ರೈತ ಸಂಘಟನೆಗಳ ತೀವ್ರ ಪ್ರತಿರೋಧದಿಂದಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಿಂಪಡೆದಿದ್ದ ಮೂರು ಕೃಷಿ ಕಾಯ್ದೆಗಳ ಮೂಲಕವೇ ರೈತರ ಆದಾಯ ಹೆಚ್ಚಿಸಲು ಶಿಫಾರಸು ನೀಡಿ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಸೂಚಿಸಿರುವುದಾಗಿ ಮಂಗಳವಾರ (ಫೆ.4) ವರದಿಯಾಗಿದೆ.
ಈ ಬೆನ್ನಲ್ಲೇ ರಾಜ್ಯದ ರೈತ ಸಂಘಟನೆಗಳ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತುರ್ತು ಬಹಿರಂಗ ಪತ್ರ ಬರೆದಿರುವ ಸಂಯುಕ್ತ ಹೋರಾಟ ಸಮಿತಿ ಸರ್ಕಾರದ ನಿಲುವು ಸ್ಪಷ್ಟಪಡಿಸುವಂತೆ ಒತ್ತಾಯಿಸಿದೆ. ಹೋರಾಟದ ಎಚ್ಚರಿಕೆ ನೀಡಿದೆ.
ಪತ್ರಿಕೆಯ ವರದಿಯನ್ನು ಓದಿ ನಾವು ಆಘಾತಕ್ಕೊಳಗಾಗಿದ್ದೇವೆ. ಸರ್ಕಾರದ ನಿಲುವು ಇದೇ ಆಗಿದ್ದರೆ, ಇದು ರೈತ ಕುಲಕ್ಕೆ ಮಾಡುತ್ತಿರುವ ಮಹಾದ್ರೋಹವಾಗಿದೆ. ನಾವಿದನ್ನು ಉಗ್ರವಾಗಿ ಪ್ರತಿಭಟಿಸಿ ಬೀದಿಗೆ ಇಳಿಯಬೇಕಾಗುತ್ತದೆ. ನಿಮ್ಮಿಂದ ಸ್ಪಷ್ಟನೆ ಪಡೆಯಲು ಈ ಬಹಿರಂಗ ಪತ್ರ ಬರೆಯುತ್ತಿದ್ದೇವೆ ಎಂದು ಸಮಿತಿಯ ಪ್ರಮುಖರು ಸಿಎಂಗೆ ತಿಳಿಸಿದ್ದಾರೆ.
“ರೈತರ ಆದಾಯವನ್ನು ದ್ವಿಗುಣಗೊಳಿಸುವ ಬೋಗಸ್ ಮಾತುಗಳೊಂದಿಗೆ ಬಿಜೆಪಿ ಪಕ್ಷ ಕೃಷಿ ಭೂಮಿಯನ್ನು, ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಸಂಪೂರ್ಣವಾಗಿ ಕಾರ್ಪೋರೇಟ್ ಕಂಪನಿಗಳಿಗೆ ಹಸ್ತಾಂತರಿಸುವ ಹುನ್ನಾರ ನಡೆಸುತ್ತಿದೆ. ಅದರ ಭಾಗವಾಗಿ ಮೂರು ಕರಾಳ ಕೃಷಿ ಕಾನೂನುಗಳನ್ನು ಜಾರಿಗೊಳಿಸಿತ್ತು. ದೇಶದ 562 ರೈತ ಸಂಘಟನೆಗಳು ಒಂದು ವರ್ಷಕ್ಕೂ ಹೆಚ್ಚು ಸಮಯ ನಿರಂತರ ಹೋರಾಟ ನಡೆಸಿದ ಪರಿಣಾಮವಾಗಿ ಕೇಂದ್ರ ಸರ್ಕಾರ ಮೂರು ಕಾನೂನುಗಳನ್ನು ವಾಪಸ್ ಪಡೆಯಿತು. ಈ ಹೋರಾಟದ ಸಂದರ್ಭದಲ್ಲಿ 700ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡಿದ್ದಾರೆ” ಎಂದು ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
