಈ ಅಡಚಣೆಯಿಂದ ಕೋಪಗೊಂಡ ಖರ್ಗೆ, “ನಿಮ್ಮ ತಂದೆಯೂ ನನ್ನೊಂದಿಗೆ ಇಲ್ಲಿದ್ದರು; ನೀವು ಏನು ಮಾತನಾಡುತ್ತಿದ್ದೀರಿ? ಕುಳಿತುಕೊಳ್ಳಿ” ಎಂದು ಮರುಪ್ರಶ್ನೆ ಹಾಕಿದರು.
ಸದನದ ಸದಸ್ಯರಲ್ಲಿ ಮಾತಿನ ಚಕಮಕಿ ನಡೆದು, ಸಭಾಪತಿ ಜಗದೀಪ್ ಧಂಖರ್ ಸಂಯಮದಿಂದ ಇರಬೇಕೆಂದು ಒತ್ತಾಯಿಸಿದರು.
ಶೇಖರ್ ಅವರ ವಿರುದ್ಧ ಖರ್ಗೆ ಅವರ ಆಕ್ರೋಶ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಬಿಜೆಪಿ ಸದಸ್ಯರಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವೀಡಿಯೊದಲ್ಲಿ ಶೇಖರ್ ಕಾಣಿಸುತ್ತಿಲ್ಲ. ಆದರೆ, ಸಭಾಪತಿಗಳು ಕುಳಿತುಕೊಳ್ಳುವಂತೆ ಹೇಳುವಾಗ ಅವರ ಹೆಸರು ಕರೆಯುವುದನ್ನು ಕೇಳಬಹುದು.
ಇದನ್ನೂ ಓದಿ; ಬಡತನ, ನಿರುದ್ಯೋಗದಿಂದಾಗಿ ಜನರು ಮಹಾನಗರಗಳಿಗೆ ವಲಸೆ ಹೋಗುತ್ತಿದ್ದಾರೆ : ಕೇಂದ್ರ ಸಚಿವ ನಿತಿನ್ ಗಡ್ಕರಿ


