ಪರಿಶಿಷ್ಟ ಜಾತಿಯಲ್ಲಿ (ಎಸ್‌ಸಿ) ಉಪ-ವರ್ಗೀಕರಣಕ್ಕೆ ಅಥವಾ ಎಸ್‌ಸಿ ಒಳ ಮೀಸಲಾತಿ ಜಾರಿಗೊಳಿಸಲು ನಮ್ಮ ಸರ್ಕಾರ ಬದ್ದವಾಗಿದೆ. ಒಳ ಮೀಸಲಾತಿ ಜಾರಿಗೊಳಿಸಿದ ಮೊದಲ ರಾಜ್ಯ ನಮ್ಮದಾಗಲಿದೆ ಎಂದು ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಪುನರುಚ್ಚರಿಸಿದ್ದಾರೆ.
ಶಾಸಕರು, ಸಂಸದರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಮೇಯರ್‌ಗಳು ಮತ್ತು ಇತರ ಸಾರ್ವಜನಿಕ ಪ್ರತಿನಿಧಿಗಳು ಹಾಗೂ ಗ್ರೂಪ್-1 ಸರ್ಕಾರಿ ಸೇವೆ ಮತ್ತು ಅಂತಹುದೇ ಹುದ್ದೆಗಳಲ್ಲಿರುವವರನ್ನು ಮೀಸಲಾತಿಯ ಪ್ರಯೋಜನಗಳಿಂದ ಹೊರಗಿಡಬೇಕೆಂದು ಸೂಚಿಸುವ ಮೀಸಲಾತಿಯೊಳಗೆ ಕೆನೆಪದರವನ್ನು ಪರಿಚಯಿಸುವ ಏಕಸದಸ್ಯ ನ್ಯಾಯಾಂಗ ಆಯೋಗದ ಶಿಫಾರಸನ್ನು ಸರ್ಕಾರ ತಿರಸ್ಕರಿಸಿದೆ ಎಂದು ರೇವಂತ್ ರೆಡ್ಡಿ ತಿಳಿಸಿದ್ದಾರೆ.
ಮಂಗಳವಾರ (ಫೆ.4) ವಿಧಾನಸಭೆಯಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಮೀಮ್ ಅಖ್ತರ್ ಅವರ ಆಯೋಗ ಸಲ್ಲಿಸಿದ ವರದಿಯನ್ನು ಮಂಡಿಸಿದ ರೇವಂತ್ ರೆಡ್ಡಿ, ತೆಲಂಗಾಣದಲ್ಲಿ ಪರಿಶಿಷ್ಟ ಜಾತಿಗಳಲ್ಲಿ 59 ಉಪಜಾತಿಗಳನ್ನು ಸಮಿತಿ ಗುರುತಿಸಿದೆ ಮತ್ತು ಅಸ್ತಿತ್ವದಲ್ಲಿರುವ ಶೇಖಡ 15 ಮೀಸಲಾತಿಯೊಳಗೆ ಅವುಗಳನ್ನು ಮೂರು ಗುಂಪುಗಳಾಗಿ ವರ್ಗೀಕರಿಸಲು ಶಿಫಾರಸು ಮಾಡಿದೆ ಎಂದು ತಿಳಿಸಿದ್ದಾರೆ.
Live: Third Meeting of the Fourth Session of Third Telangana Legislative Assembly Day – 01 https://t.co/RqNWTiRb17
— Revanth Reddy (@revanth_anumula) February 4, 2025
ಆಯೋಗದ ಶಿಫಾರಸ್ಸಿನಂತೆ ಶೇಖಡ 3.288 ಜನ ಸಂಖ್ಯೆಯ ಪಾಲನ್ನು ಹೊಂದಿರುವ 15 ಉಪ ಜಾತಿಗಳನ್ನು ಒಳಗೊಂಡಿರುವ ಗುಂಪು 1 ಶೇಖಡ 1 ಮೀಸಲಾತಿ ಪಡೆಯುತ್ತದೆ. ಶೇಖಡ 62.748 ಜನಸಂಖ್ಯೆಯ ಪಾಲು ಹೊಂದಿರುವ 18 ಉಪಜಾತಿಗಳ ಗುಂಪು 2 ಶೇಖಡ 9 ಮೀಸಲಾತಿ ಪಡೆಯುತ್ತದೆ ಮತ್ತು ಶೇ 33.963 ಜನ ಸಂಖ್ಯೆಯ ಪಾಲನ್ನು ಹೊಂದಿರುವ 26 ಉಪಜಾತಿಗಳನ್ನು ಒಳಗೊಂಡಿರುವ ಗುಂಪು 3 ಶೇಖಡ 5 ಮೀಸಲಾತಿ ಪಡೆಯುತ್ತದೆ ಎಂದು ತಿಳಿಸಿದ್ದಾರೆ.