“ರೈತರ ಹೋರಾಟಕ್ಕೆ ಮಣಿದ ಸರ್ಕಾರ ಮೂರು ಕಾನೂನುಗಳನ್ನು ಹಿಂಪಡೆಯುದಾಗಿ ಹೇಳಿತ್ತು. ಆದರೆ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಹಿಂಬಾಗಿಲ ಮೂಲಕ ಅದನ್ನು ಜಾರಿಗೊಳಿಸಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಭೂ ಸುಧಾರಣೆ, ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ಮಾಡಿರುವುದು ಅದರ ಭಾಗವಾಗಿಯೇ. ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ರೈತರ ಹೋರಾಟಕ್ಕೆ ಬೆಂಬಲ ಕೊಟ್ಟಿತ್ತು. ಇಬ್ಬರೂ ಸೇರಿ ಹೋರಾಡೋಣ ಎಂದಿತ್ತು. 2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದ ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುತ್ತೇವೆ, ರೈತರ ಮೇಲೆ ಹಾಕಿರುವ ರಾಜಕೀಯ ಪ್ರೇರಿತ ಪ್ರಕರಣಗಳನ್ನು ವಾಪಸ್ ಪಡೆಯುತ್ತೇವೆ, ಎಂಎಸ್‌ಪಿ ಜಾರಿಗೊಳಿಸುತ್ತೇವೆ ಮತ್ತು ಬಡ್ಡಿ ರಹಿತ ಸಾಲದ ಪ್ರಮಾಣ ಹೆಚ್ಚಿಸುತ್ತೇವೆ ಎಂಬುವುದಾಗಿ ಭರವಸೆ ನೀಡಿತ್ತು” ಎಂದು ನೆನಪಿಸಲಾಗಿದೆ.
“ಬಿಜೆಪಿಯ ಕಾಯ್ದೆಗಳನ್ನು ಹಾಗೆಯೇ ಮುಂದುವರಿಸಿದ್ದೀರಿ, ಬಿಜೆಪಿ ನೇಮಿಸಿದ್ದ ಬೆಲೆ ಆಯೋಗವನ್ನು ಮುಂದಿನ ಮೂರು ವರ್ಷಗಳಿಗೆ ವಿಸ್ತರಿಸಿದ್ದೀರಿ, ಬಿಜೆಪಿ ನೀಡಿದ್ದ ಮಾರ್ಗಸೂಚಿಗಳನ್ನೇ ನಿಮ್ಮ ಸರ್ಕಾರವೂ ನೀಡಿದೆ. ಅದರಲ್ಲಿ ಕೇಂದ್ರ ಸರ್ಕಾರ ಸುಗ್ರಿವಾಜ್ಞೆ ಮಾಡಿದ್ದ, ರೈತ ಹೋರಾಟದಿಂದ ಹಿಂಪಡೆದಿರುವ ತಿದ್ದುಪಡಿ ಕಾಯ್ದೆಗಳನ್ನೇ ಉಲ್ಲೇಖಿಸಿ, ಇವುಗಳನ್ನು ಅನುಷ್ಠಾನ ಮಾಡಲು ಏನೆಲ್ಲಾ ಮಾಡಬೇಕು ಎಂದು ಅಧ್ಯಯನ ಮಾಡಿ ಶಿಫಾರಸು ಮಾಡಿ ಎಂದು ಕೇಳಿದ್ದೀರಿ. ಎಂಎಸ್‌ಪಿ ಜಾರಿ ಮಾಡುವ, ಸರ್ಕಾರ ರೈತರ ಸಹಾಯಕ್ಕೆ ಬರುವ ಒಂದೇ ಒಂದು ಮಾತೂ ಇದರಲ್ಲಿ ಇಲ್ಲ. ಇದು ನಮಗೆ ಅಪಾರ ನೋವು ತಂದಿದೆ. ಇದಕ್ಕೆ ಕೂಡಲೇ ಸರ್ಕಾರ ಉತ್ತರ ನೀಡಲೇಬೇಕಿದೆ” ಎಂದು ಸಂಯುಕ್ತ ಹೋರಾಟ ಸಮಿತಿಯ ಪತ್ರದಲ್ಲಿ ಒತ್ತಾಯಿಸಲಾಗಿದೆ.
ತೆಲಂಗಾಣ | ಎಸ್‌ಸಿ ಒಳ ಮೀಸಲಾತಿ ಜಾರಿಗೆ ಬದ್ದ ಎಂದ ಸಿಎಂ ರೇವಂತ್ ರೆಡ್ಡಿ : ಕೆನೆಪದರ ಪ್ರಸ್ತಾವನೆ ತಿರಸ್ಕಾರ