ಜಾತಿಗಣತಿ ವರದಿ ಮತ್ತು ಒಳ ಮೀಸಲಾತಿ ವರದಿಯನ್ನು ಮಂಡಿಸಿರುವ ಕ್ಷಣವನ್ನು ಇದನ್ನು ಐತಿಹಾಸಿಕ ಎಂದು ಬಣ್ಣಿಸಿದ ರೇವಂತ್ ರೆಡ್ಡಿ, ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಬೇಕು ಎನ್ನುವುದು ಮೂರು ದಶಕಗಳ ಬೇಡಿಕೆ ಎಂದಿದ್ದಾರೆ. ತಮ್ಮ ಸರ್ಕಾರದ ಕ್ರಮವನ್ನು ಕೊಂಡಾಡಿದ್ದಾರೆ.
ಸುಪ್ರೀಂ ಕೋರ್ಟ್‌ನ ನಿರ್ದೇಶನಗಳಿಗೆ ಅನುಗುಣವಾಗಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನಮ್ಮ ಸರ್ಕಾರ ದೃಢ ನಿಶ್ಚಯ ಹೊಂದಿದೆ ಎಂದು ರೇವಂತ್ ರೆಡ್ಡಿ ಒತ್ತಿ ಹೇಳಿದರು. ಅಭಿವೃದ್ದಿ ಯೋಜನೆಗಳು ಅತ್ಯಂತ ತಳಮಟ್ಟದಲ್ಲಿರುವವರಿಗೆ ತಲುಪುವಂತೆ ನೋಡಿಕೊಳ್ಳುವ ಮೂಲಕ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ದೃಷ್ಟಿಕೋನದಲ್ಲಿ ನಾವು ಬದ್ಧತೆ ಮೆರೆದಿದ್ದೇವೆ ಎಂದು ಹೇಳಿದ್ದಾರೆ.
ಒಂದು ಸಮಯದಲ್ಲಿ ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದರೆ ನಾನು ಉಚ್ಚಾಟನೆ ಆಗುವ ಸಾಧ್ಯತೆ ಇತ್ತು. ಆದರೆ, ಇಂದು ಸದನದ ನಾಯಕನಾಗಿ ನಾನು ಈ ವರದಿಯನ್ನು ಮಂಡಿಸಲು ಹೆಮ್ಮೆ ಪಡುತ್ತೇನೆ. ಈ ನಿರ್ಣಾಯಕ ಹೆಜ್ಜೆಯನ್ನು ಬೆಂಬಲಿಸುವಂತೆ ನಾನು ಎಲ್ಲಾ ಸದಸ್ಯರನ್ನು ಕೋರುತ್ತೇನೆ ಎಂದು ವರದಿ ಮಂಡನೆ ಸಂದರ್ಭ ರೇವಂತ್ ರೆಡ್ಡಿ ಮಾತನಾಡಿದ್ದಾರೆ.
ಸಿಎಂ ರೇವಂತ್ ರೆಡ್ಡಿ ವಿಧಾನಸಭೆಯಲ್ಲಿ ಜಾತಿ ಜನಗಣತಿ ವರದಿಯನ್ನು ಮಂಡಿಸಿದ ಬಳಿಕ ಸದನದಲ್ಲಿ ಗದ್ದಲ ಉಂಟಾಗಿತ್ತು. ಪ್ರತಿಪಕ್ಷ ಬಿಆರ್‌ಎಸ್‌ನ ಸದಸ್ಯರು ಹಲವು ದೋಷಗಳು ಮತ್ತು ವ್ಯತ್ಯಾಸಗಳನ್ನು ಉಲ್ಲೇಖಿಸಿ ವರದಿಯನ್ನು ವಿರೋಧಿಸಿದ್ದಾರೆ.
ಸರ್ಕಾರವು ತಮ್ಮ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದ ಪ್ರತಿಪಕ್ಷ ಶಾಸಕರು, ಈ ವಿಷಯದ ಬಗ್ಗೆ ನ್ಯಾಯಯುತ ಚರ್ಚೆಗೆ ಒತ್ತಾಯಿಸಿದ್ದಾರೆ ಮತ್ತು ಪ್ರತಿಭಟಿಸಿ ಸದನದಿಂದ ಹೊರ ನಡೆದಿದ್ದಾರೆ.
ಮಾದಿಗ ಸಮುದಾಯದ ಹಲವಾರು ಕಾಂಗ್ರೆಸ್ ಶಾಸಕರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದರು. ಒಳ ಮೀಸಲಾತಿ ಜಾರಿಗೆ ತರುವ ಸರ್ಕಾರದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ತೆಲಂಗಾಣ | ತಮ್ಮದೇ ಸರ್ಕಾರದ ಜಾತಿ ಸಮೀಕ್ಷೆ ವರದಿಯನ್ನು ಸುಟ್ಟು ಹಾಕಿದ ಕಾಂಗ್ರೆಸ್ ಎಂಎಲ್‌ಸಿ!


